ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಂಚಾಣ ಕುಣಿತಕ್ಕೆ ಆಯೋಗದ ಅಂಕೆ

Rashmi Kasaragodu
Updated On : 14 Aug 2013, 12:14 pm


ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ರೀತಿಯಲ್ಲೇ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದನ್ನು ತಡೆಯುವುದಕ್ಕೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಈ ಉಪ ಚುನಾವಣೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತಿಷ್ಠೆ ಕಣವಾಗಿ ಪರಿಗಣಿಸಿವೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ಹಣದ ಹೊಳೆ ಹರಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಜತೆ ಚರ್ಚೆ ನಡೆಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಸದ್ದಿಲ್ಲದೇ ನಿಯಂತ್ರಣ ಕ್ರಮ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಒಬ್ಬ ಅಭ್ಯರ್ಥಿ ರು.   40 ಲಕ್ಷ ಮಾತ್ರ ಖರ್ಚು ಮಾಡುವುದಕ್ಕೆ ನಿಯಮ ಪ್ರಕಾರ ಅವಕಾಶವಿದೆ. ಆದರೆ ಇದನ್ನು ಎರಡೂ ಪಕ್ಷದ ಅಭ್ಯರ್ಥಿಗಳು ಮೀರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ 6 ಮಂದಿ ವಿಶೇಷ ವೀಕ್ಷಕರನ್ನು ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಿಯೋಜನೆಗೊಳಿಸಲಾಗಿದೆ.
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ತಲಾ ಇಬ್ಬರು ಹಿರಿಯ ಐಎಎಸ್ ದರ್ಜೆ ಅಧಿಕಾರಿಗಳ ಜತೆಗೆ ಚುನಾವಣಾ ವೆಚ್ಚ ನಿಯಂತ್ರಣಕ್ಕೆ ಇಬ್ಬರು ವೀಕ್ಷಕರನ್ನು ನೇಮಕಗೊಳಿಸಲಾಗಿದೆ. ಇದರ ಜತೆಗೆ ವಾಣಿಜ್ಯ ತೆರಿಗೆ ಹಾಗೂ ಸುಂಕ ವಿಭಾಗದ ಅಧಿಕಾರಿಗಳನ್ನೂ ವೀಕ್ಷಕರಾಗಿ ನಿಯುಕ್ತಿಗೊಳಿಸಲಾಗಿದ್ದು, ಒಟ್ಟು ಎಂಟು ಮಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಇದರ ಜತೆಗೆ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿ ಕೆಲಸ ನಿರ್ವಹಿಸಲಿದ್ದು, ಪ್ರತಿ ದಿನ ಆಯೋಗಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಕನ್ನಡಪ್ರಭದ ಜತೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಚುನಾವಣಾ ಸಿದ್ಧತೆ ಬಗ್ಗೆ ತಿಳಿಸಿದ್ದು ಇಷ್ಟು....
' ಆಯೋಗದ ದೃಷ್ಟಿಯಲ್ಲಿ ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಯೋಗ ತೆಗೆದುಕೊಂಡ ಕ್ರಮದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಧಿಕಾರಿಗಳು, ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನಾವು ಸಮರ್ಥವಾಗಿ ನಿಭಾಯಿಸಿದ್ದೆವು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಆ ಎಲ್ಲ ಸೂತ್ರಗಳನ್ನು ಅನ್ವಯಿಸುತ್ತೇವೆ.'
ಈ 2 ಕ್ಷೇತ್ರಗಳು ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಲಭಿಸುತ್ತಿದೆ. ಆದರೆ ನಾವು ರಾಜಧಾನಿಯಿಂದ ದೂರವಿರುವ ಕ್ಷೇತ್ರಗಳಲ್ಲೂ ಇಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ವಿಶೇಷವಾಗಿ ವೆಚ್ಚ ನಿಯಂತ್ರಣಕ್ಕೆ ಗಮನ ನೀಡಲು ನಿರ್ಧರಿಸಲಾಗಿದೆ.'
'ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ 16 ಲಕ್ಷ, ಲೋಕಸಭಾ ಚುನಾವಣೆಗೆ 40 ಲಕ್ಷವನ್ನು ಚುನಾವಣಾ ವೆಚ್ಚ ನಿಗದಿಪಡಿಸಿದೆ. ಈ ಪರಿಮಿತಿಯಲ್ಲೇ ಚುನಾವಣೆ ನಡೆಯಬೇಕು. ಆದರೆ ಪಕ್ಷಗಳು ಮಾಡುವ ಖರ್ಚಿನ ಮೇಲೆ ನಮ್ಮ ನಿಯಂತ್ರಣ ಇರುವುದಿಲ್ಲ. ಆದಾಗಿಯೂ ಆ ಬಗ್ಗೆ ನಾವು ಸಂಬಂಧಪಟ್ಟ ಪಕ್ಷದ ಅಧ್ಯಕ್ಷರ ಬಳಿ ಮಾಹಿತಿ ಕೇಳುತ್ತೇವೆ. ಜತೆಗೆ ವೆಚ್ಚ ನಿಯಂತ್ರಣಕ್ಕೆ ವಿಶೇಷ ವೀಕ್ಷಕರು ಹಾಗೂ ತಂಡವನ್ನು ನಿಯೋಜನೆ ಮಾಡಲಾಗಿದೆ.'
'ಅದೇ ರೀತಿ ಈ 2 ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಸಚಿವರನ್ನು ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಚುನಾವಣಾ ಕಾರ್ಯತಂತ್ರ ರಚಿಸುವುದು ಆಯಾ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಇದರಿಂದ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಒಂದೊಮ್ಮೆ ನಿಯಮ ಉಲ್ಲಂಘನೆಯಾದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.


ವೀಕ್ಷಕರ ನೇಮಕ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 3 ಸ್ಥಾನಗಳಿಗೆ ನಡೆಯುವ ಚುನಾವಣೆಗೂ  ಆಯೋಗ ವೀಕ್ಷಕರ ನೇಮಕಗೊಳಿಸಿದೆ. ಹು-ಧಾ ಕ್ಷೇತ್ರಕ್ಕೆ ಬಿ.ಎಚ್.ಅನಿಲ್ಕುಮಾರ್, ರಾಜೀವ್-ಚಿತ್ರದುರ್ಗ, ಮಂಜುನಾಥ್ ಪ್ರಸಾದ್ ಮೈಸೂರು ವೀಕ್ಷಕರಾಗಿ ನೇಮಿಸ ಲಾಗಿದೆ. ಇವರು ಕರ್ನಾಟಕ ವೃಂದದ ಐಎಎಸ್ ಅಧಿಕಾರಿಗಳಾಗಿದ್ದಾರೆ.
- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement