ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆ: ಪ್ರಧಾನಿಗೆ ಮೋದಿ ಆಹ್ವಾನ
ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದೇ ..
ಭುಜ್: ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಬಹಿರಂಗ ಚರ್ಚೆಗೆ ಗುರುವಾರ ಆಹ್ವಾನ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿ ಭಾಷಣವನ್ನು ಕಟುವಾಗಿ ಟೀಕಿಸಿದ ಮೋದಿ, ನನಗೆ ಏನಾದರೂ ಸ್ಫೂರ್ತಿ ಸಿಗಬಹುದು ಎಂದು ಇಂದು ದೇಶವನ್ನು ಉದ್ದೇಶಿಸಿ ಕೆಂಪುಕೋಟೆಯಲ್ಲಿ ಮಾತನಾಡಿ ಪ್ರಧಾನಿಯವರ ಭಾಷಣವನ್ನು ಕೇಳುತ್ತಿದ್ದೆ. ಆದರೆ ಅವರ ಭಾಷಣ ನನಗೆ ಮಾತ್ರವಲ್ಲ, ಇಡೀ ದೇಶಕ್ಕೆ ತೀವ್ರ ನಿರಾಸೆಯುಂಟು ಮಾಡಿದೆ ಎಂದರು.
ಭುಜ್‌ನ ಲಾಲನ್ ಕಾಲೇಜಿನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ನರೇಂದ್ರ ಮೋದಿ, ಕೆಂಪುಕೋಟೆಯಿಂದ ಪ್ರಧಾನಿ ಅವರು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುತ್ತಾರೆಂದು ಭಾವಿಸಿದ್ದೆ, ಆದರೆ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವನ್ನು ತಳೆಯದೆ, ಮೃದು ಧೋರಣೆ ತೊರಿರುವುದು ಅವರ ದೌರ್ಬಲ್ಯವನ್ನು ಎತ್ತಿತೋರಿಸುತ್ತದೆ ಎಂದರು.
ಭಾರತೀಯ ಐವರು ಯೋಧರ ಹತ್ಯೆ ಕುರಿತಂತೆ ಪಾಕಿಸ್ತಾನದ ಕ್ರಮದ ವಿರುದ್ಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಿಡಿಕಾರಿದ್ದರು. ರಾಷ್ಟ್ರಪತಿಗಳು ವ್ಯಕ್ತಪಡಿಸಿದ್ದ ಆತಂಕವನ್ನು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ ಎಂದುಕೊಂಡಿದ್ದೆ, ಆದರೆ ಹಾಗೇ ಆಗಲಿಲ್ಲ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.
ಕೆಂಪುಕೋಟೆ ಯಾವಾಗಲೂ ನಮ್ಮ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಹೆಚ್ಚಿಸಲು ಬಳಕೆಯಾಗಬೇಕು. ಪಾಕ್‌ನ ಗುಂಡಿನ ದಾಳಿಗೆ ಭಾರತದ ಐವರು ಯೋಧರ ಜೀವ ತೆತ್ತಿರುವ ಇಂತಹ ಸಂದರ್ಭದಲ್ಲಿ ಪ್ರಧಾನಿ ಕನಿಷ್ಠ ಪಕ್ಷ ಭಾರತದ ಸೇನಾಪಡೆಗಳ ನೈತಿಕ ಸ್ಥೈಯ ಹೆಚ್ಚಿಸಬೇಕಿತ್ತು ಎಂದು ಮೋದಿ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಪ್ರಧಾನಿ ಅವರ ಸ್ವಾಂತಂತ್ರ್ಯ ಭಾಷಣದ ಒಂದೊಂದು ಮಾತಿಗೂ ಪ್ರತ್ಯುತ್ತರ ನೀಡಿದ ಮೋದಿ, ದೇಶದಲ್ಲಿ ಭ್ರಷ್ಟಾಚಾರ ಮತ್ತು ಹೆಚ್ಚುತ್ತಿರುವ ಹಣದುಬ್ಬರಕ್ಕೆ ಪ್ರಧಾನಿಯೇ ಹೊಣೆ ಎಂದರು. 60 ವರ್ಷಗಳ ನಂತರವೂ ನಾವಿನ್ನೂ ದಾಸ್ಯದಲ್ಲೆ ಬದುಕುತ್ತಿದ್ದೇವೆ. ಇದಕ್ಕೆ ಕಾಂಗ್ರೆಸ್ ಕಾರಣ ಎಂದು ದೂರಿದರು. ಅಲ್ಲದೆ ಅಂತಹ ಮನಸ್ಥಿಯಿಂದ ನಾವು ಹೇಗೆ ಮುಕ್ತರಾಗಬೇಕು ಎಂಬುದನ್ನು ಕಲಿಯಬೇಕಾದ ಅಗತ್ಯವಿದೆ ಎಂದರು.
ಮುಂಗಾರು ಅಧಿವೇಶನದಲ್ಲಿ ಸಂಸತ್ ಕಲಾಪಗಳು ಪದೇ ಪದೇ ಮುಂದೂಡಲು ಯುಪಿಎ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಮೋದಿ ಆರೋಪಿಸಿದರು.