ಸಮಗ್ರ ಪ್ರಗತಿಗೆ ಸಂದೇಶ ಸಿಗಲಿ
ಕೋಲಾರ: ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...
ಕವಿ ಸಿದ್ದಲಿಂಗಯ್ಯನವರು 70ರ ದಶಕದಲ್ಲಿ ದೇಶದ ಪರಿಸ್ಥಿತಿ ಕುರಿತು ಬರೆದ ಕವಿತೆ ಹಿಂದುಳಿದ ಹಾಗೂ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯ ಪಾಲಿಗೆ ಇಂದಿಗೂ ಪ್ರಸ್ತುತವಾಗಿದೆ.
ಒಂದು ಕಾಲದಲ್ಲಿ ಸಿಲ್ಕ್, ಮಿಲ್ಕ್ ಹಾಗೂ ಗೋಲ್ಡ್ಗೆ ಪ್ರಸಿದ್ಧಿಯಾಗಿದ್ದ ಕೋಲಾರ ತನ್ನ ಸುತ್ತ ಕಾಣುವ ಶತಶೃಂಗ ಪರ್ವತಕ್ಕಿಂತ ದೊಡ್ಡ ಸಮಸ್ಯೆಗಳನ್ನು ಹೊತ್ತುಕೊಂಡಿದೆ.
20 ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕುಸಿದಿದೆ. ಅಷ್ಟೋ ಇಷ್ಟೋ ಸುರಿಯುವ ಮಳೆಯ ನೀರು ಕೆರೆಗಳಿಗೆ ಸೇರಲು ಆಗದೆ, ಇತ್ತ ಭೂಮಿಯಲ್ಲಿ ಇಂಗದೆ ವ್ಯರ್ಥವಾಗುತ್ತಿದೆ. ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳು ಇರುವ ಜಿಲ್ಲೆ ಎಂಬ ಖ್ಯಾತಿ ಹೊಂದಿದ್ದರೂ ಭೂಗಳ್ಳರ ಸ್ವಾರ್ಥದಿಂದಾಗಿ ಕೆರೆಗಳು ಅದೃಶ್ಯವಾಗುತ್ತಿವೆ. ಕೆರೆಗಳ ಅಭಿವೃದ್ಧಿ ಇಲ್ಲದೆ ಅಂತರ್ಜಲ ಅಭಿವೃದ್ಧಿ ಸಾಧ್ಯವೇ ಇಲ್ಲ. ಅನೇಕ ಅಧಿಕಾರಿಗಳು ಕೆರೆಗಳ ಒತ್ತುವರಿ ತೆರವು ಮಾಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಜಿಲ್ಲೆಯಲ್ಲಿ 630 ಕೆರೆಗಳು ಅಭಿವೃದ್ಧಿಯಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಅನುಮಾನ ಹುಟ್ಟಿಸುತ್ತಿದೆ. ಇದೇ ಅಧಿಕಾರಿಗಳು ಕೆರೆಗಳ ಒತ್ತುವರಿ ಆಗುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರ ಬರುವ ಅ. 2ರಂದು ಪ್ರತಿ ಗ್ರಾಪಂಗೆ ಒಂದು ಕೆರೆ ಆಯ್ಕೆ ಮಾಡಿ ಅದರ ಅಭಿವೃದ್ಧಿಗೆ ಚಾಲನೆ ನೀಡುತ್ತಿರುವುದು ಸರಿಯೇ. ಆದರೆ ಕೆರೆಗಳ ಒತ್ತುವರಿ ತೆರವು ಮಾಡದಿದ್ದರೆ, ಹಾಲಿ ಇರುವ ಕೆರೆಗಳ ಸರ್ವೆ ಮಾಡಿಸಿ ಭದ್ರ ಪಡಿಸದಿದ್ದರೆ ಪ್ರಯೋಜನವಾಗುವುದಿಲ್ಲ.
ಜಿಲ್ಲೆಯಲ್ಲಿ ಒಟ್ಟು 2 ಸಾವಿರ ಕೆರೆಗಳಿದ್ದು ಇದರ ಸರ್ವೆ ಮಾಡಿಸಲು ತಲಾ 3 ಸಾವಿರ ನಿಗದಿ ಮಾಡಲಾಗಿದ್ದು ಒಟ್ಟು 60 ಲಕ್ಷ ನಿಗದಿಪಡಿಸಬೇಕಾಗಿದೆ. ನರೇಗಾ ಯೋಜನೆಯಡಿ ಹಣ ನೀಡುವುದರಿಂದ ಕೊಂಚ ಮಟ್ಟಿಗೆ ಪ್ರಯೋಜನವಾಗಬಹುದು. ಈ ಯೋಜನೆ ಸಫಲವಾಗಬೇಕಾದರೆ ಜಿಲ್ಲಾಡಳಿತ ಮತ್ತು ಜಿಪಂಗಳು ಸಾಮರಸ್ಯದಿಂದ ಕೆಲಸ ಮಾಡಬೇಕು.
ರಾಜ್ಯ ಸರ್ಕಾರ ಜಿಲ್ಲೆಯ ಕೇವಲ 144 ಕೆರೆಗಳನ್ನು ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸುವುದರಿಂದ ಉದ್ದೇಶ ಫಲಿಸುವುದು ಕಷ್ಟಸಾಧ್ಯ. ಈ ಹಿಂದೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಅಭಿವೃದ್ಧಿಗಾಗಿ 800ರಿಂದ 900 ಕೋಟಿಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಎರಡೂ ಜಿಲ್ಲೆಗಳಿಂದ ಕಳುಹಿಸಲಾಗಿದೆ. ಈ ಪ್ರಸ್ತಾವನೆ ಕೇಂದ್ರಕ್ಕೆ ತಲುಪಿದ್ದರೆ ಅನುದಾನ ಪಡೆಯಲು ಕೇಂದ್ರದ ಮೇಲೆ ರಾಜ್ಯ ಸರ್ಕಾರ ಪ್ರಬಲ ಒತ್ತಾಯ ಮಾಡಿದಾಗ ಮಾತ್ರ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬಹುದಾಗಿದೆ.
ಕೆರೆಗಳ ಅಭಿವೃದ್ಧಿಯನ್ನು ಆಯಾ ಗ್ರಾಪಂ ವ್ಯಾಪ್ತಿಯ ಸ್ವಯಂ ಸೇವಾ ಸಂಘಸಂಸ್ಥೆಗಳಿಗೆ ಅದರಲ್ಲೂ ನಿರುದ್ಯೋಗಿ ಯುವಕರಿಗೆ ಜವಾಬ್ದಾರಿ ವಹಿಸುವುದರಿಂದ ಹಾಗೂ ಇದಕ್ಕೆ ಒಂದು ಸಮನ್ವಯ ಸಮಿತಿ ರಚನೆ ಮಾಡಿದಲ್ಲಿ ಯೋಜನೆ ಫಲಪ್ರದವಾಗುವುದರಲ್ಲಿ ಅನುಮಾನವಿಲ್ಲ.
ಆ.15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಈ ವಿಚಾರಕ್ಕೆ ಒತ್ತು ನೀಡಿದರೆ ಜನತೆ ಸರ್ಕಾರದ ಮೇಲೆ ವಿಶ್ವಾಸವಿಡಲು ಸಾಧ್ಯವಾಗುತ್ತದೆ. ಕೇವಲ ಅಧಿಕಾರಿಗಳು ನೀಡುವ ಅಂಕಿಅಂಶ ಓದಿದರೆ ಸಾಲದು. ಕೆರೆಗಳನ್ನು ಉಳಿಸಿ ಜಿಲ್ಲೆಯನ್ನು ಕಾಪಾಡುವುದು ಸಚಿವರ ಕರ್ತವ್ಯವಾಗಬೇಕಾಗಿದೆ.
ಜಿಲ್ಲೆಗೆ ದಕ್ಷ ಅಧಿಕಾರಿಗಳು ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಕೋಲಾರಕ್ಕೆ ಬಂದರೆ ಸ್ವಾತಂತ್ರ್ಯ ಹೋಗುತ್ತದೆ ಎಂಬುದು ಅನೇಕ ಅಧಿಕಾರಿಗಳ ಅಭಿಪ್ರಾಯ, ಆತಂಕವೂ ಹೌದು. ಈ ರೀತಿಯ ಭಾವನೆ ಹೊರಗಿನ ಅಧಿಕಾರಿಗಳಲ್ಲಿ ಮೂಡುವುದಕ್ಕೆ ಜಿಲ್ಲೆಯಲ್ಲಿ ಪ್ರತಿನಿತ್ಯ ನಡೆಯುವ ಪ್ರತಿಭಟನೆ, ತಮಟೆ ಸದ್ದು ಕಾರಣವೆಂದು ಬಿಂಬಿತವಾಗುತ್ತಿರುವುದರಿಂದ ಸರ್ಕಾರ ಆಡಳಿತ ಸುಧಾರಣೆಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.
ಅತಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ಇರುವ ಜಿಲ್ಲೆ ಕೋಲಾರ. ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳು 15 ವರ್ಷಗಳಿಂದ ಯಾರಿಗೂ ಬೇಡವಾದ ಕೂಸಾಗಿವೆ. ಇಲಾಖೆಗೆ ಬರಲು ಅಧಿಕಾರಿಗಳು ಅಂಜಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಕಾರ್ಯಕ್ರಮಗಳು ವ್ಯರ್ಥವಾಗುತ್ತಿದೆ. ಅನುದಾನ ಮಾಯವಾಗುತ್ತಿದೆ, ಬಡವರು ಬಡವರಾಗಿಯೇ ಇದ್ದಾರೆ.
ಜಿಲ್ಲೆಯಲ್ಲಿ ಮರಳು ಮಾಫಿಯಾಗೆ ಅಧಿಕಾರಿಗಳ ಅಸಹಕಾರ, ರಾಜಕೀಯ ಒತ್ತಡಗಳು ಕಾರಣವೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿರುವುದು ಸುಳ್ಳೇನಲ್ಲ. ಸರ್ಕಾರ ಅದಷ್ಟು ಬೇಗನೆ ಮರಳು ನೀತಿ ಜಾರಿಗೆ ತರದಿದ್ದಲ್ಲಿ ಕೋಲಾರ ಬರಡು ಭೂಮಿ ಆಗುತ್ತದೆ. ಅಲ್ಲಿನ ಜನ ಗುಳೆ ಹೋಗುವುದು ಗ್ಯಾರಂಟಿ.
ಈಗ ಚಿನ್ನದ ಗಣಿ ಮುಚ್ಚಿರುವುದರಿಂದ ಕೆಜಿಎಫ್ನ ವೈಭವ ಕುಸಿದಿದೆ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ತಂದು ಮತ್ತೆ ಗಣಿ ಪ್ರಾರಂಭಿಸಬೇಕು. ಇಲ್ಲವೇ ಕೆಜಿಎಫ್ನಲ್ಲಿ ಪರ್ಯಾಯ ಕಾರ್ಖಾನೆಗಳನ್ನು ಆರಂಭಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕು.
ರೇಷ್ಮೆ ಹಾಗೂ ಹೈನುಗಾರಿಕೆ ಅಭಿವೃದ್ಧಿಯತ್ತ ಸರ್ಕಾರ ವಿಶೇಷ ಕಾರ್ಯಕ್ರಮ ಜಾರಿಗೆ ತಂದಲ್ಲಿ ರೈತರು ಬದುಕುಳಿಯಲು ಸಾಧ್ಯವಾಗುತ್ತದೆ. ಇದೆಲ್ಲ ಆಗಬೇಕಾದರೆ ಜಿಲ್ಲೆಯ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಅಭಿವೃದ್ಧಿಗಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದರಿಂದ ಮಾತ್ರ ಕೋಲಾರಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ.
ಪಾ.ಶ್ರೀ.ಅನಂತರಾಮ್