ಕೆಳ ಹಂತದ ಅಧಿಕಾರಿಗಳಿಗೆ ವಿಡಿಯೊ ಕಾನ್ಫರೆನ್ಸ್ ಆಡಳಿತ
ಕ.ಪ್ರ.ವಾರ್ತೆ ಮಂಗಳೂರು ಆ. 12
ದಕ ಜಿಲ್ಲೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ಈಚೆಗಷ್ಟೆ ಅಧಿಕಾರ ವಹಿಸಕೊಂಡ ತುಳಸಿ ಮದ್ದಿನೇನಿ ಈಗ ಆಡಳಿತದಲ್ಲಿ ಖದರ್ ತೋರಿಸಲಾರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೆಳಹಂತದ ಅಧಿಕಾರಿ, ಸಿಬ್ಬಂದಿ ವರ್ಗ ಜತೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಪದೇ ಪದೇ ಮೀಟಿಂಗ್ಗೆ ಬರುವ ಪ್ರಮೇಯ ತಪ್ಪಿಸಿದ್ದಾರೆ.
ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಜಿಲ್ಲೆ ಹಾಗೂ ವಿಭಾಗ ಮಟ್ಟದಲ್ಲಿ ನಡೆಯುತ್ತದೆ. ಬೆಂಗಳೂರಿನಿಂದ ಮುಖ್ಯಮಂತ್ರಿ, ಉನ್ನತ ಅಧಿಕಾರಿಗಳು, ಸಚಿವರು ಕಾನ್ಫರೆನ್ಸ್ ನಡೆಸುವುದಿದೆ. ಆದರೆ ಜಿಲ್ಲಾ ಮಟ್ಟದ ಕೆಳಹಂತದಲ್ಲಿ ವಿಡಿಯೋ ಕಾನ್ಫರೆನ್ಸ್ ಜರಗುವುದಿಲ್ಲ. ಅಪರೂಪಕ್ಕೊಮ್ಮೆ ಚುನಾವಣೆ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮಾಡಿದ್ದಿದೆ.
ಪಿಡಿಒ ಜತೆಗೆ ಕಾನ್ಫರೆನ್ಸ್: ತುಳಸಿ ಮದ್ದಿನೇನಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದು ಜು.15ರಂದು. ಮರುದಿನವೇ ಎಲ್ಲ ಗ್ರಾಮ ಪಂಚಾಯ್ತಿ ಪಿಡಿಒ (ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ) ಹಾಗೂ ಕಾರ್ಯದರ್ಶಿಗಳನ್ನು ತಾಲೂಕು ಪಂಚಾಯ್ತಿಗೆ ಕರೆಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸುಮಾರು ತಾಸು ಮಾತನಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಸುವರ್ಣ ಗ್ರಾಮ ಯೋಜನೆ ಸ್ಥಿತಿಗತಿ, ಅಧಿಕಾರಿಗಳ ಸಮಸ್ಯೆ ಇತ್ಯಾದಿ ವಿಚಾರವನ್ನು ತಿಳಿದುಕೊಂಡಿದ್ದಾರೆ.
ಮತ್ತೆ ವಾರದ ಬಳಿಕ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದು, ಪ್ರತಿ ವಾರ ಪಿಡಿಒಗಳಿಂದ ಗ್ರಾಪಂ ಯೋಜನೆಗಳ ಅಭಿವೃದ್ಧಿ ಪ್ರಗತಿಯನ್ನು ಖುದ್ದು ಸಿಇಒ ನಡೆಸುತ್ತಿದ್ದಾರೆ. ಒಂದು ಬಾರಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಜತೆಯೂ ಕಾನ್ಫರೆನ್ಸ್ ನಡೆಸಿ, ವಿವಿಧ ಯೋಜನೆಗಳ ಮಾಹಿತಿ ಪಡೆದಿದ್ದಾರೆ.
ಅನಗತ್ಯ ಸಭೆಗಳಿಗೆ ತಡೆ: ಪಿಡಿಒ, ಕಾರ್ಯದರ್ಶಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ವಾರದಲ್ಲೊಂದು ದಿನ ಜಿಲ್ಲಾ ಮಟ್ಟದ ಸಭೆಗೆ ಹಾಜರಾಗಬೇಕು. ಉಳಿದ ದಿನ ಕಚೇರಿ ಕೆಲಸಕ್ಕೆ ಅಲೆದಾಟ. ಅಂತೂ ವಾರಪೂರ್ತಿ ಅಲೆದಾಟದಲ್ಲಿಯೇ ಕಾಲ ಕಳೆಯಬೇಕು. ಇದರಿಂದ ಪಂಚಾಯ್ತಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ತುಳಸಿ ಇಂಥದ್ದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.
ಇದರಿಂದ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿ ಆಗಾಗ ಪ್ರಗತಿ ವರದಿ ಒಪ್ಪಿಸಲು ಜಿಪಂಗೆ ಬರುವುದು ತಪ್ಪುತ್ತದೆ. ಆದಷ್ಟು ಕಚೇರಿಯಲ್ಲಿ ಹಾಗೂ ಗ್ರಾಮದಲ್ಲಿ ಓಡಾಡಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
ಕೊಪ್ಪಳದಲ್ಲಿ ಡಿಸಿಯಾಗಿ ಪ್ರಯೋಗ: ತುಳಸಿ ಮದ್ದಿನೇನಿ ಕೊಪ್ಪಳ ಡಿಸಿಯಾಗಿದ್ದಾಗ 2011 ಡಿಸೆಂಬರ್ನಲ್ಲಿ ವಿಡಿಯೊ ಕಾನ್ಫರೆನ್ಸ್ನ್ನು ಆರಂಭಿಸಿದ್ದರು. ಆಗ ಜಿಲ್ಲಾಧಿಕಾರಿಯಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ತಾಲೂಕು ಕಚೇರಿ, ಹೋಬಳಿ ಅಧಿಕಾರಿಗಳೊಂದಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ವಿಡಿಯೊ ಕಾನ್ಫರೆನ್ಸ್ ನಡೆಸುತ್ತಿದ್ದರು.
ಅಲ್ಲಿ ಕೇಸ್-1 ನೆಟ್ವರ್ಕ್ ಮುಖೇನ ವಿಡಿಯೊ ಕಾನ್ಫರೆನ್ಸ್ ನಡೆಸಿದರೆ, ಇಲ್ಲಿ ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ನಡಿ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಗ್ರಾಮಾಂತರ ತಾಲೂಕುಗಳಲ್ಲಿ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಕೊರತೆ ಕಾನ್ಫರೆನ್ಸ್ಗೆ ತೊಂದರೆ ಕೊಡುತ್ತಿದೆ.
ಜಿಲ್ಲೆಯ 5 ತಾಪಂ ಕೇಂದ್ರಗಳಲ್ಲಿ ಮೊದಲ ಬಾರಿಗೆ ಪಿಡಿಒ ಹಾಗೂ ಕಾರ್ಯದರ್ಶಿ ಸೇರಿ 180 ಮಂದಿ ಇದ್ದಾರೆ. ಇವರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಾಮರ್ಶೆ ನಡೆಸಲಾಗುತ್ತದೆ. ಬೇರೆ ಇಲಾಖೆಗಳ ಪ್ರಗತಿ ಪರಿಶೀಲನೆಗೂ ಕಾನ್ಫರೆನ್ಸ್ ಬಳಸಲಾಗುವುದು.
- ತುಳಸಿ ಮದ್ದಿನೇನಿ, ಸಿಇಒ
- ಆತ್ಮಭೂಷಣ್