ಸರಹದ್ದು ಮೀರಿದರೆ ಪರಿಣಾಮ ನೆಟ್ಟಗಿರದು
'ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ. ಹದ್ದು ಮೀರಿದರೆ ಪರಿಣಾಮ ನೆಟ್ಟಗಿರದು' - ಹೀಗೆಂದು ಬುಧವಾರ ಸಂಸತ್ನಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಗಡಿ ನಿಯಂತ್ರಣ...
ನವದೆಹಲಿ/ಇಸ್ಲಾಮಾಬಾದ್: 'ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ. ಹದ್ದು ಮೀರಿದರೆ ಪರಿಣಾಮ ನೆಟ್ಟಗಿರದು' - ಹೀಗೆಂದು ಬುಧವಾರ ಸಂಸತ್ನಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಗೆ ಭಾರತವೇ ಕಾರಣ ಎಂದು ಪಾಕಿಸ್ತಾನದ ಸಂಸತ್ ಅಂಗೀಕರಿಸಿದ್ದ ಬೇಜವಾಬ್ದಾರಿ ನಿರ್ಣಯಕ್ಕೆ ಪ್ರತಿಯಾಗಿ ಸಂಸತ್ ಖಡಕ್ ನಿರ್ಣಯ ಅಂಗೀಕರಿಸಿದೆ. ಉದ್ವಿಗ್ನತೆ ಹೆಚ್ಚುವಂಥ ಕ್ರಮಗಳನ್ನು ಭಾರತ ಕೈಗೊಂಡಿಲ್ಲ ಎಂದಿದೆ. 2003ರಲ್ಲಿ ಒಪ್ಪಿಕೊಂಡ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವಂತೆ ಪಾಕಿಸ್ತಾನಕ್ಕೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಸದಸ್ಯರ ಒತ್ತಾಯ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪಾಕಿಸ್ತಾನ ಸಂಸತ್ನಲ್ಲಿ ದೇಶದ ವಿರುದ್ಧ ನಿರ್ಣಯ ಅಂಗೀಕರಿಸಿದ್ದಕ್ಕೆ ಸಂಸದರು ಒಕ್ಕೊರಲಿನಿಂದ ಖಂಡಿಸಿದರು. ಅದಕ್ಕೆ ಪ್ರತಿಯಾಗಿ ಅದೇ ರೀತಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಉದ್ವಿಗ್ನತೆ ನಿಯಂತ್ರಿಸುತ್ತೇವೆ: ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ನಿಯಂತ್ರಿಸುತ್ತೇವೆ ಎಂದು ಮತ್ತೆ ಬೊಗಳೆ ಬಿಟ್ಟದ್ದು ಪಾಕ್ ಪ್ರಧಾನಿ ನವಾಜ್ ಷರೀಫ್. 'ಜವಾಬ್ದಾರಿಯುತವಾಗಿ ಪರಿಸ್ಥಿತಿ ನಿಭಾಯಿಸುತ್ತೇವೆ' ಎಂದಿದ್ದಾರೆ. 2 ದೇಶಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ರಾಜತಾಂತ್ರಿಕ ನಿಪುಣತೆ ಬೇಕೆಂದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ನಮ್ಮ ನಾಗರಿಕ ಸಾವು: ಪಾಕ್ ಸೇನೆ
ಭಾ ರತೀಯ ಸೇನೆಯ ಗುಂಡಿನ ದಾಳಿಯಿಂದ ನಾಗರಿಕನೊಬ್ಬ ಅಸುನೀಗಿದ್ದಾನೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಜತೆಗೆ ಆತನ ಪುತ್ರಿ ಗಾಯಗೊಂಡಿದ್ದಾಳೆ ಎಂದು ಸೇನಾ ಮೂಲಗಳು ತಿಳಿಸಿವೆ.
'ನಮ್ಮ ಸೇನೆಯ ತಪ್ಪಿಲ್ಲ'
ಐವರು ಭಾರತೀಯ ಯೋಧರ ಹತ್ಯೆಯಲ್ಲಿ ತಮ್ಮ ದೇಶದ ಸೇನೆಯ ಪಾತ್ರ ಇಲ್ಲ ಎಂದು ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸಲ್ಮಾನ್ ಬಶೀರ್ ತಿಳಿಸಿದ್ದಾರೆ. ಇಂಥ ಘಟನೆ ಹೇಗಾಯಿತು ಎನ್ನುವುದೇ ಆಶ್ಚರ್ಯ ಎಂದು ಬಶೀರ್ ತಿಳಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ನವಾಜ್ ಷರೀಷ್ ಭೇಟಿಯಾಗಿ ಮಾತುಕತೆ ನಡೆಸಬೇಕೆಂದು ಅವರು ಪ್ರತಿಪಾದಿಸಿದ್ದಾರೆ.
ನಿಲ್ಲದ ಗುಂಡು ಹಾರಾಟ
ಪಾಕಿಸ್ತಾನದ ಸೇನೆ ಮತ್ತೆ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕಳೆದ 4 ದಿನಗಳಲ್ಲಿ ಇದು 9ನೇ ದಾಳಿಯಾಗಿದೆ. ಪೂಂಛ್ ಜಿಲ್ಲೆ ವ್ಯಾಪ್ತಿಯಲ್ಲಿರುವ ಗಡಿಯಲ್ಲಿರುವ ದೇಶದ ಸೇನೆಯ 16 ಠಾಣೆಗಳನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಭಾರತದ ಸೈನಿಕರೂ ಕೂಡ ಗುಂಡು ಹಾರಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಮಂಗಳವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.
ಸಂಸತ್ನಲ್ಲಿ ಪಾಕಿಸ್ತಾನದ ವಿರುದ್ಧ ನಿರ್ಣಯ ಕೈಗೊಳ್ಳುವುದರಿಂದ ಯಾವುದೇ ಉದ್ದೇಶ ಸಾಧನೆಯಾದಂತಾಗುವುದಿಲ್ಲ. ಇದರಿಂದಾಗಿ ಗಡಿಯಾಚೆಗೆ ಇರುವ ವೈರಿಗಳ ಕೈಗಳನ್ನು ನಾವೇ ಬಲಪಡಿಸಿದಂತಾಗುತ್ತದೆ. 2 ರಾಷ್ಟ್ರಗಳ ನಡುವೆ ಮಾತುಕತೆ ಮುಂದುವರಿಯಬೇಕು.
- ಡಾ.ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ನಿರ್ಣಯ ಏನು?
ಲೋಕಸಭೆಯಲ್ಲಿ ಸ್ಪೀಕರ್ ಮೀರಾ ಕುಮಾರ್ ಮತ್ತು ರಾಜ್ಯಸಭೆಯಲ್ಲಿ ಸಭಾಪತಿ ಹಮೀದ್ ಅನ್ಸಾರಿ ನಿರ್ಣಯ ಮಂಡಿಸಿದರು.
ಪಾಕಿಸ್ತಾನ ಸೇನೆಯೇ ಗಡಿಯಾಚೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಸಂಸತ್ ಸದಸ್ಯರಿಗೂ ಅದರ ಅರಿವು ಚೆನ್ನಾಗಿಯೇ ಇದೆ.
ಅಲ್ಲಿನ ಸಂಸತ್ತು ಮತ್ತು ಪಂಜಾಬ್ನ ಪ್ರಾಂತೀಯ ಸಭೆಯಲ್ಲಿ ಭಾರತದ ವಿರುದ್ಧ ಅಂಗೀಕರಿಸಿದ ನಿರ್ಣಯಗಳನ್ನು ಸರ್ವಾನುಮತದಿಂದ ಖಂಡಿಸುತ್ತೇವೆ. ನಮ್ಮ ದೇಶದ ಸೇನೆ ಮತ್ತು ಜನರ ಮೇಲೆ ಹೊರಿಸಿದ ಆರೋಪಗಳು ಸುಳ್ಳು.
ಪಾಕಿಸ್ತಾನ ಸೇನೆ ಆಕ್ರಮಿಸಿದ ಜಮ್ಮು-ಕಾಶ್ಮೀರ ಸೇರಿದಂತೆ ಒಟ್ಟು ಪ್ರದೇಶ ದೇಶದ ಅವಿಭಾಜ್ಯ ಅಂಗ.
2 ರಾಷ್ಟ್ರಗಳ ನಡುವೆ ಶಾಂತಿಯುತ, ಸೌಹಾರ್ದಯುತ ಸಂಬಂಧ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ. ಅದು ಯಶಸ್ವಿಯಾಗಬೇಕು.
ಪಾಕಿಸ್ತಾನಕ್ಕೆ ಭಾರತ ಯಾವತ್ತೂ ಬೆದರಿಕೆಯಾಗಿ ಪರಿಣಮಿಸುವುದಿಲ್ಲ. ಎಲ್ಓಸಿಯನ್ನು ಭಾರತ ಗೌರವಿಸುತ್ತದೆ. ಭಯೋತ್ಪಾದಕ ಸಂಘಟನೆಗಳೇ 2 ರಾಷ್ಟ್ರಗಳ ನಡುವೆ ಅಡ್ಡಿಯಾಗಿವೆ.
ಶಾಂತಿಯುತ ಸಂಬಂಧಗಳು ಇದ್ದರೆ ಎರಡೂ ರಾಷ್ಟ್ರಗಳ ಸರ್ಕಾರಗಳು ಆಯಾ ದೇಶಗಳ ಜನರ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಿರಾತಂಕವಾಗಿ ಶ್ರಮಿಸಬಹುದು.