ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೈ-ಕ ವಿಶೇಷ; ರಾಜ್ಯಪಾಲ ಉತ್ಸವಮೂರ್ತಿ

Mainashree
Updated On : 14 Aug 2013, 10:53 am

ಕ.ಪ್ರ.ವಾರ್ತೆ  ಬೆಂಗಳೂರು  ಆ. 14
ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸೌಲಭ್ಯ ಜಾರಿ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲು ಒಪ್ಪಿದ್ದರೂ ತನ್ನ ಮರ್ಜಿಗೆ ಅವಕಾಶ ನೀಡುವ ಬಾಗಿಲನ್ನು ಸರ್ಕಾರ ಜಾಣತನದಿಂದ ತೆರೆದಿರಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ತಯಾರಿಸಿರುವ ಮಾರ್ಗಸೂಚಿ ವರದಿಯಲ್ಲಿ ಈ ಪ್ರಸ್ತಾವ ಮಾಡಲಾಗಿದೆ.
ಈ ಮೂಲಕ ಸಂವಿಧಾನದ 371ನೇ ಜೆ ತಿದ್ದುಪಡಿ ಮೂಲಕ ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ಕೇಂದ್ರ ನೀಡುವ ವಿಶೇಷ ಸವಲತ್ತು ಜಾರಿಗೆ ರಾಜ್ಯಪಾಲರಿಗೆ ವಿಶೇಷ ಅಧಿಕಾರವಿರುತ್ತದೆಯಾದರೂ ಮುಖ್ಯಮಂತ್ರಿ ಹಾಗೂ ಮಂತ್ರಿ ಪರಿಷತ್‌ನ ಇಚ್ಛೆಗೆ ಧಕ್ಕೆ ಬರುವುದಿಲ್ಲ. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ರಾಜ್ಯಪಾಲರ ಅಧಿಕಾರಕ್ಕೆ ಕಡಿವಾಣ ಹಾಕುವಂತೆ ಮಾಡಿದ್ದ ಒತ್ತಾಯವನ್ನು ಈಗಿನ ಸರ್ಕಾರ ಪರೋಕ್ಷವಾಗಿ ಜಾರಿಗೆ ತಂದಂತಾಗಿದೆ. ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಸಂಪುಟ ಉಪಸಮಿತಿ ವರದಿಯ ಸಂಪೂರ್ಣ ಮಾಹಿತಿ ಈಗ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಇಲ್ಲಿ ರಾಜ್ಯಪಾಲರನ್ನು ಕೇವಲ 'ಉತ್ಸವಮೂರ್ತಿ' ಪೀಠಕ್ಕೆ ಸೀಮಿತಗೊಳಿಸಲಾಗಿದೆ.
ವಿಧೇಯಕದ ಜಾರಿಗೆ ಗುಲ್ಬರ್ಗದಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರ ಕಾರ್ಯವಿಧಾನದಲ್ಲಿ ರಾಜ್ಯಪಾಲರ ಅಧಿಕಾರ ಚಲಾವಣೆಗೆ ಪರೋಕ್ಷವಾಗಿ ಕತ್ತರಿ ಹಾಕಲಾಗಿದೆ.
ಹೇಗೆ ಅಂಕುಶ?: ವಿಧೇಯಕದಲ್ಲಿರುವ ರಾಜ್ಯಪಾಲರು ಮತ್ತು ಮಂತ್ರಿ ಪರಿಷತ್ತಿನ ಸಲಹೆ ಮೇರೆಗೆ ಆದೇಶ ಎಂಬ ಪದಪುಂಜದ ಕುರಿತು ಸಮಿತಿ ವಿಸ್ತೃತವಾಗಿ ಚರ್ಚೆ ಮಾಡಿದೆ. ಕೊನೆಯಲ್ಲಿ 'ರಾಜ್ಯಪಾಲರ ಮೂಲಕ' ಎಂಬುದನ್ನೇ ಒಪ್ಪಿಕೊಂಡಿದೆ. ಆದರೆ ಅಭಿವೃದ್ಧಿ ಸಂಪನ್ಮೂಲ ಹಂಚಿಕೆ, ಆಯವ್ಯಯ ತಯಾರಿಕೆ ಮತ್ತು ಮಂಡನೆ ಸಂದರ್ಭದಲ್ಲಿ ಸಚಿವ ಸಂಪುಟದ ಅಸ್ತಿತ್ವವನ್ನು ಅವರು ಹೊಂದಬೇಕಾಗುತ್ತದೆ.
ಈ ಮಾರ್ಗಸೂಚಿ ಪ್ರಕಾರ ಸರ್ಕಾರ ಪ್ರತ್ಯೇಕ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುತ್ತದೆ. ಇದರ ಕೇಂದ್ರಸ್ಥಾನ ಗುಲ್ಬರ್ಗದಲ್ಲಿ ಇರಲಿದ್ದು, ಆ ಭಾಗದ ಸಚಿವರು, ಶಾಸಕರು ಹಾಗೂ ಸ್ಥಳೀಯ ಪ್ರತಿನಿಧಿಗಳು, ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಮಂಡಳಿಗಾಗಿ ಅಭಿವೃದ್ಧಿ ವೆಚ್ಚನಿಧಿ ಸ್ಥಾಪಿಸಲಾಗಿದ್ದು, ಇದರಲ್ಲಿ ರಾಜ್ಯಪಾಲರ ಅಧಿಕಾರ ಗೌಣವಾಗುತ್ತದೆ.
ಇದರ ಪ್ರಕಾರ ರಾಜ್ಯಪಾಲರು ಸಮಗ್ರ ರಾಜ್ಯದ ಅಗತ್ಯಕ್ಕೆ ಒಳಪಟ್ಟು ಮಂಡಳಿಯ ವ್ಯಾಪ್ತಿ ಪ್ರದೇಶದಲ್ಲಿ ನಿಧಿಯ ನ್ಯಾಯಸಮ್ಮತ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಆ ಸಂದರ್ಭದಲ್ಲಿ ಮಂಡಳಿ ಮಾಡಿದ ಶಿಫಾರಸುಗಳನ್ನು ಅಂದರೆ ಪರೋಕ್ಷವಾಗಿ ಸರ್ಕಾರದ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಮಂಡಳಿ ಸದಸ್ಯರು ಯಾರು...?
ಎಲ್ಲದಕ್ಕಿಂತ ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವ ಅಧಿಕಾರ ರಾಜ್ಯಪಾಲರಿಗೆ ಇರುವುದಿಲ್ಲ. ಇದನ್ನು ರಾಜ್ಯ ಸರ್ಕಾರ ನಿಭಾಯಿಸುವ ಜತೆಗೆ ಸದಸ್ಯರು ಮತ್ತು ಅಧ್ಯಕ್ಷರ ನೇಮಕ ಅಧಿಕಾರವೂ ಸರ್ಕಾರದ ಕೈಲೇ ಇರುತ್ತದೆ. ಮಂಡಳಿಗೆ ಹೈದರಾಬಾದ್-ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸದಸ್ಯರಾಗಿದ್ದು, ಅವರ ಪೈಕಿ ಯಾರಾದರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಜತೆಗೆ ಒಂದು ವರ್ಷದ ಅವಧಿಗೆ ಸರದಿ ಪ್ರಕಾರ ವಿಧಾನಸಭೆಯ 8 ಸದಸ್ಯರು ಹಾಗೂ ಒಬ್ಬ ಸಂಸದರನ್ನು, ಆರು ಜಿಲ್ಲೆಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮೇಯರ್ ಹಾಗೂ ಯೋಜನೆ, ಹಣಕಾಸು, ನೀರಾವರಿ, ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ಐವರು ತಜ್ಞರನ್ನು ನೇಮಕ ಮಾಡಲಾಗುತ್ತದೆ. ಜತೆಗೆ ಅಧಿಕಾರಿಗಳನ್ನು ಒಳಗೊಂಡ ಸಲಹಾ ಪರಿಷತ್ ಇರುತ್ತದೆ.

ಇತರೆ ಕಡಿವಾಣ

ಇದರ ಜತೆಗೆ ಸಂಪುಟ ಉಪಸಮಿತಿ ವಿಧಿಸಿದ ಇತರೆ ಕಡಿವಾಣಗಳು ಹೀಗಿವೆ..
ರಾಜ್ಯಪಾಲರು ಯುಕ್ತವೆಂದು ಪರಿಗಣಿಸಿದ್ದಲ್ಲಿ ನಿಧಿ ಹಂಚಿಕೆಗೆ ಯಾವೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಸಲಹೆಯನ್ನು ಕೋರಬಹುದು.
ಪ್ರದೇಶಾಭಿವೃದ್ಧಿಗೆ ಯೋಜನೆ ಮತ್ತು ಯೋಜನೇತರ ಅಥವಾ ಇವೆರಡರಿಂದಲೂ ಬೇರೆಯಾದ ನಿಧಿ (ಕೇಂದ್ರದ ಅನುದಾನ) ಹಂಚಿಕೆ ಮಾಡುವಾಗ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ಮಾಡಲೇಬೇಕು.
ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿದ ನಂತರದ ಸಲಹೆ ಸ್ವೀಕರಿಸಿದ ಮೇಲೆಯೇ ಅಭಿವೃದ್ಧಿ ನಿಧಿಯ ಹಂಚಿಕೆ ಮಾಡಬೇಕು.
ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಸಗಿ ಕೈಗಾರಿಕೆಗಳ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವಾಗ ಮತ್ತು ಹೊಸ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವುದಕ್ಕೆ ವಿಶೇಷ ಕಾರ್ಯನೀತಿ ತರುವಾಗಲೂ ಮುಖ್ಯಮಂತ್ರಿಗಳ ಜತೆಗೆ ಸಮಾಲೋಚಿಸಬೇಕು.
ಇಷ್ಟು ಮಾತ್ರವಲ್ಲ, ರಾಜ್ಯಪಾಲರು ಮಾಡಿದ ನಿಧಿ ಹಂಚಿಕೆ ಮತ್ತು ವೆಚ್ಚಗಳನ್ನು ರಾಜ್ಯ ವಿಧಾನಮಂಡಲದ ಮುಂದೆ ಮಂಡಿಸಬೇಕಾದ ಹಣಕಾಸು ತಃಖ್ತೆಯಲ್ಲಿ ಬಿಂಬಿತವಾಗತಕ್ಕದ್ದು. ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಕೈಗೊಳ್ಳತಕ್ಕದ್ದು ಎಂದು ಸಲಹೆ ಮಾಡಲಾಗಿದೆ.

ತೀರ್ಮಾನಕ್ಕೆ ಬರುವಂತಿಲ್ಲ
ಇದೆಲ್ಲದರ ಜತೆಗೆ ಮಂಡಳಿ ತೆಗೆದುಕೊಳ್ಳುವ ನಿರ್ಧಾರವನ್ನು ತೀರ್ಮಾನಿಸುವುದಕ್ಕಾಗಿ ಸರ್ಕಾರ ಯಾವುದೇ ಕಾರಣಕ್ಕೂ ಕಡತಗಳನ್ನು ಬೆಂಗಳೂರಿಗೆ ತರುವಂತಿಲ್ಲ. ಎಲ್ಲ ಆಡಳಿತಾತ್ಮಕ ನಿರ್ಧಾರಗಳು ಮಂಡಳಿಯ ಸಮುಚಿತ ಪ್ರಾಧಿಕಾರ ಮತ್ತು ವ್ಯಾಪ್ತಿ ಪ್ರದೇಶದಲ್ಲೇ ನಿರ್ಧಾರವಾಗಬೇಕು. ಈ ಕಾರಣಕ್ಕಾಗಿಯೇ ರಾಜ್ಯಪಾಲರು ಮುಖ್ಯಸ್ಥರಾಗಿದ್ದರೂ ಮಂಡಳಿಗೇ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದ ಜವಾಬ್ದಾರಿ ನೀಡಲಾಗಿದೆ. ಜತೆಗೆ ನಿಧಿ ಹಂಚಿಕೆ ಸಂದರ್ಭದಲ್ಲಿ ರಾಜ್ಯಪಾಲರು ನೀಡುವ ಸಲಹೆಗಳು ಕೇವಲ ಸಲಹಾರೂಪದಲ್ಲಿ ಇರುತ್ತವೆಯೇ ಹೊರತು ಯಾವುದೇ ಕಾರಣಕ್ಕೂ ಸಂವಿಧಾನಾತ್ಮಕ ನಿರ್ದೇಶನಗಳಾಗಿ ಮಾರ್ಪಡುವುದಿಲ್ಲ.
ಅನುದಾನ ರದ್ದಾಗುವಂತಿಲ್ಲ
ಹೈ-ಕ ಪ್ರದೇಶಕ್ಕೆ ಲಭಿಸುವ ಯಾವುದೇ ಸಂಪನ್ಮೂಲ ಹಾಗೂ ಅನುದಾನ ರದ್ದಾಗದಂತೆಯೂ ಸಚಿವ ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ. ಸಂಪನ್ಮೂಲವನ್ನು ಖರ್ಚು ಮಾಡುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಈ ಭಾಗದ ಸಾಮರ್ಥ್ಯ ಅಲ್ಪಮಟ್ಟದಾಗಿದೆ. ಜತೆಗೆ ಆರ್ಥಿಕ ವರ್ಷದ ಕೊನೆಯಲ್ಲಿ ಆಯಾ ಆಯವ್ಯಯದ ನಿಧಿಗಳು ಖರ್ಚಾಗದೇ ಉಳಿದಿರುವ ಸಂಭವ ಜಾಸ್ತಿ ಇರುತ್ತದೆ. ಹೀಗಾಗಿ ಸಂಪನ್ಮೂಲವನ್ನು ರದ್ದುಗೊ ಳಿಸುವಂತಿಲ್ಲ ಎಂದು ಅಭಿಪ್ರಾಯಪಡಲಾಗಿದೆ. ಜತೆಗೆ ಶಿಕ್ಷಣ ಮತ್ತು ಉದ್ಯೋಗ ಮೀಸಲು ಸಂದರ್ಭದಲ್ಲಿ ಮಿತವ್ಯಯ ನೀತಿ ಅನುಸರಿಸುವಂತಿಲ್ಲ ಎಂದು ಸಲಹೆ ನೀಡಲಾಗಿದೆ.

-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement