ಯಾರಿಗೂ ಬೇಡವಾದ ಜಿಲ್ಲಾ ಸಮಾಜ ಕಲ್ಯಾಣ
ಕೋಲಾರ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಯಾರಿಗೂ ಬೇಡವಾದ ಕೂಸಾಗಿದೆ.
ಹಲವು ವರ್ಷಗಳಿಂದ ಇಲಾಖೆಗೆ ಕಾಯಂ ಅಧಿಕಾರಿ ವರ್ಗಾವಣೆಯಾಗಿ ಬಂದಿಲ್ಲ, ಈ ಹಿಂದೆ ಕಾರ್ಯ ನಿರ್ವಹಿಸಿದ ಕೆಲ ಅಧಿಕಾರಿಗಳು ಪಟ್ಟಭದ್ರ ಹಿತಾಸಕ್ತಿಗಳ ಮರ್ಜಿಗೆ ಒಳಗಾಗಿ ಸರ್ಕಾರದ ಹಣ ನುಂಗಿ ನೀರು ಕುಡಿದು ಶಿಕ್ಷೆ ಅನುಭವಿಸಿದ್ದಾರೆ, ಮತ್ತೆ ಕೆಲವರು ತಮ್ಮ ಸ್ವಯಂಕೃತ ಅಪರಾಧಗಳಿಂದ ಮನೆ ಸೇರಿದ್ದಾರೆ.
ವಿವಿಧ ಇಲಾಖೆಗಳಲ್ಲಿನ ಎರಡನೇ ದರ್ಜೆಯ ಅಧಿಕಾರಿಗಳನ್ನು ಪ್ರಭಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಇಲಾಖೆಯನ್ನು ಕಾಪಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಪ್ರಭಾರಿ ಅಧಿಕಾರಿಗಳಲ್ಲೂ ಕೆಲವರು ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿದು ಸರ್ಕಾರದ ಹಣವನ್ನು ಸಿಕ್ಕಿದ್ದು ಸೀರುಂಡೆ ಎಂಬಂತೆ ಲಪಟಾಯಿಸಿ ಹೋಗಿರುವುದರಿಂದ ಇಲಾಖೆಯನ್ನು ಸರಿಪಡಿಸುವುದಕ್ಕೆ ಜಿಲ್ಲಾ ಆಡಳಿತ ಮತ್ತು ಜಿಪಂಗೆ ಸಾಧ್ಯವಾಗದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಇಲಾಖೆಗೆ ಮೇಜರ್ ಸರ್ಜರಿ ಮಾಡಬೇಕೆಂಬ ಆಸೆಯಿದ್ದರೂ ಸರಿಯಾದ ಅಧಿಕಾರಿ ಸಿಗದಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಬರುವುದಕ್ಕೆ ಯಾವುದೇ ಅಧಿಕಾರಿ ಒಪ್ಪುತ್ತಿಲ್ಲ.
ಮಂಗಳವಾರ ನಡೆದ ಜಿಪಂ ಕೆಡಿಪಿ ಸಭೆಯಲ್ಲಿ ಇಲಾಖೆಯ ಪ್ರಭಾರ ಅಧಿಕಾರಿ ಗುರುಮೂರ್ತಿ ಅವರು, ತಮ್ಮ ಕಷ್ಟವನ್ನು ಹೀಗೆ ತೋಡಿಕೊಂಡರು. ಸಿಬ್ಬಂದಿ ಕೊರತೆ, ಹಾಸ್ಟೆಲ್ಗಳಲ್ಲಿ ದಿನಗೂಲಿ ನೌಕರರ ದರ್ಬಾರು, ಸರ್ಕಾರ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನೇಕ ಸವಲತ್ತುಗಳಿಂದಾಗಿ ಹಾಸ್ಟೆಲ್ ಪ್ರವೇಶ ಸಂಖ್ಯೆಯಲ್ಲಿ ಶೇ.30ರಷ್ಟು ಕುಸಿತ, ವಿದ್ಯಾರ್ಥಿ ವೇತನ ವಿತರಣೆ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಹಾಸ್ಟೆಲ್ಗಳಲ್ಲಿ ಕರ್ತವ್ಯ ಲೋಪವೆಸಗುವ ದಿನಗೂಲಿ ನೌಕರರನ್ನು ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸದ ವಾರ್ಡನ್ಗಳನ್ನು ಸಸ್ಪೆಂಡ್ ಮಾಡಿ, ಇದರಿಂದ ಬೇರೆಯವರಿಗೆ ಬುದ್ಧಿ ಬರುತ್ತದೆ ಎಂದು ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ಸಲಹೆ ನೀಡಿದರು. ಆಗ ಪ್ರಭಾರ ಅಧಿಕಾರಿ ಗುರುಮೂರ್ತಿ, ಮೇಡಂ ನೀವು ಒಂದಿಬ್ಬರು ಸಿಬ್ಬಂದಿ ಅಮಾನತಿಗೆ ಶಿಫಾರಸು ಮಾಡಿ, ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ, ಕ್ರಮ ಕೈಗೊಳ್ಳುವುದು ಹೇಳಿದಷ್ಟು ಸುಲಭವಲ್ಲ. ತಾವೇ ಈ ಹಿಂದೆ ಕೆಂಬೋಡಿ ಗ್ರಾಮದ ಹಾಸ್ಟೆಲ್ಗೆ ಭೇಟಿ ನೀಡಿ, ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರಿ, ಅದ್ರು ನಿಮ್ಮಿಂದ ಆಗಲಿಲ್ಲ. ಇನ್ನು ನಾನೇಗೆ ಸಸ್ಪೆಂಡ್ ಮಾಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೆಲ್ಲ ಗಮನಿಸಿದರೆ ಸಮಾಜ ಕಲ್ಯಾಣ ಇಲಾಖೆಯನ್ನು ಜಿಲ್ಲಾ ಆಡಳಿತ ಇಲ್ಲವೇ ಜಿ.ಪಂನಿಂದ ಸರಿಪಡಿಸಲು ಹೇಗೆ ಸಾಧ್ಯವೆಂಬ ಅನುಮಾನ ಕಾಡುತ್ತಿದೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಹೊರಗಿನಿಂದ ಯಾರೊಬ್ಬರು ಬರುವುದಕ್ಕೆ ಇಷ್ಟಪಡುತ್ತಿಲ್ಲ. ಶಿಕ್ಷಣ ಇಲಾಖೆಯ ನಾಗೇಂದ್ರ ಪ್ರಸಾದ್ ಅವರನ್ನು ಪ್ರಭಾರ ಅಧಿಕಾರಿಯಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ. ಆದರೆ,ಇದಕ್ಕೆ ಸುತಾರಾಂ ಒಪ್ಪದ ಡಿಡಿಪಿಐ ಪದ್ಮನಾಭ್, ದಯವಿಟ್ಟು ನಾಗೇಂದ್ರ ಪ್ರಸಾದ್ ಅವರನ್ನು ಸಮಾಜ ಕಲ್ಯಾಣ ಇಲಾಖೆಗೆ ನಿಯೋಜಿಸಬೇಡಿ, ಶಿಕ್ಷಣ ಇಲಾಖೆಗೆ ಸಮಸ್ಯೆ ಆಗುತ್ತದೆ, 10ನೇ ತರಗತಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಅವರೇ ಕಾರಣ. ಹೀಗಿರುವಾಗ ನಾಗೇಂದ್ರ ಪ್ರಸಾದ್ ಅಲ್ಲಿಗೆ ಹೋದ್ರೆ ನಮಗೆ ನಷ್ಟ ಎಂದಿರುವುದು ಗಮನಸಿದರೆ ಇಲ್ಲಿನವರೂ ಅಲ್ಲಿ ಸಲ್ಲುವುದಿಲ್ಲವೆಂಬುದು ಸಷ್ಟವಾಗುತ್ತಿದೆ.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯನ್ನು ಸರಿಪಡಿಸುವುದು ನಮ್ಮಿಂದ ಸಾಧ್ಯವಿಲ್ಲ, ರಾಜ್ಯ ಮಟ್ಟದಲ್ಲಿ ಏನಾದರೂ ದಿಟ್ಟ ನಿರ್ಧಾರಗಳು ಕೈಗೊಂಡಲ್ಲಿ ಮಾತ್ರ ಬದಲಾವಣೆ ಕಾಣಲು ಸಾಧ್ಯವೆಂದು ಜಿ.ಪಂ ಸಿಇಒ ಜುಲ್ಫಿಖಾರ್ ಉಲ್ಲಾ ಹೇಳಿರುವುದು ಗಮನಿಸಿದರೆ ಸ್ವತಃ ಮುಖ್ಯಮಂತ್ರಿ ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೇನೋ ಎಂಬ ಅನುಮಾನ ಉಂಟಾಗಿದ್ದು, ಸರ್ಕಾರ ಶೀಘ್ರ ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ ಸಮಾಜ ಕಲ್ಯಾಣ ಇಲಾಖೆಯನ್ನು ಕಾಪಾಡುವುದು ಇನ್ನಷ್ಟು ಸಮಸ್ಯೆಯಾಗಬಹುದು.
ಸಮಾಜ ಕಲ್ಯಾಣ ಇಲಾಖೆಯನ್ನು ಸರಿಪಡಿಸಲು ಸಾಧ್ಯವಾಗದಿರುವುದಕ್ಕೆ ಕಾರಣಗಳು ನೂರಾರು. ಇಲಾಖೆಗೆ ಬಂದ ದಕ್ಷ ಅಧಿಕಾರಿಗಳನ್ನು ನೆಮ್ಮದಿಯಿಂದ ಹಾಗೂ ಕಾನೂನು ಪ್ರಕಾರ ಕೆಲಸ ಮಾಡಲು ಅವಕಾಶ ನೀಡದೆ ಕಿರುಕುಳ ನೀಡಿರುವುದು. ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಮನ್ನಣೆ ನೀಡದೆ ನಿಯಮಗಳನ್ನು ಪಾಲಿಸಿದ ಕಾರಣ ಇಲ್ಲಸಲ್ಲದ ಆರೋಪಗಳಿಂದ ಬೇಸತ್ತು ಕೆಲ ಅಧಿಕಾರಿಗಳು ಕೋಲಾರ ಜಿಲ್ಲೆಯ ಸಹವಾಸ ಸಾಕೆಂದು ವರ್ಗಾವಣೆ ಮಾಡಿಸಿಕೊಂಡಿರುವುದು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ನಾವೇಕೆ ಅಲ್ಲಿಗೆ ಹೋಗಿ ಸಮಸ್ಯೆಯಲ್ಲಿ ಸಿಲುಕಬೇಕೆಂದು ಹಿಂದೇಟು ಹಾಕುತ್ತಿದ್ದಾರೆ.
- ಪಾ.ಶ್ರೀ.ಅನಂತರಾಮ್