ಸಬ್ಸಿಡಿಗೆ ಲಂಚ: ಅಧಿಕಾರಿ 'ಲೋಕಾ'ಬಲೆಗೆ
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೈಗಾರಿಕಾ ಕೇಂದ್ರದಲ್ಲಿ ಕೈಗಾರಿಕಾ ಉತ್ತೇಜನ ಅಧಿಕಾರಿಯಾದ ವಾಮನ ನಾಯ್ಕ ಬಂಧಿತರು. ಸಬ್ಸಿಡಿ ಸೌಲಭ್ಯದ ಸಣ್ಣ ಕೈಗಾರಿಕೆ ಸ್ಥಾಪಿಸಲು ಕಲ್ಲಡ್ಕದ ಜಗದೀಶ್ ಎಂಬವರು ವಾಮನ ನಾಯ್ಕರನ್ನು ಸಂಪರ್ಕಿಸಿದಾಗ ಅವರು 7 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಜಗದೀಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪೂರ್ವ ನಿಗದಿಯಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಮುಂಗಡ 4 ಸಾವಿರ ಲಂಚ ನೀಡುತ್ತಿರುವಾಗ ವಾಮನ ನಾಯ್ಕರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವಿಠಲದಾಸ ಪೈ, ಇನ್ಸ್ಪೆಕ್ಟರ್ ಉಮೇಶ್ ಶೇಟ್, ಮಂಜಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಗೆ ಆ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.