ಕೊಳ್ಳೇಗಾಲ ವಿಭಾಗದ ಚತುಷ್ಪಥ ರಸ್ತೆ ಅಭಿವೃದ್ಧಿ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ರಾಷ್ಟ್ರೀಯ ಹೆದ್ದಾರಿ 212ರ ಕೊಳ್ಳೇಗಾಲ ವಿಭಾಗದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿ ಪಡಿಸುವ ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ನಾಲ್ಕನೇ ಹಂತದಲ್ಲಿ ಈ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ವಿನ್ಯಾಸಗೊಳಿಸಿ, ನಿರ್ಮಿಸಿ, ನಿರ್ವಹಿಸಿ ವರ್ಗಾಯಿಸುವ(ಡಿಬಿಎಫ್ಒಟಿ) ಯೋಜನೆಯಡಿ ಈ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತದೆ. ಸುಮಾರು 150 ಕಿ.ಮೀ. ಉದ್ದದ ಈ ಯೋಜನೆಯ ವೆಚ್ಚ 588.49 ಕೋಟಿ ಎಂದು ಅಂದಾಜಿಸಲಾಗಿದೆ. ಈ ಮೊತ್ತವು ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ ಮತ್ತು ನಿರ್ಮಾಣ ಪೂರ್ವ ವೆಚ್ಚ 65 ಕೋಟಿ ಒಳಗೊಂಡಿದೆ. ಈ ಯೋಜನೆ ಅನುಷ್ಠಾನದಿಂದ ಕರ್ನಾಟಕದ ಮೂಲಭೂತ ಸೌಲಭ್ಯಗಳು ಸುಧಾರಿಸುವುದಲ್ಲದೇ, ಕೊಳ್ಳೇಗಾಲ ಮತ್ತು ಕಲ್ಲಿಕೋಟೆ ನಡುವಿನ ಸಂಚಾರದ ಸಮಯ ಹಾಗೂ ವೆಚ್ಚ ಕಡಿತವಾಗಲಿದೆ.