ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬ್ರಿಟಿಷರ ವಿರುದ್ಧ ಬಂಡೆದ್ದು ಗುಂಡಿಗೆ ಎದೆಯೊಡ್ಡಿದ ವಿದುರಾಶ್ವತ್ಥ

Rashmi Kasaragodu
Updated On : 14 Aug 2013, 12:36 pm


ಗೌರಿಬಿದನೂರು: ವಿದುರಾಶ್ವತ್ಥ ಎಂದೊಡನೆ ತಟ್ಟನೆ ನೆನಪಿಗೆ ಬರುವುದು ಮಹಾಭಾರತದ ವಿಧುರ ನೆಟ್ಟಿರುವ ಅರಳೀ ವೃಕ್ಷ, ಆ ಮರದ ಅಡಿಯಲ್ಲಿರುವ ಅಶ್ವತ್ಥನಾರಾಯಣಸ್ವಾಮಿ ದೇವಸ್ಥಾನ. ನಂತರ ಕರ್ನಾಟಕದ ಜಲಿಯನ್ ವಾಲಾಭಾಗ್, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಗುಂಡಿಗೆ ಪ್ರಾಣತೆತ್ತ ಸ್ಥಳ, ಸ್ಮಾರಕ, ವೀರಸೌಧ ಎಂದೂ ನೆನಪಿನ ಹಾಳೆಗಳಲ್ಲಿ ಹಾದುಬರುತ್ತದೆ. ಈ ಅಶ್ವತ್ಥನಾರಾಯಣಸ್ವಾಮಿ ದೇವಸ್ಥಾನ ವಿಧುರಾಶ್ವತ್ಥದಲ್ಲಿದ್ದು ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಬೆಳೆಯುತ್ತಿದೆ.
ಬ್ರಿಟಿಷರ ತುಪಾಕಿಯ ಗುಂಡಿಗೆ ಬಲಿಯಾದವರ ಸ್ಮರಣಾರ್ಥ ಇಲ್ಲಿ ಒಂದು ಬೃಹತ್ ವೀರಸೌಧವಿದ್ದು ಸ್ವಾಂತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಗ್ರಂಥಾಲಯ, ಸ್ವಾಂತಂತ್ರ್ಯ ಜ್ಯೋತಿ ಇದೆ. ಈ ವೀರಸೌಧದ ನಿರ್ಮಾಣದ ಹಿಂದೆ ಚಾರಿತ್ರಿಕ ಹಿನ್ನೆಲೆ ಅಡಗಿದೆ.
ಇತ್ತೀಚೆಗೆ ಸುಮಾರು 2.96ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಉಸ್ತುವಾರಿಯಲ್ಲಿ ಯಾತ್ರಿನಿವಾಸ್, ಸತ್ಯಾಗ್ರಹ ಪಾರ್ಕ್, ಸ್ತೂಪ ಅಭಿವೃದ್ಧಿ, ಬಯಲು ರಂಗಮಂದಿರ, ಚಿಲ್ಡ್ರನ್ ಪಾರ್ಕ್, ಹುಲ್ಲಿನ ಹಾಸು ಹಾಗೂ 25ಲಕ್ಷ ರು.ಗಳಲ್ಲಿ ಅತಿಗಣ್ಯರ ಅತಿಥಿಗೃಹಗಳಿವೆ.
ಕರ್ನಾಟಕದ ಜಲಿಯನ್ ವಾಲಾಭಾಗ್: 1938 ಏಪ್ರಿಲ್ 8ರಿಂದ 10ರವರೆಗೆ ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಅಂದಿನ ಜನನಾಯಕರು ಮಂಡ್ಯ ಜಿಲ್ಲೆಯ ಶಿವಪುರ ಗ್ರಾಮದಲ್ಲಿ ಪ್ರಥಮ ಕಾಂಗ್ರೆಸ್ ಸಮಾವೇಶನವನ್ನು ನಡೆಸಿದರು. ರಾಷ್ಟ್ರೀಯ ಕಾಂಗ್ರೆಸ್ ಪಾತಾಕೆಯನ್ನು ಹಾರಿಸುವುದು ಧ್ವಜಸತ್ಯಾಗ್ರಹ, ಸರ್ಕಾರಿ ಆಜ್ಞೆ ಉಲ್ಲಂಘಿಸುವುದು ಮುಂತಾದ ಪ್ರಮುಖ ನಿರ್ಧಾರ ಕೈಗೊಂಡರು. ಇದರಿಂದ ಪ್ರಭಾವಿತರಾಗಿ ಸ್ಫೂರ್ತಿಗೊಂಡ ತಾಲೂಕು ಕಾಂಗ್ರೆಸ್ ಮುಖಂಡರಾದ ಎನ್.ಸಿ.ನಾಗಯ್ಯರೆಡ್ಡಿ, ಸ್ವಾತಂತ್ರ್ಯ ಸೇನಾನಿ ಹಾಗೂ ತಾಲೂಕಿನ ಪ್ರಪ್ರಥಮ ಶಾಸಕರಾಗಿದ್ದ ಎನ್.ಸಿ.ನಾಗಯ್ಯರೆಡ್ಡಿ ಅವರ ನೇತೃತ್ವದ ಅಂದಿನ ಸ್ವಾತಂತ್ರ್ಯ ನೇನಾನಿಗಳು ವಿದುರಾಶ್ವತ್ಥವನ್ನು ಹೋರಾಟಕ್ಕೆ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಬ್ರಿಟಿಷರ ವಿರುದ್ದ ಹೋರಾಟ ನಡೆಸುತ್ತಿದ್ದರು.
ಎನ್.ಸಿ.ನಾಗಯ್ಯರೆಡ್ಡಿ, ಎನ್.ಸಿ.ತಿಮ್ಮಾರೆಡ್ಡಿ, ಎಸ್.ವಿ.ಶ್ರೀನಿವಾಸರಾವ್, ಗೆದರೆ ರಾಮಸ್ವಾಮಿ, ಜಿ.ವೆಂಕಟಸ್ವಾಮಿಗೌಡ, ಕಾಂಗ್ರೆಸ್ ಸಿದ್ದಪ್ಪ, ಮುಂತಾದವರು ಕೋಲಾರಜಿಲ್ಲೆಯ ಮುಖಂಡರನ್ನು ಸಂಪರ್ಕಿಸಿ 1938 ಏಪ್ರಿಲ್ 25ರಂದು ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹ ಕಾಂಗ್ರೆಸ್ ಸಭೆ ನಡೆಸಬೇಕೆಂದು ನಿರ್ಣಯಿಸಿದರು.
ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ತಾಲೂಕಿನ ಎಲ್ಲ ಜನತೆಗೂ ತಿಳಿಸಿ ಪ್ರತಿ ಗ್ರಾಮದ ಮನೆಮನೆಗೂ ತೆರಳಿ ಪ್ರಚಾರ ಮಾಡಿ ಏಪ್ರಿಲ್ 20ರಿಂದ 25ರ ವರೆಗೆ ವಿದುರಾಶ್ವತ್ಥ ಜಾತ್ರೆ ನಡೆಸಲು ತೀರ್ಮಾನಿಸಿದರು. ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ ವಿಷಯವನ್ನರಿತ ಅಂದಿನ ಕೋಲಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ತಾಲೂಕಿನಾದ್ಯಂತ 144 ವಿಧಿ ಹೊರಡಿಸಿ ಸಭೆ ಸಮಾರಂಭಗಳನ್ನು ನಡೆಸದಂತೆ ಸೂಚಿಸಿದರು.
ಇದನ್ನು ಲೆಕ್ಕಿಸದೇ ತಮ್ಮ ಹೋರಾಟದ ಪ್ರಯತ್ನ ಮುಂದುವರೆಸಿರುವ ಸುಳಿವರಿತ ಜಿಲ್ಲಾಧಿಕಾರಿ, ತಮ್ಮ ಪೊಲೀಸ್ ತುಕಡಿಯೊಂದಿಗೆ ಏಪ್ರಿಲ್ 15ನೇ ತಾರೀಖೆ ಬಂದು ವಿಧುರಾಶ್ವತ್ಥದಲ್ಲಿ ಮೊಕ್ಕಾಂ ಹೂಡಿದರು.
ಧ್ವಜ ಸತ್ಯಾಗ್ರಹ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದ ಎನ್.ಸಿ.ನಾಗಯ್ಯರೆಡ್ಡಿ, ಶ್ರೀಪಾಲಯ್ಯ, ಗೆದರೆ ರಾಮಸ್ವಾಮಿ, ನರಸೀಯಪ್ಪ, ನಾರಾಯಣಪ್ಪ, ಸೂರ್ಯನಾರಾಯಣರಾವ್, ವೆಂಕಟರಾವ್, ಸಂಗಪ್ಪ, ಮುಂತಾದ ನಾಯಕರು ಹಾಗೂ ಕಾರ್ಯಕರ್ತರನ್ನು ಪಟ್ಟಿ ಮಾಡಿ ಏಪ್ರಿಲ್ 22ರಂದು ಬಂಧಿಸಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.
ಈ ಸಂಗತಿ ತಾಲೂಕಿನಲ್ಲಿ ಅಲ್ಲದೆ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಒಂದೇ ದಿನದಲ್ಲಿ ವ್ಯಾಪಿಸಿ ಮುಖಂಡರು ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಏಪ್ರಿಲ್ 25ರಂದು ವಿಧುರಾಶ್ವತ್ಥದಲ್ಲಿ ಜಮಾವಣೆಗೊಂಡರು.
ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಟಿ.ರಾಘವಾಚಾರ್ ಮತ್ತು ಅವರ ಸುತ್ತಲೂ ಸುತ್ತುವರೆದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಇದನ್ನು ಕಂಡ ಜನರು ರೊಚ್ಚಿಗೆದ್ದು ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತ್ ಮಾತಾಕಿ ಜೈ ಎಂಬ ಘೋಷಣೆ ಪ್ರಾರಂಭಿಸಿದಾಗ ಟಿ.ರಾಘವಾಚಾರ್ ಜನರನ್ನು ಸಮಾಧಾನದಿಂದಿರಲು ವಿನಂತಿಸುತ್ತಿದ್ದರು.
ಗುಂಡಿನ ಸುರಿಮಳೆ: ಈ ನಡುವೆ ಸತ್ಯಾಗ್ರಹಿಗಳು ಹಾಗೂ ಪೊಲೀಸರ ನಡುವೆ ಉದ್ರಿಕ್ತ ವಾತಾವರಣವಾಗಿ ಪೊಲೀಸರು ಲಾಠಿ ಪ್ರಹಾರ ಪ್ರಾರಂಭಿಸಿದಾಗ ಅದನ್ನು ಪ್ರತಿಭಟಿಸಿದ ದೇಶಭಕ್ತ ಹೋರಾಟಗಾರರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈಯಲು ಪ್ರಾರಂಭಿಸಿದರು. ಓಡಿಹೋಗುತ್ತಿದ್ದವರ ಮೇಲೆ ಗುಂಡು ಹಾರಿಸಲಾಯಿತು. ಈ ದುರ್ಘಟನೆಯಲ್ಲಿ ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನ್ನಗಾರಿ ನರಸಪ್ಪ, ಹನುಮಂತಪ್ಪ, ಕಾರಗೊಂಡಹಳ್ಳಿ ಮಲ್ಲಯ್ಯ, ನಾಮಾ ಅಶ್ವತ್ಥನಾರಾಯಣಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರುಗೌರಮ್ಮ ಸ್ಥಳದಲ್ಲೇ ಪ್ರಾಣತೆತ್ತರೆ ನೂರಾರು ಜನರು ಗಾಯಗೊಂಡರು.
ಈ ನಡುವೆ ಪ್ರಾಣಾಪಾಯದಿಂದ ಪಾರಾದ ನಾಯಕರು, ಕಾರ್ಯಕರ್ತರು ಗಾಯಗೊಂಡರವನ್ನು ಆಸ್ಪತ್ರೆಗೆ ಸೇರಿಸಿ ರೂಮಾಲೆ ಚನ್ನಬಸವಯ್ಯ, ನಂಜುಂಡಯ್ಯ ಇಬ್ಬರೂ ಸ್ಥಳದಲ್ಲೇ ಒಂದು ವರದಿಯನ್ನು ತಯಾರಿಸಿಕೊಂಡು ಬೆಂಗಳೂರಿಗೆ ಹೋಗಿ ಪಿಟಿಐ, ಬಿಬಿಸಿ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ಸುದ್ದಿ ನೀಡಿದ್ದರಿಂದ ಇಡೀ ವಿಶ್ವದಾದ್ಯಂತ ಪ್ರಚುರವಾಯಿತು. ವಿದುರಾಶ್ವತ್ಥ ಹತ್ಯಾಕಾಂಡವು ದಕ್ಷಿಣ ಜಲಿಯನ್ ವಾಲಾಭಾಗ್ ಹತ್ಯಾಕಾಂಡವೆಂದು ಭಾವಿಸಲಾಯಿತು. ಮಹಾತ್ಮಾಗಾಂಧಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್, ಆಚಾರ್ಯ ಕೃಪಲಾನಿ ಅವರುಗಳನ್ನು ವಿದುರಾಶ್ವತ್ಥಕ್ಕೆ ಕಳುಹಿಸಿ ದುರ್ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ವಿದುರಾಶ್ವತ್ಥಕ್ಕೆ ಆಗಮಿಸಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

-ವಿ.ಡಿ.ಗಣೇಶ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement