ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುರೇಶ್‌ಗಿಂತ ನಾನೇ ಬೆಸ್ಟ್: ಅನಿತಾ

Rashmi Kasaragodu
Updated On : 15 Aug 2013, 1:01 am


ರಾಮನಗರ: ಒಂದು ಊರಲ್ಲಿ ವಾಹನವೇರಿ ಭಾಷಣ, ಮತ್ತೊಂದು ಊರಲ್ಲಿ ವಾಹನ ಇಳಿದು ಜನರ ಬಳಿಗೆ ತೆರಳಿ ಮತಯಾಚನೆ, ಮಗದೊಂದು ಊರಲ್ಲಿ ಸಾವಿನ ಮನೆಗೆ ಹೋಗಿ ಸಾಂತ್ವನದ ಮಾತು, ಮಾರ್ಗ ಮಧ್ಯೆಯೇ ಭೋಜನ, ಸಮಯಾಭಾವದಿಂದ ತರಾತುರಿಯಲ್ಲೇ ಸಾಗಿದ ಪ್ರಚಾರ.
ಇದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ ಎಚ್.ಡಿ.ಕುಮಾರಸ್ವಾಮಿ ಸಹಿತ ಪಕ್ಷದ ಮುಖಂಡರ ಜತೆಗೂಡಿ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಬುಧವಾರ ದಿನವಿಡಿ ನಡೆಸಿದ ಪ್ರಚಾರದ ವೈಖರಿ. ಕನಕಪುರ ತಾಲೂಕಿನ ತೊಪ್ಪಗನಹಳ್ಳಿಯಿಂದ ಹೊರಟ ಅನಿತಾ ಕುಮಾರಸ್ವಾಮಿ ಅವರ ಪ್ರಚಾರ ತುಂಗಣಿ, ಸಾತನೂರು, ದೊಡ್ಡಾಲಹಳ್ಳಿ, ಉಯ್ಯಂಬಳ್ಳಿ, ಹೂಕುಂದ, ಕೋಡಿಹಳ್ಳಿ ಮಾರ್ಗ ಮಧ್ಯೆ ಹಲವು ಹಳ್ಳಿಗಳಲ್ಲಿ ಸಾಗಿತು. ಆಗಮನ 2 ತಾಸು ವಿಳಂಬವಾದ ಕಾರಣ ತರಾತುರಿಯಿಂದಿತ್ತು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಅವರಿಗೆ ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದ್ದ ಹೈಟೆಕ್ ವಾಹನದಲ್ಲೇ ಅನಿತಾ ಮತ್ತು ಕುಮಾರಸ್ವಾಮಿ ದಂಪತಿ ಪ್ರಚಾರ ನಡೆಸಿದರು. ಹಲವೆಡೆ ವಾಹನದಲ್ಲೇ ನಿಂತು ನೆರೆದ ಜನರನ್ನುದ್ದೇಶಿಸಿ ಮಾತನಾಡಿ ಮತಯಾಚಿಸಿದರು. ಸಣ್ಣ ಗುಂಪು ಹಾಗೂ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಂಡ ಕಡೆ ಅನಿತಾ ಕುಮಾರಸ್ವಾಮಿ ವಾಹನದಿಂದ ಇಳಿದು ಮಾತನಾಡಿ ಮುಂದೆ ಸಾಗುತ್ತಿದ್ದರು. ಗಾಣಾಳುವಿನಲ್ಲಿ ಮೃತಪಟ್ಟಿದ್ದ ಮುದ್ದಣ್ಣ(70) ಎಂಬವರ ಪಾರ್ಥೀವ ಶರೀರಕ್ಕೆ ಅನಿತಾ ಮತ್ತು ಕುಮಾರಸ್ವಾಮಿ ಅಂತಿಮ ನಮನ ಸಲ್ಲಿಸಿದರು. ಅಲ್ಲಲ್ಲಿ ಮಹಿಳೆಯರು ಅನಿತಾ ಕುಮಾರಸ್ವಾಮಿ ಅವರಿಗೆ ಆರತಿ ಎತ್ತಿ, ರವಿಕೆ ಕಣದೊಂದಿಗೆ ಅರಿಶಿನ ಮತ್ತು ಕುಂಕುಮ ನೀಡಿದರು.
ಮಧ್ಯೆಯೇ ಊಟ: ಮಧ್ಯಾಹ್ನ 12ರ ಹೊತ್ತಿಗೆ ಪ್ರಚಾರ ಪ್ರಾರಂಭಿಸಿದ್ದ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಹತ್ತಕ್ಕೂ ಹೆಚ್ಚು ಗ್ರಾಮಗಳ ಭೇಟಿ ತರುವಾಯ ಅಳ್ಳಿಮಾರನಹಳ್ಳಿ ಗ್ರಾಮದಿಂದ ಸ್ವಲ್ಪ ಆಚೆ ಸಾಗಿ ತೋಟವೊಂದರ ಬಳಿ ಮಧ್ಯಾಹ್ನದ ಭೋಜನ ಮುಗಿಸಿದರು. ಅನಿತಾ ಜತೆ ಕುಮಾರಸ್ವಾಮಿ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಎಂ.ಸಿ.ನಾಣಯ್ಯ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಕೂಡಾ ಸೊಪ್ಪು, ಬಸ್ಸಾರು, ಮುದ್ದೆ ಊಟ ಮಾಡಿದರು. ರಾಜಕೀಯವಾಗಿ ದೇವೇಗೌಡರಿಗೆ ಪುನರ್ಜನ್ಮ, ಕುಮಾರಸ್ವಾಮಿ ಜನ್ಮ ನೀಡಿದ ನೆಲವಿದು. ಪ್ರಸಕ್ತ ಚುನಾವಣೆಯಲ್ಲಿ ಸಂಸದರಾಗಲು ಎದುರಾಳಿಗಿಂತ ನಾನೇ ಅರ್ಹಳಾಗಿದ್ದೇನೆ. ವಿವೇಚಿಸಿ ಮತ ನೀಡುವ ಮೂಲಕ ನಿಮ್ಮ ಮನೆ ಮಗಳಾದ ನನ್ನನ್ನು ಚುನಾಯಿಸಿ ಎಂದು ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.



ನಮ್ಮದಷ್ಟೇ ಕುಟುಂಬ ರಾಜಕಾರಣವೇ?
ದೇವೇಗೌಡ ಅವರದ್ದಷ್ಟೇ ಕುಟುಂಬ ರಾಜಕಾರಣವೇ? ಬೇರೆ ಯಾವ ನಾಯಕರೂ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಸೋನಿಯಾ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಅವರದ್ದೇನು ಕುಟುಂಬ ರಾಜಕಾರಣವಲ್ಲವೇ ಎಂದು ಅನಿತಾ ಸಭಿಕರತ್ತ ಪ್ರಶ್ನೆಗಳ ಸುರಿಮಳೆಗರೆದರು. ನನ್ನ ಪತಿ ರಾಜಿನಾಮೆಯಿಂದ ತೆರವಾದ ಈ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಮೂಲಕ ಜೆಡಿಎಸ್‌ಗೆ ಶಕ್ತಿ ತುಂಬಬೇಕು. ರಾಮನಗರವು ಜಿಲ್ಲೆಯಾಗಿದ್ದೇ ಕುಮಾರಸ್ವಾಮಿ ಅವರಿಂದ. ಈ ನೆಲಕ್ಕೆ ನಮ್ಮ ಕುಟುಂಬದ ಕೊಡುಗೆ ಸಾಕಷ್ಟಿದೆ. ಈ ಕುರಿತು ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡುವುದು ಬೇಡ ಎಂದರು.


ಲಕ್ಕಿ ಕಾರು ಮೊರೆ ಹೋದ ಅನಿತಾ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಹೋಂಡಾ ಕಂಪನಿಯ ಸಿಆರ್‌ವಿ ಕಾರು ಬಳಸಿದ್ದ ಅನಿತಾ ಕುಮಾರಸ್ವಾಮಿ ಪ್ರಸಕ್ತ ಮರು ಚುನಾವಣೆಯಲ್ಲಿ ಬಳಸುತ್ತಿರುವುದು ಮಧುಗಿರಿ ಮರು ಚುನಾವಣೆಯಲ್ಲಿ ಬಳಸಿದ್ದ ಟೊಯೋಟಾ ಇನ್ನೋವಾ. ಸಿಆರ್‌ವಿ ಕಾರಿನ ಸಂಖ್ಯೆ ಕೂಡಿದಾಗ ಒಟ್ಟಾರೆ 6 ಬರುತ್ತಿತ್ತು. ಆದರೆ, ಮಧುಗಿರಿ ಮರು ಚುನಾವಣೆಯಲ್ಲಿ ಮತ್ತು ಈಗಿನ ಮರು ಚುನಾವಣೆಯಲ್ಲಿ ಬಳಸುತ್ತಿರುವ ಕಾರಿನ ಸಂಖ್ಯೆ 9 ಆಗಿದೆ. ಲಕ್ಕಿ ಸಂಖ್ಯೆ ಎನ್ನುವ ಕಾರಣಕ್ಕೆ ಅವರು ಬದಲಿ ಕಾರು ಬಳಕೆ ಮಾಡುತ್ತಿದ್ದಾರೆ.



ಕುಮಾರಸ್ವಾಮಿ ಮಾತ್ರ ಭಾಷಣ
ಕನಕಪುರ ತಾಲೂಕಿನಾದ್ಯಂತ ನಡೆದ ಪ್ರಚಾರದಲ್ಲಿ ಜೆಡಿಎಸ್‌ನ ಹಲವು ಮುಖಂಡರಿದ್ದರಾದರೂ ಭಾಷಣ ಮಾಡಿದ್ದು ಅನಿತಾ ಕುಮಾರಸ್ವಾಮಿ ಮತ್ತು ಎಚ್.ಡಿ.ಕುಮಾರಸ್ವಾಮಿ ಮಾತ್ರವೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ಅನಿತಾ ಮತ್ತು ಕುಮಾರಸ್ವಾಮಿ ವಾಹನವನ್ನು ಹಿಂಬಾಲಿಸಿಕೊಂಡೇ ಸಾಗಿದರು. ಅವರೆಲ್ಲೂ ಭಾಷಣಕ್ಕೆ ಇಳಿಯಲಿಲ್ಲ. ಹೊರಟ್ಟಿ, ನಾಣಯ್ಯ, ಡಿ.ಎಂ.ವಿಶ್ವನಾಥ್, ಜ್ಯೋತಿ ರೆಡ್ಡಿ ಪಾತ್ರ ಹಾಜರಿಗಷ್ಟೇ ಸೀಮಿತವಾಯ್ತು.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement