ಪ್ರಧಾನಿಗೆ ಗುದ್ದು
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಖರೀದಿಯಲ್ಲಿ ಪ್ರಧಾನಮಂತ್ರಿ ಕಚೇರಿ ಭಾಗಿಯಾಗಿತ್ತಾ?..
ಪಿಟಿಐ ನವದೆಹಲಿ ಆ.13
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಖರೀದಿಯಲ್ಲಿ ಪ್ರಧಾನಮಂತ್ರಿ ಕಚೇರಿ ಭಾಗಿಯಾಗಿತ್ತಾ? ಗಣ್ಯಾತಿಗಣ್ಯರ ಪ್ರಯಾಣಕ್ಕೆ ಇಟಲಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯ ಹೆಲಿಕಾಪ್ಟರ್ ಖರೀದಿಗೆ ಒತ್ತಡ ಹೇರಲಾಗಿತ್ತೇ? ಗಣ್ಯಾತಿಗಣ್ಯರ ವಿವಾದಿತ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ವರದಿಯಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಇಟಲಿ ಮೂಲದ ಕಂಪನಿಯ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದರು ಎಂಬ ಆಘಾತಕಾರಿ ಅಂಶವನ್ನು ಉಲ್ಲೇಖಿಸಲಾಗಿದೆ. ಇದರ ಜತೆಗೆ ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯು ಸೇನೆ (ಐಎಎಫ್) ಹೆಲಿಕಾಪ್ಟರ್ ಖರೀದಿಯಲ್ಲಿ ಸೂಕ್ತ ನಿಯಮಗಳನ್ನು ಅನುಸರಿಸಿಲ್ಲ. ಜತೆಗೆ 2006ರಲ್ಲಿ ರೂಪಿಸಲಾಗಿದ್ದ ರಕ್ಷಣಾ ಖರೀದಿ ನಿಯಮ (ಡಿಪಿಪಿ) ಪದೇ ಪದೆ ಉಲ್ಲಂಘಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ.
ವಿದೇಶದಲ್ಲಿ ಪರೀಕ್ಷೆ ಬಗ್ಗೆ ಪ್ರಶ್ನೆ
ಕಾಪ್ಟರ್‌ಗಳನ್ನು ವಿದೇಶದಲ್ಲಿ ಪರೀಕ್ಷೆಗೆ ಒಳಪಡಿಸುವ ಪ್ರಸ್ತಾಪದ ಬಗ್ಗೆ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪ್ರಶ್ನಿಸಿದ್ದರು. ಐಎಎಫ್‌ನ ಉನ್ನತಾಧಿಕಾರಿಗಳು ರಕ್ಷಣಾತ್ಮಕವಾಗಿರುವ ಎಲ್ಲ ವಿಚಾರಗಳ ಬಗ್ಗೆ ಗಮನ ನೀಡಲಾಗುವುದೆಂಬ ಭರವಸೆ ನೀಡಿದ ಬಳಿಕ ಆ್ಯಂಟನಿ, ವಿದೇಶದಲ್ಲಿ ಕಾಪ್ಟರ್‌ಗಳ ಪರೀಕ್ಷೆಗೆ ಒಪ್ಪಿಗೆ ನೀಡಿದರು. ಕಾಪ್ಟರ್ ಪೂರೈಕೆಗೆ ನಿಗದಿಯಾಗಿದ್ದ 2 ಕಂಪನಿಗಳು ಗುಣಾತ್ಮಕವಾಗಿ ಯಾವುದೇ ಅರ್ಹತೆ ಹೊಂದಿಲ್ಲದಿದ್ದರೂ ಕಾಪ್ಟರ್‌ಗಳ ಮೌಲ್ಯಮಾಪನ ನಡೆಸುವುದರ ಬಗ್ಗೆ ರಕ್ಷಣಾ ಸಚಿವರು ಅತೃಪ್ತಿ ಹೊಂದಿದ್ದರು ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಪ್ರತಿಕ್ರಿಯೆಗೆ ತ್ಯಾಗಿ ನಕಾರ
ಸಿಎಜಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿವೃತ್ತ ಏರ್‌ಚೀಫ್ ಮಾರ್ಷಲ್ ಎಸ್.ಪಿ.ತ್ಯಾಗಿ ನಿರಾಕರಿಸಿದ್ದಾರೆ. ಲೋಕಸಭೆಯಲ್ಲಿ ವರದಿ ಮಂಡನೆಯಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಅವರ ನಿವಾಸಕ್ಕೆ ತೆರಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಿವಾಸದಿಂದ ಹೊರಬಂದ ಅವರ ಪತ್ನಿ 'ಕಾಪ್ಟರ್ ಒಪ್ಪಂದದ ವೇಳೆ ನನ್ನ ಪತಿ ಐಎಎಫ್ ಮುಖ್ಯಸ್ಥರಾಗಿರಲಿಲ್ಲ' ಎಂದು ಹೇಳಿ, ಪತ್ರಕರ್ತರನ್ನು ಸಾಗಹಾಕಿದರು. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ಸಿಎಜಿ ಹೇಳಿದ್ದೇನು?
-2006ರಲ್ಲಿ ರಕ್ಷಣಾ ಸಾಮಗ್ರಿ ಖರೀದಿ ಒಪ್ಪಂದಕ್ಕೆಂದು ನಿಗದಿಯಾಗಿದ್ದ ನಿಯಮಗಳನ್ನು ಭಾರತೀಯ ವಾಯು ಸೇನೆ ಮತ್ತು ರಕ್ಷಣಾ ಇಲಾಖೆ ಪದೇ ಪದೆ ಉಲ್ಲಂಘಿಸಿವೆ.
-ಕಾಪ್ಟರ್‌ಗಳ ಬಳಕೆ ಭಾರತದಲ್ಲಿ ಆಗಬೇಕಾದ್ದರಿಂದ, ಅದರ ಪ್ರಯೋಗಾರ್ಥ ಹಾರಾಟ ದೇಶದಲ್ಲೇ ನಡೆಯಬೇಕಾಗಿತ್ತು. ಆದರೆ ನಿಯಮ ಮೀರಿ ವಿದೇಶದಲ್ಲಿ ನಡೆಸಲಾಗಿದೆ.
-ಅಗಸ್ಟಾ ವೆಸ್ಟ್‌ಲ್ಯಾಂಡ್ 12 ಕಾಪ್ಟರ್‌ಗಳನ್ನು ಪೂರೈಸಲು 3,727 ಕೋಟಿ ನೀಡಬೇಕೆಂದು ಹೇಳಿತ್ತು. ಆದರೆ ಗುತ್ತಿಗೆ ನವೀಕರಣ ಸಮಿತಿ (ಸಿಎನ್‌ಸಿ) ವಹಿವಾಟಿನ ಮೊತ್ತವನ್ನು 4,871 ಕೋಟಿ ಎಂದು ನಿಗದಿ ಮಾಡಿತ್ತು. ಹೀಗಾಗಿ ಬರೋಬ್ಬರಿ 1 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ. ಯಾವುದೇ ಆಧಾರವಿಲ್ಲದೆ ವಹಿವಾಟಿನಲ್ಲಿ ಹೆಚ್ಚಿನ ಮೊತ್ತ ನಿಗದಿ ಮಾಡಲಾಗಿದೆ.
-ಇದರ ಜತೆಗೆ 1,240 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ಪಾವತಿ ಮಾಡಿ 4 ಕಾಪ್ಟರ್‌ಗಳನ್ನು ಖರೀದಿಸಲಾಗಿದೆ.
-ಕಂಪನಿ ಪೂರೈಸಬೇಕಾಗಿದ್ದ ಕಾಪ್ಟರ್‌ಗಳನ್ನು ನೋಡಿಕೊಂಡು ಅವುಗಳ ಬೆಲೆ ನಿರ್ಣಯ ಮಾಡಬೇಕಾಗಿತ್ತು. ಆದರೆ ಮೆರ್ಲಿನ್ ಹೆಲಿಕಾಪ್ಟರ್ ಕಂಪನಿಗಳ ಪ್ರತಿನಿಧಿಗಳ ಜತೆ ಬೆಲೆ ನಿರ್ಣಯ ಮಾಡಲಾಯಿತು.
-ರಕ್ಷಣಾ ಇಲಾಖೆ ಮತ್ತು ಐಎಎಫ್ ಕಾಪ್ಟರ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿವೆ.
-ಕಾಪ್ಟರ್‌ನ ಹಾರಾಟದ ಮಿತಿಯನ್ನು ಆರಂಭದಲ್ಲಿ 6 ಸಾವಿರ ಮೀಟರ್ ಎಂದು ನಿಗದಿ ಮಾಡಲಾಗಿತ್ತು. ಈ ಬಗ್ಗೆ ಐಎಎಫ್, ರಕ್ಷಣಾ ಇಲಾಖೆಗೆ ಕೂಡ ಮಾಹಿತಿ ನೀಡಿತ್ತು. ಅಂತಿಮವಾಗಿ 4,500 ಮೀಟರ್ ಎತ್ತರದಲ್ಲಿ ಕಾಪ್ಟರ್ ಹಾರುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. 2005ರ ಮೇನಲ್ಲಿ ನಡೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.