ಮುಸುಕಿನ ಜೋಳ; ಆದಾಯ ಹೆಚ್ಚಳ
ಆತ್ಮ ಯೋಜನೆಯ ಲಾಭ ಪಡೆದ ಹುಣಸೂರು ತಾಲೂಕು ಹನಗೋಡು ಹೋಬಳಿ ಕಣಗಾಲು ಗ್ರಾಮದ ರೈತ ಸುಜ್ಞಾನಮೂರ್ತಿ ಎಂಬವರು ಇಳುವರಿಯ ಜತೆಗೆ ನಿವ್ವಳ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಕ.ಪ್ರ.ವಾರ್ತೆ, ಮೈಸೂರು, ಆ. 12-
ಆತ್ಮ ಯೋಜನೆಯ ಲಾಭ ಪಡೆದ ಹುಣಸೂರು ತಾಲೂಕು ಹನಗೋಡು ಹೋಬಳಿ ಕಣಗಾಲು ಗ್ರಾಮದ ರೈತ ಸುಜ್ಞಾನಮೂರ್ತಿ ಎಂಬವರು ಇಳುವರಿಯ ಜತೆಗೆ ನಿವ್ವಳ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಹೊಗೆಸೊಪ್ಪು ಮತ್ತು ಮುಸುಕಿನ ಜೋಳ ಹುಣಸೂರು ತಾಲೂಕಿನ ಪ್ರಮುಖ ಬೆಳೆಗಳು. ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಮಾಡಿದಾಗ ಕಂಡುಬಂದ ಅಂಶವೆಂದರೆ, ಮುಸುಕಿನ ಜೋಳ ಬೆಳೆಯುವಾಗ ಕಣಗಾಲು ಸುತ್ತಮುತ್ತಲಿನ ರೈತರು, ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಕಡಿಮೆ ಅಂತರದಲ್ಲಿ ಬಿತ್ತನೆ ಮಾಡುತ್ತಿದ್ದರು. ಹೀಗೆ ಮಾಡುವುದರಿಂದ ಅಧಿಕ ಗಿಡಗಳಿಂದ ಉತ್ತಮ ಇಳುವರಿ ಬರುತ್ತದೆಂಬ ತಪ್ಪು ನಂಬಿಕೆ ಅವರದಾಗಿತ್ತು. ಇದು ಪ್ರಮುಖ ನ್ಯೂನ್ಯತೆಯಾಗಿತ್ತು. ಇದರ ಜತೆಗೆ ಲಘು ಪೋಷಕಾಂಶಗಳನ್ನು ಬಳಸುತ್ತಿರಲಿಲ್ಲ, ಯಥೇಚ್ಛವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಮಾತ್ರ ಬಳಸುತ್ತಿದ್ದರು.
ಗಿಡಗಳಲ್ಲಿ ಅಂತರ ಮತ್ತು ಲಘು ಪೋಷಕಾಂಶಗಳನ್ನು ಬಳಸುವುದರಿಂದ ಶೇ.20 ಕ್ಕಿಂತ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಮತ್ತು ಸ್ಥಳೀಯವಾಗಿ ಬೇಸಾಯ ಕ್ರಮದಲ್ಲಿ ತಲೆದೋರುವ ಸಮಸ್ಯೆಗಳಿಗೆ ರೈತರಿಂದಲೇ ಉತ್ತರ ಕಂಡುಕೊಳ್ಳಲು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಎಸ್.ಸತೀಶ್ ಅವರ ಮಾರ್ಗದರ್ಶನದಲ್ಲಿ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಡಾ.ಎಂ.ವಿ. ಗೋವಿಂದರಾಜು, ವಿಷಯತಜ್ಞ ಸಿ.ಕೆ. ಸತೀಶ್ ಅವರು ಕಣಗಾಲು ಗ್ರಾಮದ ಸುಜ್ಞಾನಮೂರ್ತಿ ಅವರನ್ನು ದಾನಿ ರೈತನನ್ನಾಗಿ ಆಯ್ಕೆ ಮಾಡಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಜತೆಗೆ ಇತರೆ 24 ರೈತರನ್ನು ಆಯ್ಕೆ ಮಾಡಿದರು. ಒಟ್ಟು 25 ಮಂದಿಯನ್ನು ಐದು ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸಲಾಯಿತು.
ಆತ್ಮ ಗ್ರಾಮವಾಗಿ ಆಯ್ಕೆ: ಕಣಗಾಲು ಗ್ರಾಮವನ್ನು ಆತ್ಮ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿತ್ತು. ಆತ್ಮ ಯೋಜನೆಯಡಿ ನಡೆಯುತ್ತಿದ್ದ ತರಬೇತಿಗಳು, ಅಧ್ಯಯನ ಪ್ರವಾಸಗಳು, ಪ್ರಾತ್ಯಕ್ಷಿತೆಗಳಲ್ಲಿ ನೀಡಲಾಗುತ್ತಿದ್ದ ವೈಜ್ಞಾನಿಕ ಮಾಹಿತಿಗಳು ರೈತರನ್ನು ಬಹಳಷ್ಟು ಆಕರ್ಷಿಸಿದ್ದವು. ತರಬೇತಿ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸಿ ಮುಸುಕಿನ ಜೋಳದ ಬೆಳೆಯಲ್ಲಿ ಬಹಳಷ್ಟು ತಾಂತ್ರಿಕ ಮಾಹಿತಿ ಪಡೆದರು.
ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯಂತೆ 250 ಕೆ.ಜಿ ಜಿಪ್ಸಂ, 5 ಕೆ.ಜಿ ಬೋರಾಕ್ಷ್, 10 ಕೆ.ಜಿ ಜಿಂಕ್ ಸಲ್ಫೇಟ್ ಅನ್ನು ಮತ್ತು ಇವುಗಳ ಜತೆಗೆ 15 ಕೆ.ಜಿ ಮುಸುಕಿನ ಜೋಳ (ತಳಿ- ಶ್ರೀರಾಮ್ ರಾಜ್ಕುಮಾರ್), 3 ಕೆ.ಜಿ, ಪಿಎಸ್ಬಿ ಮತ್ತು 2 ಕೆಜಿ ವಿರಿಡೆಯನ್ನು ಉಪಯೋಗಿಸಿದರು. ಬಿತ್ತನೆ ಬೀಜ ಬಿತ್ತುವಾಗ, ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ 2 ಅಡಿ ಅಂತರದಲ್ಲಿ ಬಿತ್ತನೆ ಮಾಡಿದರು.
ಕೃಷಿ ವಿಜ್ಞಾನಿಗಳಿಂದ ಆರು ಅಧಿವೇಶನಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ, ಮಣ್ಣು ಸವಕಳಿ, ಮಣ್ಣು ಮಾದರಿ ತೆಗೆಯುವುದು, ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವುದರ ಬಗ್ಗೆ ಮಾಹಿತಿ, ಬೀಜ ಆರೋಗ್ಯ, ಬೀಜ ಮೊಳಕೆ, ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆ ಮತ್ತು ಬಿತ್ತನೆ, ಕೃಷಿ ಪರಿಸರ ಪದ್ಧತಿ, ಜೈವಿಕ ಮತ್ತು ನಿರ್ಜಿವ ಘಟಕಗಳ ನಡುವಿನ ಅಂತರ ಸಂಬಂಧ, ಕೃಷಿ ಬೆಳೆ ಪರಿಸರ ವಿಶ್ಲೇಷಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆಯಲ್ಲಿ ಶತ್ರು-ಮಿತ್ರ ಕೀಟ ಗುರುತಿಸುವಿಕೆ ಮತ್ತು ಸಂರಕ್ಷಣೆ, ಸಮಗ್ರ ಪೀಡೆ ನಿರ್ವಹಣೆ, ರೋಗಗಳ ಲಕ್ಷಣ ಗುರುತಿಸುವುದು ಮತ್ತು ನಿರ್ವಹಣೆ, ಮಾರುಕಟ್ಟೆ ಸಂಪರ್ಕ, ಕೊಯ್ಲು ನಂತರದ ತಾಂತ್ರಿಕತೆ, ಸಂರಕ್ಷಣೆ, ಬೆಳೆ ಪುನಶ್ಚೇತನ ಶಕ್ತಿ ಮತ್ತು ಬೆಳೆ ಕಟಾವಿನವರೆಗೆ ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಹಿತಿ ಕೊಡಿಸಿದರು.
ತಂತ್ರಜ್ಞಾನದಿಂದ ಹೆಚ್ಚು ಇಳುವರಿ: ವೈಜ್ಞಾನಿಕ ತಂತ್ರಜ್ಞಾನದಿಂದ ಬೆಳೆ ಇಳುವರಿಯನ್ನು ಹೇಗೆ ಹೆಚ್ಚಿಸಬಹುದೆಂಬುದು ನನ್ನ ಜಮೀನಿನ ಬೆಳೆಯನ್ನು ಕಟಾವು ಮಾಡಿದ ನಂತರ ಗೊತ್ತಾಗಿದೆ ಎನ್ನುತ್ತಾರೆ ರೈತ ಸುಜ್ಞಾನಮೂರ್ತಿ.
ಅವರು ಮುಸುಕಿನ ಜೋಳ ಬೆಳೆಯಲು ಒಟ್ಟು 32,500 ಗಳನ್ನು ಖರ್ಚು ಮಾಡಿದ್ದಾರೆ. 2.5 ಎಕರೆ ಜಮೀನಿನಲ್ಲಿ 68 ಕ್ವಿಂಟಾಲ್ ಇಳುವರಿ ಬಂದಿದೆ. ಮುಸುಕಿನ ಜೋಳದ ಬೆಲೆಯು ಒಂದು ಕ್ವಿಂಟಾಲ್ಗೆ 1,250 ಇತ್ತು. ಅದರಂತೆ 68 ಕ್ವಿಂಟಾಲ್ಗೆ 85,050 ಗೆ ಮಾರಾಟವಾಗಿದೆ. ಆತ್ಮ ಯೋಜನೆಯ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದ ಒಟ್ಟು 52,550 ನಿವ್ವಳ ಲಾಭ ಬಂದಿದೆ.
ನಾನು ರಾಸಾಯನಿಕ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದೆ. ಆಗ 57 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡ ನಂತರ ನನಗೆ 68 ಕ್ವಿಂಟಾಲ್ ಇಳುವರಿ ಜತೆಗೆ ಉತ್ತಮ ಆದಾಯ ದೊರಕಿದೆ.
- ಸುಜ್ಞಾನಮೂರ್ತಿ, ಕಣಗಾಲು.
ಆತ್ಮ ಯೋಜನೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ರೈತರಿಗೆ ವರದಾನವಾಗಿದ್ದು, ಬೇಸಾಯ ಕ್ರಮದಲ್ಲಿ ಸ್ಥಳೀಯವಾಗಿ ತಲೆದೋರುವ ಸಮಸ್ಯೆಗಳಿಗೆ ಕೃಷಿ ತಜ್ಞರ ಮಾರ್ಗದರ್ಶನದಲ್ಲಿ ರೈತರಿಂದ ರೈತರೆ ಉತ್ತರ ಕಂಡುಕೊಳ್ಳಲು, ಅಧಿಕ ಇಳುವರಿ ಪಡೆಯುವುದರ ಜತೆಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ.
- ಎಸ್. ಸತೀಶ್, ಉಪಯೋಜನಾ ನಿರ್ದೇಶಕರು, ಆತ್ಮಯೋಜನೆ.
ರೈತ ಬಾಂಧವರು, ಮುಸುಕಿನ ಜೋಳ ಬೆಳೆಯಲ್ಲಿ ಅಂತರ ಮತ್ತು ಲಘು ಪೋಷಕಾಂಶಗಳನ್ನು ಉಪಯೋಗಿಸುವುದರಿಂದ ಶೇ.20 ರಷ್ಟು ಅಧಿಕ ಇಳುವರಿ ಜತೆಗೆ ಉತ್ತಮ ಆದಾಯ ಪಡೆಯಬಹುದು..
- ಡಾ. ಎಂ. ವಿ. ಗೋವಿಂದರಾಜು, ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಆತ್ಮ ಯೋಜನೆ
- ಅಂಶಿ ಪ್ರಸನ್ನಕುಮಾರ್