ಶಿಕ್ಷಣ ಪ್ರೇಮಿ ಡಾ. ಶೇಷಗಿರಿ ಇನ್ನಿಲ್ಲ
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಎಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ ಮಹಾದಾನ ನೀಡಿದ ಖ್ಯಾತ ಅರವಳಿಕೆ ತಜ್ಞ ವೈದ್ಯ ಡಾ. ಎಂ.ಎಸ್. ಶೇಷಗಿರಿ (87) ಮಂಗಳವಾರ ನಿಧನರಾದರು.
ಮಹಾದಾನ ನೀಡಿದ ಹಿನ್ನೆಲೆಯಲ್ಲಿ ಕೆಎಲ್‌ಇ ಎಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ ಶೇಷಗಿರಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಶೇಷಗಿರಿ ಅವರು 1953ರಲ್ಲಿ ಎಂಬಿಬಿಎಸ್ ಪೂರೈಸಿ 1955ರಲ್ಲಿ ಅರವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಮೆರಿಕೆಯ ಕ್ಲೀವಲ್ಯಾಂಡ್‌ನಲ್ಲಿ ವೈದ್ಯ ಸೇವೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಇಂಗ್ಲೆಂಡ್, ಘಾನಾ ಮತ್ತು ನೈಜಿರಿಯಾಗಳಲ್ಲೂ ಸುದೀರ್ಘ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅರವಳಿಕೆ ಶಾಸ್ತ್ರದಲ್ಲಿ ಅಪರೂಪದ ತಜ್ಞರೆಂಬ ಖ್ಯಾತಿ ಪಡೆದಿದ್ದ ಅವರು ತಮ್ಮ ಸುದೀರ್ಘ ಸೇವೆಯ ನಂತರ ಬೆಳಗಾವಿಯಲ್ಲಿ ನೆಲೆಸಿ, ತಮ್ಮನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಕೋರೆ ಸಂತಾಪ: ಡಾ.ಎಂ.ಎಸ್. ಶೇಷಗಿರಿ ನಿಧನದಿಂದ ಸಮಾಜಕ್ಕೆ ಹಾಗೂ ವಿಶೇಷವಾಗಿ ಕೆಎಲ್‌ಇ ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಸಂತಾಪ ವ್ಯಕ್ತಪಡಿಸಿದ್ದಾರೆ.