ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ಕೂಟ್ರಲ್ಲೇ ಶಂಭುಲಿಂಗೇಗೌಡರ ಪ್ರಚಾರ

Rashmi Kasaragodu
Updated On : 14 Aug 2013, 12:13 pm

ಕ.ಪ್ರ.ವಾರ್ತೆ ಟಿ ಮಂಡ್ಯ ಟಿ ಆ.13
ಸ್ಕೂಟರ್ ಮುಂಭಾಗದಲ್ಲಿ ಗಾಂಧಿ ಫೋಟೋ, ಹಿಂಬದಿಯಲ್ಲಿ ಮೈಕ್ಸೆಟ್ ಹಾಕಿಕೊಂಡು ಊರೂರು, ಕೇರಿ ಕೇರಿ ಸುತ್ತಾಡಿ ಮತಯಾಚಿಸುವ ಗಾಂಧಿ ವೇಷಧಾರಿ ಅಭ್ಯರ್ಥಿಯೊಬ್ಬರು ನಿಮ್ಮೂರಿಗೆ ಬರುತ್ತಿದ್ದಾರೆ. ಅವರ ಹೆಸರು ಶಂಭುಲಿಂಗೇಗೌಡ.
ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಂಭುಲಿಂಗೇಗೌಡ, ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿ ದೇಶಹಳ್ಳಿ ಗ್ರಾಮದವರು. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹೋಲಿಕೆ ಮಾಡಿದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿ ಮತದಾರರ ಗಮನ ಸೆಳೆಯುತ್ತಿದ್ದಾರೆ.
ಶಂಭುಲಿಂಗೇಗೌಡರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಂತೆ ಐಷರಾಮಿ ಕಾರಿನಲ್ಲಿ ಜುಮ್ ಅಂತ ಪ್ರಚಾರ ನಡೆಸುತ್ತಿಲ್ಲ. ಬದಲಿಗೆ ಸ್ಕೂಟರ್ನಲ್ಲಿ ಬಿಸಿಲು, ನೆರಳು, ಮಳೆ ಎನ್ನದೆ ಊರಿಂದ ಊರಿಗೆ, ಕೇರಿಯಿಂದ ಕೇರಿಗೆ ಸಾಗುತ್ತಿದ್ದಾರೆ.
ಇವರ, ಪ್ರಚಾರದಲ್ಲಿ ವಿಶಿಷ್ಟ ಎಂದರೆ ಸ್ಕೂಟರ್ನ ಹ್ಯಾಂಡಲ್ಗೆ ಮಹಾತ್ಮ ಗಾಂಧೀಜಿ ಫೋಟೋ ನೇತುಹಾಕಿ, ಹಿಂಬದಿಯಲ್ಲಿ ದೊಡ್ಡದಾದ ಮೈಕ್ಸೆಟ್ ಇಟ್ಟುಕೊಂಡು, ಕುತ್ತಿಗೆಯಲ್ಲಿ ಮೈಕ್ಸಿಕ್ಕಿಸಿ ಸ್ಕೂಟರ್ ಓಡಿಸುತ್ತಲೇ ಮತ ಭಿಕ್ಷೆ ಯಾಚಿಸುತ್ತಿದ್ದಾರೆ. ಸಾರಿಗೆ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಪ್ರಮುಖ ವೃತ್ತಗಳು, ವಾಣಿಜ್ಯ ರಸ್ತೆಗಳ ಬೀದಿ... ಹೀಗೆ ಎಲ್ಲೆಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆಯೋ ಅಂತಹ ಕಡೆಗಳಲ್ಲಿ ಭಾಷಣ ಬಿಗಿಯುತ್ತಾ ಮತಯಾಚನೆಯಲ್ಲಿ ತೊಡಗಿದ್ದಾರೆ.
ಶಂಭುಲಿಂಗೇಗೌಡ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಠೇವಣಿ ಹಣ ಭರಿಸುವಷ್ಟು ಆರ್ಥಿಕ ಶಕ್ತಿಯಿಲ್ಲ. ಆದರೂ, ತನ್ನ ಕೃಷಿಯಲ್ಲಿ ಅಲ್ಪಸ್ವಲ್ಪ ಉಳಿಸಿದ ಹಾಗೂ ದಾನಿಗಳಿಂದ ಪಡೆದ ಹಣವನ್ನು ಠೇವಣಿಗೆ ನೀಡಿದ್ದಾರೆ.
ಇನ್ನು ಮತದಾರರರನ್ನು ಹಣ ಹೆಂಡದಿಂದ ಓಲೈಸುವ ಬದಲು ರೈತರ ಸಮಸ್ಯೆ ಮತ್ತು ಅದಕ್ಕೆ ಪರಿಹಾರ, ಗಾಂಧಿ ಆದರ್ಶಗಳ ಬಗ್ಗೆ ಭಾಷಣ ಬಿಗಿಯುತ್ತಾ ಮತದಾರರ ಮನ ಪರಿವರ್ತನೆ ಪ್ರಯತ್ನದಲ್ಲಿ ತೊಡಗಿದ್ದಾರೆ.
ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನೇ ಗೀಳು ಮಾಡಿಕೊಂಡಿರುವ ಶಂಭುಲಿಂಗೇಗೌಡರು, ಆರಂಭದಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸುತ್ತಿದ್ದರು. ನಂತರ ಬೈಸಿಕಲ್ ಏರಿ ಊರೂರು ಸುತ್ತಿದರು. ಈಗ ಟಿವಿಎಸ್ ಚಾಂಪ್ ಸ್ಕೂಟರ್ನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಗೌಡರ ಪಾಲಿಗೆ ಎಲ್ಲಾ ಚುನಾವಣೆಗಳು ದಂಡಯಾತ್ರೆ ಆಗುತ್ತಿದೆ.
ಠೇವಣಿ ನಷ್ಟ:  ದೇಶವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವುದರೊಂದಿಗೆ ಆರಂಭವಾದ ಶಂಭುಲಿಂಗೇಗೌಡ ಅವರು, ಈವರೆಗೆ 8 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಟಿ.ದಾಸರಹಳ್ಳಿ ಕ್ಷೇತ್ರದಿಂದ ಎಸ್.ಮುನಿರಾಜು ಎದುರು ಸ್ಪರ್ಧಿಸಿ 1651 ಮತಗಳನ್ನು ಪಡೆದಿದ್ದರು. 2009ರಲ್ಲಿ ನಡೆದ ಮದ್ದೂರು ಕ್ಷೇತ್ರದ ಉಪ ಚುನಾವಣೆಯಲ್ಲಿ 2554 ಮತಗಳನ್ನು ಪಡೆದು 4ನೇ ಸ್ಥಾನ ಗಳಿಸಿದ್ದರು.
ಬೆಂಗಳೂರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ 2010ರಲ್ಲಿ ನಡೆದ ಉಪ ಚುನಾಣೆಯಲ್ಲಿ ವಿ.ಸೋಮಣ್ಣ ಅವರ ವಿರುದ್ಧ ಅಖಾಡಕ್ಕೆ ಇಳಿದಿದ್ದರು. 2011ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ಶಂಭುಲಿಂಗೇಗೌಡ ಅವರು, ಎರಡನೇ ಬಾರಿಗೆ ಸಂಸತ್ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. 2009ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ 15,234 ಮತಗಳನ್ನು ಪಡೆದಿದ್ದರು

-ಎಂ. ಅಫ್ರೋಜ್ ಖಾನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement