ಇದು ಆದಾಯ ಖಾತ್ರಿ ಯೋಜನೆ!
ಕ.ಪ್ರ.ವಾರ್ತೆ ಮೈಸೂರು ಆ. 13
ಸಾಂಪ್ರದಾಯಿಕ ಪದ್ಧತಿಯ ವ್ಯವಸಾಯಕ್ಕೆ ಜೋತು ಬಿದ್ದಿದ್ದ ರೈತ ಕ್ರಮೇಣ ಅದರಾಚೆಯೂ ನೋಡುತ್ತಿದ್ದಾನೆ. ಅಪ್ಪ ಹಾಕಿದ ಆಲದ ಮರ... ಎಂದು ನೇಣು ಹಾಕಿಕೊಳ್ಳುವ ಬದಲು ಬೆಳೆ ಪದ್ಧತಿ ಬದಲಿಸಿಕೊಂಡು ಆದಾಯ ಮಾಡುತ್ತಿದ್ದಾನೆ ಎಂಬುದಕ್ಕೆ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ತಿಪ್ಪೂರು ಗ್ರಾಮದ ರೈತ ಮಹದೇವ ನಿದರ್ಶನ.
ಸಣ್ಣಹೈದಶೆಟ್ಟಿ ಎಂಬವರ ಮಗ ಮಹದೇವ. ಇವರಿಗೆ ಸುಖಾಸುಮ್ಮನೆ ಕೃಷಿ ಕೈಹಿಡಿದಿಲ್ಲ. ಕಳ್ಳುಮುಳ್ಳಿನ ಹಾದಿ ಸವೆಸಿ, ಈ ಹಂತಕ್ಕೆ ಬಂದಿದ್ದಾರೆ. ಸಣ್ಣಹೈದಶೆಟ್ಟಿ ಮೂಲತಃ ಮೈಸೂರು ತಾಲೂಕು ಉದ್ಬೂರು ಬಳಿಯ ಕೆಲ್ಲಳ್ಳಿಯವರು. ಜೀತಕ್ಕೆಂದು ತಿಪ್ಪೂರಿಗೆ ವಲಸೆ ಬಂದು, ಮಾದೇಗೌಡ- ವೆಂಕಟರಮಣೇಗೌಡ ಎಂಬ ಸೋದರರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ಈ ಸಹೋದರರು ಸಣ್ಣಹೈದಶೆಟ್ಟಿ ಅವರನ್ನು ಎಂದೂ ಆಳುಮಗನಂತೆ ನೋಡಲಿಲ್ಲ. ಬದಲಿಗೆ ಮನೆಮಗನಾಗಿ ನೋಡಿಕೊಂಡರು. ಮದುವೆ ಮಾಡಿದರು.
ಹೃದಯ ವೈಶಾಲ್ಯ: ಎರಡೂವರೆ ದಶಕಗಳ ಸೇವೆಯ ನಂತರ ಸಣ್ಣಹೈದಶೆಟ್ಟಿ ಮನೆಯಿಂದ ಹೊರಟುನಿಂತಾಗ ಎರಡು ಎಕರೆ ಜಮೀನು ಹಾಗೂ 3 ಅಂಕಣ ಮನೆ ನೀಡಿ, ಹೃದಯ ವೈಶಾಲ್ಯತೆ ಮೆರೆದರು.
ಸದುಪಯೋಗ: ಗೌಡ ಸೋದರರು ಕೊಟ್ಟ 2 ಎಕರೆ ಜಮೀನಿನಲ್ಲಿ ತನ್ನಿಬ್ಬರು ಮಕ್ಕಳು, ಪತ್ನಿ ಹಾಗೂ ಸೊಸೆಯಂದಿರ ಜೊತೆ ಸೇರಿ ದುಡಿದ ಸಣ್ಣಹೈದಶೆಟ್ಟರು ಮಕ್ಕಳಿಗೆ ಸಂಪೂರ್ಣ ಹೊಣೆ ವಹಿಸಿಕೊಟ್ಟರು. ಇಬ್ಬರು ಮಕ್ಕಳು ಸಾಂಪ್ರದಾಯಿಕ ಬೆಳೆ ಪದ್ದತಿ ಬಿಟ್ಟು, 2007 ರಿಂದ ತೋಟಗಾರಿಕೆ ಬೆಳೆಗಳತ್ತ ಗಮನಹರಿಸಿ, ಲಾಭ ಮಾಡತೊಡಗಿದರು. ತೋಟಗಾರಿಕೆ ಇಲಾಖೆಯು ಬೆಳೆಗಳಿಗೆ, ಪಾಲಿ ಹೌಸ್ ನಿರ್ಮಾಣಕ್ಕೆ ಹಾಗೂ ಹನಿ ನೀರಾವರಿಗೆ ನೀಡುವ ಸಹಾಯಧನ ಸದುಪಯೋಗ ಮಾಡಿಕೊಂಡರು. ಇಲಾಖೆಯವರು ಶಿಫಾರಸು ಮಾಡಿದಂತೆ ರಾಸಾಯನಿಕ ಗೊಬ್ಬರ, ಕ್ರಿಮಿ ಹಾಗೂ ಕೀಟನಾಶಕ ಬಳಸಿ, ವ್ಯವಸಾಯ ಮಾಡಿದರು. ಅದರ ಪರಿಣಾಮ 2010 ರಲ್ಲಿ ತಲಾ 80 ಸಾವಿರ ನೀಡಿ, ಅದೇ ಗ್ರಾಮದಲ್ಲಿ ಒಂದು ಎಕರೆ ಗದ್ದೆ ಹಾಗೂ ಹೊಲ ಖರೀದಿಸಿದರು. ಕೊಳವೆ ಬಾವಿ ಕೊರೆಸಿದರು.
ಸಾಮಾನ್ಯವಾಗಿ ಮೆಣಸಿನಕಾಯಿ ಎಂದರೆ ಹಸಿ (ಹಸಿರು) ಹಾಗೂ ಒಣ (ಕೆಂಪು) ಎಂದು ಭಾವಿಸುವುದುಂಟು. ಆದರೆ, ಇವರ ಜಮೀನಿನಲ್ಲಿ 2011ರಲ್ಲಿ ಹಳದಿ ಹಾಗೂ ಕೆಂಪು ದಪ್ಪು ಮೆಣಸಿನಕಾಯಿ ಬೆಳೆಸಲಾಯಿತು. ಉತ್ತಮ ಇಳುವರಿ ಬಂದು, ಪ್ರತಿ ಕೆಜಿ 45 ರಿಂದ 50 ಗೆ ಮಾರಾಟವಾಯಿತು. ಖರ್ಚೆಲ್ಲಾ ಕಳೆದು ಆರು ತಿಂಗಳಿಗೆ 2.50 ಲಕ್ಷ ಲಾಭ ಬಂದಿತು. ಬೂದಿ ರೋಗ ಕಾಣಿಸಿಕೊಂಡಿದ್ದರಿಂದ ನಂತರ ದಪ್ಪ ಮೆಣಸಿನಕಾಯಿ ಬೆಳೆ ತೆಗೆಯಲಾಯಿತು.
ನಂತರ ಸಣ್ಣ ಸೌತೆಕಾಯಿ ಬೆಳೆದು, ರಿಲಯನ್ಸ್ಗೆ ಮಾರಾಟ ಮಾಡಿದರು. ಖರ್ಚೆಲ್ಲಾ ಕಳೆದು ಎಕರೆಗೆ 40 ಸಾವಿರದಿಂದ 50 ಸಾವಿರ ಲಾಭ ಬಂದಿತು. ಈ ವರ್ಷ ಕೂಡ ಸಣ್ಣ ಸೌತೆಕಾಯಿಯಲ್ಲಿ ಅಷ್ಟೇ ಲಾಭ ಬಂದಿದೆ. ಈಗ ಮತ್ತೆ ದಪ್ಪ ಮೆಣಸಿನಕಾಯಿ ಬೆಳೆದಿದ್ದಾರೆ. ಹಿಂದೆ ಪಪ್ಪಾಯಿ, ಟೊಮೆಟೋ ಕೂಡ ಬೆಳೆದು, ಲಾಭ ಮಾಡಿದ್ದಾರೆ.
ಮಹದೇವ ವ್ಯವಸಾಯದ ಜೊತೆಗೆ ನರ್ಸರಿ ಮಾಡುತ್ತಾರೆ. ಅಂದರೆ ಕೋಸು, ಸೌತೆ, ಮೆಣಸಿನಕಾಯಿ, ಕುಂಬಳಕಾಯಿ, ಪಪ್ಪಾಯಿ, ನುಗ್ಗೆ, ಟೊಮೆಟೋ ಮೊದಲಾದ ಸಸಿಗಳನ್ನು ಬೆಳೆಸಿ, ಮಾರಾಟ ಮಾಡುತ್ತಾರೆ. ಇದರಿಂದ ವಾರ್ಷಿಕ 2 ಲಕ್ಷದಿಂದ 2.50 ಲಕ್ಷ ಆದಾಯ ಬರುತ್ತಿದೆ.
ತ್ವಾಟಗಾರಿಕೆ ಬೆಳೆ ಬೆಳೆಯಕೆ ನಮ್ಮ ಮಕ್ಳು ಮುಂದಾದಾಗ ಹೆದ್ರಿಕೆ ಆಗಿತ್ತು. ಎಲ್ಲಿ ಲಾಸ್ ಮಾಡ್ಕಂಡು ಸಾಲ ಮಾಡ್ತಾರೋ ಅನ್ಕೊಂಡಿದ್ದೆ. ಆದ್ರೆ ಈಗ ಧೈರ್ಯ ಬಂದದೆ. ಎಷ್ಟು ಸಾಲ ಮಾಡುದ್ರು ತ್ವಾಟಗಾರಿಕೆ ಬೆಳೆ ಬೆಳೆಯೋದ್ರಿಂದ ತೀರಿಸಬಹ್ದು.
ಸಣ್ಣಹೈದಶೆಟ್ಟಿ, ತಿಪ್ಪೂರು
ವ್ಯವಸಾಯವನ್ನು ವ್ಯವಸ್ಥಿತವಾಗಿ ಮಾಡಿದ್ರೆ ನಷ್ಟವಾಗುವುದಿಲ್ಲ. ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆದ್ರೆ ಆದಾಯ ಗ್ಯಾರಂಟಿ. ರೈತರು ಶ್ರಮಪಟ್ಟು ಕೆಲಸ ಮಾಡಬೇಕು.
ಮಹದೇವ, ತಿಪ್ಪೂರು
-ಅಂಶಿ ಪ್ರಸನ್ನಕುಮಾರ್