ನಾವೆಲ್ಲರೂ ಒಂದೇ; ಪಿಂಚಣಿ ಬೇರೆ ಬೇರೆ!
ಕ.ಪ್ರ.ವಾರ್ತೆ ಬೆಂಗಳೂರು ಆ.13
'ವಂದೇ ಮಾತರಂ' ಎಂದು ದೇಶದ ಸ್ವಾತಂತ್ರ್ಯಕ್ಕಾಗಿ ಜೀವದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಕೇಂದ್ರ- ರಾಜ್ಯ ಸರ್ಕಾರಗಳ ದೃಷ್ಟಿಯಲ್ಲಿ ಮಾತ್ರ 'ಒಂದೇ' ಅಲ್ಲ..!
ಏಕೆಂದರೆ, 6 ರಾಜ್ಯಗಳಲ್ಲಿನ ಗೋವಾ ವಿಮೋಚನಾ ಚಳವಳಿಗಾರರಿಗೆ ಕೇಂದ್ರದ 'ಸ್ವಾತಂತ್ರ್ಯ ಸೈನಿಕ ಸಮ್ಮಾನ್ ಪಿಂಚಣಿ' ಲಭಿಸುತ್ತಿದ್ದರೆ, ಕರ್ನಾಟಕದಲ್ಲಿರುವ ಇಳಿವಯಸ್ಸಿನ ಸುಮಾರು 1 ಸಾವಿರ ಗೋವಾ ವಿಮೋಚನಾ ಚಳವಳಿಗಾರರು ಅದರಿಂದ ವಂಚಿತರಾಗಿದ್ದಾರೆ.
ಮತ್ತೊಂದೆಡೆ, ರಾಜ್ಯ ಸರ್ಕಾರ ನೀಡುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯಲ್ಲೂ ತಾರತಮ್ಯವಾಗಿದ್ದು, ಗೋವಾ ಸ್ವಾತಂತ್ರ್ಯ ಯೋಧರಿಗೆ ಕೇವಲ 2 ಸಾವಿರ ಪಿಂಚಣಿ ಸಿಗುತ್ತಿದೆ. ಆದರೆ, ಕ್ವಿಟ್ ಇಂಡಿಯಾ, ಮೈಸೂರು ಚಲೋದಲ್ಲಿ ಭಾಗವಹಿಸಿದ ಹೋರಾಟಗಾರರಿಗೆ 6 ಸಾವಿರ ಪಿಂಚಣಿ ಮಾತ್ರವಲ್ಲದೆ ಇತರ ಸವಲತ್ತುಗಳೂ ಲಭಿಸುತ್ತಿವೆ.
ಕ್ವಿಟ್ ಇಂಡಿಯಾ, ಮೈಸೂರು ಚಲೋ ಮುಂತಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿ, ಸೌಲಭ್ಯಗಳು ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೂ ಸಿಗಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೂ ಕೇಂದ್ರ ಸರ್ಕಾರದ ಪಿಂಚಣಿ ಸಿಗಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಆ ಆದೇಶಗಳ ಪಾಲನೆಯಾಗದ ಕಾರಣ ಕರ್ನಾಟಕದಲ್ಲಿನ ಗೋವಾ ಸ್ವಾತಂತ್ರ್ಯ ಹೋರಾಟಗಾರರು ಕೇಂದ್ರ ಪಿಂಚಣಿ ವಂಚಿತರಾಗಿದ್ದಾರೆ. ಜತೆಗೆ, ರಾಜ್ಯದಲ್ಲಿನ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುತ್ತಿರುವಷ್ಟು ಪಿಂಚಣಿ ಹಾಗೂ ಇತರ ಸೌಲಭ್ಯ ಸಿಗದೇ ಇರುವುದರಿಂದ ಅವರು ತಾರತಮ್ಯಕ್ಕೂ ಈಡಾಗಿದ್ದಾರೆ.
ಹೋರಾಟದ ಬಗೆ: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ವಾತಂತ್ರ್ಯ ಹೋರಾಟಕ್ಕನುಗುಣವಾಗಿ ವಿವಿಧ ವರ್ಗಗಳಿದ್ದು, ಅವರು ಭಾಗವಹಿಸಿದ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಆಯಾ ಹೋರಾಟಗಾರರನ್ನು ಗುರುತಿಸಲಾಗುತ್ತದೆ. ಅಂತಹ ಹೋರಾಟಗಾರರಿಗೆ ಸರ್ಕಾರದ ಆದೇಶ ಡಿಪಿಎಆರ್ 1347 ಪಿಎಫ್‌ಎಸ್ 87 ಬೆಂಗಳೂರು, 29-01-1991ರಡಿಯಲ್ಲಿ ಗೌರವಧನ, ಉಚಿತ ಪ್ರಯಾಣ ಸೌಕರ್ಯ, ವೈದ್ಯಕೀಯ ಸೌಲಭ್ಯ, ಉಚಿತ ನಿವೇಶನ ಇತ್ಯಾದಿ ಸೌಲಭ್ಯ ಮಂಜೂರು ಮಾಡಿತ್ತು.
ಆರಂಭದಲ್ಲಿ ಇದನ್ನು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾದವರಿಗೆ ಮಾತ್ರ ನೀಡಲಾಗುತ್ತಿತ್ತು. ಬಳಿಕ ಕೇಂದ್ರದ ಆದೇಶದ ಪ್ರಕಾರ ಅದನ್ನು 1991ರಲ್ಲೇ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೂ ವಿಸ್ತರಿಸಲಾಗಿತ್ತು. ಹಾಗಾಗಿ, 1991ರಿಂದ ರಾಜ್ಯದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಏಕರೂಪದ ಪಿಂಚಣಿ ಮತ್ತಿತರ ಸೌಲಭ್ಯ ಸಿಗಲಾರಂಭಿಸಿತು.
ಮಧ್ಯ ಸ್ಥಗಿತ, ಮತ್ತೆ ಆರಂಭ: ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ 1991- 95ರವರೆಗೆ ಪಿಂಚಣಿ ನೀಡಿದ ಸರ್ಕಾರ 1995ರ ಏಪ್ರಿಲ್‌ನಲ್ಲಿ ಅದನ್ನು ಸ್ಥಗಿತಗೊಳಿಸಿತು. ಬಳಿಕ ಹೋರಾಟಗಾರರ ಒತ್ತಾಯಕ್ಕೆ ಮಣಿದ ಸರ್ಕಾರ, ಈ ಹಿಂದೆ ನೀಡುತ್ತಿದ್ದ ಇತರ ಎಲ್ಲ ಸೌಲಭ್ಯಗಳನ್ನು ಹೊರತುಪಡಿಸಿ ಕೇವಲ 2 ಸಾವಿರ ಗೌರವಧನ ನೀಡುವ ಮೂಲಕ ಮಾ. 31, 2008ರಲ್ಲಿ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತೆ ಪಿಂಚಣಿ ಆರಂಭಿಸಿತು.
ಎಡವಟ್ಟಾಗಿದ್ದೇ ಇಲ್ಲಿ: ಈ ನಡುವೆ 1955- 56ರಲ್ಲಿ ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೂ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವಂತೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ನೀಡಲು ನಿರ್ಧರಿಸಿತು. ಹಾಗಾಗಿ ಗೋವಾ ಚಳವಳಿಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ಪಿಂಚಣಿ ಪಡೆಯುತ್ತಿರುವ ಹೋರಾಟಗಾರರ ಮಾಹಿತಿಯನ್ನು ಆ. 1, 2002ರ ಒಳಗೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಮಧ್ಯಪ್ರದೇಶಕ್ಕೆ ಡಿ.12, 1996ರಲ್ಲಿ ಸೂಚನೆ ನೀಡಿತ್ತು.
ಆದರೆ, 1995 ರಿಂದ 2008ರ ವರೆಗೆ ರಾಜ್ಯದಲ್ಲಿ ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ತಡೆ ಹಿಡಿದಿದ್ದರಿಂದ ತಮ್ಮಲ್ಲಿ ಆ ರೀತಿಯ ಪಿಂಚಣಿ ಚಾಲನೆಯಲ್ಲಿಲ್ಲ ಎಂದು ಕರ್ನಾಟಕ ಕೇಂದ್ರಕ್ಕೆ ತಿಳಿಸಿತು. ಇದನ್ನೇ ನೆಪವಾಗಿಸಿಕೊಂಡಿರುವ ಕೇಂದ್ರ ಸರ್ಕಾರ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರದ ಪಿಂಚಣಿ ನೀಡಲು ಹಿಂದೇಟು ಹಾಕುತ್ತಿದೆ.
ರಾಜ್ಯದಲ್ಲಿ ತಾರತಮ್ಯ
ರಾಜ್ಯದಲ್ಲಿ ಗೋವಾ ಸ್ವಾತಂತ್ರ್ಯ ಹೋರಾಟಗಾರರನ್ನು ಹೊರತುಪಡಿಸಿ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯ ಸರ್ಕಾರ 5 ಸಾವಿರ ಪಿಂಚಣಿ, ಉಚಿತ ಬಸ್‌ಪಾಸ್, ವೈದ್ಯಕೀಯ ಸೌಲಭ್ಯ, ನಿವೇಶನ ಇತ್ಯಾದಿ ಸವಲತ್ತುಗಳನ್ನು ನೀಡುತ್ತಿದೆ. ಜತೆಗೆ ಅವರಲ್ಲಿ 6 ತಿಂಗಳಿಗಿಂತ ಹೆಚ್ಚಿಗೆ ಸೆರೆವಾಸ ಅನುಭವಿಸಿದವರಿಗೆ ಸುಮಾರು ರು. 14 ಸಾವಿರದಷ್ಟು ಕೇಂದ್ರದ ಪಿಂಚಣಿ ಸಿಗುತ್ತಿದೆ. ಆದರೆ, ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯ ಸರ್ಕಾರ ಕೇವಲ 2 ಸಾವಿರ ಪಿಂಚಣಿ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಆ ಸಂಬಂಧ ನ.22, 2012ರಂದು ಸರ್ಕಾರದ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಅಂದು ತಮ್ಮ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ರಾಜ್ಯ ಗೋವಾ ವಿಮೋಚನಾ ಚಳವಳಿಗಾರರಿಗೂ ನೀಡುವಂತೆ ಆದೇಶಿಸಿದ್ದರು. ಆದರೂ ಆ ಆದೇಶ ಅನುಷ್ಠಾನವಾಗಿಲ್ಲ.
ರಾಜ್ಯ ಸರ್ಕಾರ ನೀಡುತ್ತಿರುವ ಪಿಂಚಣಿಯಲ್ಲಿನ ತಾರತಮ್ಯ ಹಾಗೂ ಗೌರವಧನ ಬಿಟ್ಟರೆ ಬೇರೆ ಸೌಲಭ್ಯ ಒದಗಿಸದಿರುವುದು, ಮತ್ತೊಂದೆಡೆ ಕೇಂದ್ರ ಸರ್ಕಾರದ ಪಿಂಚಣಿಯಿಂದ ವಂಚಿತರಾಗಿರುವುದರಿಂದ ಗೋವಾ ವಿಮೋಚನಾ ಚಳವಳಿಗಾರರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ನಮಗೆ ಕೇಂದ್ರದಿಂದ ಪಿಂಚಣಿ ಒದಗಿಸುವಲ್ಲಿ ಸರ್ಕಾರ ಯತ್ನಿಸುತ್ತಿದೆ. ಆದರೆ, ಅದಕ್ಕೂ ಮುನ್ನ ರಾಜ್ಯ ಸರ್ಕಾರದ ಪಿಂಚಣಿ ವಿತರಣೆಯಲ್ಲಿ ಆಗಿರುವ ತಾರತಮ್ಯ ಪರಿಹರಿಸಿ ಕಾನೂನುಪ್ರಕಾರ ಸಿಗಬೇಕಾದ ಇತರ ಸೌಲಭ್ಯಗಳನ್ನೂ ಒದಗಿಸಬೇಕು.
- ಜಿ.ಕೃಷ್ಣಮೂರ್ತಿ, ಖಜಾಂಚಿ,
ಕರ್ನಾಟಕ ರಾಜ್ಯ ಗೋವಾ ವಿಮೋಚನಾ ಚಳವಳಿಗಾರರ ಕ್ಷೇಮಾಭಿವೃದ್ಧಿ ಸಂಘ
ರವಿಕಾಂತ ಕುಂದಾಪುರ