ಎಲ್ಲರಿಗೂ ವಸತಿ, ಅನ್ನ, ಬಟ್ಟೆ ಸ್ವಾತಂತ್ರ್ಯದ ಆಶಯ
ಕ.ಪ್ರ.ವಾರ್ತೆ ಮೈಸೂರು ಆ. 14
ತಮಗೆ ಎಲ್ಲಾ ಅನುಕೂಲವಿದ್ದರೂ ಮತ್ತಷ್ಟು ಸೌಲಭ್ಯಗಳು ಬೇಕು ಎಂದು ಬಯಸುವ ಜನರಿರುವ ಈ ಸಮಾಜದಲ್ಲಿ, ತಮಗೆ ಏನು ಬೇಡ, ಜನರ ಬದುಕು ಹಸನಾಗಲಿ ಎನ್ನುವವರ ಸಂಖ್ಯೆ ತೀರಾ ಕಡಿಮೆ. ಅಂತಹ ಅಪರೂಪದ ಹಿರಿಯ ಚೇತನ, ಸ್ವಾತಂತ್ರ್ಯ ಹೋರಾಟಗಾರ ಸಿ. ದೊಡ್ಡೇಗೌಡ.
ಜನರು ಸುಖ, ಶಾಂತಿಯಿಂದ ಬದುಕಬೇಕೆಂಬ ಸದಾಶಯದೊಂದಿಗೆ ಗಳಿಸಿಕೊಟ್ಟ ಸ್ವಾತಂತ್ರ್ಯದ ನಿಜವಾದ ಆಶಯ ಇಂದಿಗೂ ಈಡೇರಿಲ್ಲ ಎಂಬುದು ಇವರ ಕೊರಗು. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಿದರೆ ದೇಶದ ಜನರ ನೆಮ್ಮದಿಯಾಗಿ ಬದುಕಬಹುದು ಎಂಬ ಉದ್ದೇಶದಿಂದ ಅಂದಿನ ಮಹನೀಯರು ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಆದರೆ, ಆ ಸ್ವಾತಂತ್ರ್ಯ ಕೆಲವರ ಪಾಲಿಗೆ ಮಾತ್ರ ಲಭ್ಯವಾಗಿದೆ ಎನ್ನತಾರೆ ಅವರು.
ಮೈಸೂರಿನ ಕನಕಗಿರಿ ಬಡಾವಣೆ ನಿರ್ಮಾಣವಾಗಿ ಸುಮಾರು 30- 40 ವರ್ಷಗಳಾಗಿದ್ದು, ಇಲ್ಲಿನ ನಿವೇಶನಗಳನ್ನು ಸರ್ಕಾರ ಸಕ್ರಮಗೊಳಿಸಲು ವಿಳಂಬ ಮಾಡುತ್ತಲೇ ಇದೆ. ಇದರಿಂದಾಗಿ ಜನರು ಆತಂಕಪಡುವಂತಾಗಿದೆ. ಕನಕಗಿರಿ ಬಡಾವಣೆ ನಿರ್ಮಾಣ ಮಾಡುವಲ್ಲಿ ದೊಡ್ಡೇಗೌಡರ ಪಾತ್ರ ಬಹುಮುಖ್ಯ. ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿನ ಹೆಂಚಿನ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರಿಗೆ ಸಾಮಾಜಿಕ ಕಾಳಜಿ ಇಂದಿಗೂ ಮರೆಯಾಗಿಲ್ಲ. ಸರ್ಕಾರ ನಿವೇಶನ ಮಾಲೀಕರಿಗೆ ಸ್ವಾಧೀನಪತ್ರ ದೊರಕಿಸಿಕೊಡಬೇಕು ಎಂಬುದು ಅವರೊಳಗಿನ ಬಹುದೊಡ್ಡ ಆಸೆ.
85 ರ ವಯೋವಾನದ ದೊಡ್ಡೇಗೌಡ ಆನಾರೋಗ್ಯದ ಕಾರಣ ನಡೆಯಲು ಶಕ್ತಿಯಿಲ್ಲದೆ ಮತ್ತೊಬ್ಬರನ್ನು ಅವಲಂಬಿಸುತ್ತಾರೆ. ಅವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಎರಡನೇ ಮಗ ಗೋಪಾಲ ಹಾಗೂ ಸೊಸೆ ಮಹಾಲಕ್ಷ್ಮಿ ಅವರ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮೂಲತಃ ಗುಂಡ್ಲುಪೇಟೆಯವರಾದ ಸಿ. ದೊಡ್ಡೇಗೌಡ ಅವರು 18ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು. ರಾಮಣ್ಣ, ಶ್ರೀಕಂಠಚಾರ್, ದೊಡ್ಡೇಗೌಡ, ಪಾಪಣ್ಣ, ಪುಟ್ಟವೀರೇಗೌಡ ಮುಂತಾದವರ ಜತೆಯಲ್ಲಿ ಹೋರಾಟಕ್ಕಿಳಿದವರು. ನಂತರ ಮೈಸೂರಿಗೆ ಬಂದು ಇಲ್ಲಿನ ಸಂಗ್ರಾಮದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವದ ಸನ್ಮಾನಕ್ಕೆ ಪಾತ್ರರಾಗಿದ್ದು, ಸರ್ಕಾರ ನೀಡುವ ಪಿಂಚಣಿಯಿಂದ ಬದುಕು ನಡೆಸುತ್ತಿದ್ದಾರೆ. ಸ್ಮರಣಾ ಶಕ್ತಿ ಕುಂದಿರುವ ಹಿನ್ನೆಲೆಯಲ್ಲಿ ಹೋರಾಟದ ಕಾಲಮಾನದ ಇಸವಿ ಅವರಿಗೆ ನೆನಪಿಲ್ಲವಂತೆ.
ಮಾ. ವೆಂಕಟೇಶ್