ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

1.25 ಲಕ್ಷ ಸರ್ಕಾರಿ ಹುದ್ದೆ ಖಾಲಿ!

ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಬರೋಬ್ಬರಿ 1.25 ಲಕ್ಷ! 2009ರಲ್ಲಿ ಜಾರಿಗೆ ಬಂದಿರುವ ಆರ್ಥಿಕ ಮಿತವ್ಯಯ ಮತ್ತು ...

Rashmi Kasaragodu
Updated On : 16 Aug 2013, 12:24 pm

ಕ.ಪ್ರ.ವಾರ್ತೆ   ಬೆಂಗಳೂರು   ಆ. 15
ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಬರೋಬ್ಬರಿ 1.25 ಲಕ್ಷ!
2009ರಲ್ಲಿ ಜಾರಿಗೆ ಬಂದಿರುವ ಆರ್ಥಿಕ ಮಿತವ್ಯಯ ಮತ್ತು ನೇಮಕ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ಇಷ್ಟೊಂದು ಪ್ರಮಾಣದ ಹುದ್ದೆಗಳು ಭರ್ತಿಯಾಗದೇ ಉಳಿದಿವೆ.
ಮತ್ತೊಂದು ಆಘಾತಕಾರಿ ವಿಚಾರವೆಂದರೆ ಮುಂದಿನ 3 ವರ್ಷದಲ್ಲಿ ಮತ್ತೆ 47 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿವೃತ್ತಿ ಹೊಂದಲಿದ್ದಾರೆ.
ಶಿಕ್ಷಣ, ಆರೋಗ್ಯ, ಗೃಹ, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಂತಹ ಅಗತ್ಯ ಸೇವೆಗಳನ್ನು ಒಳಗೊಂಡ ಇಲಾಖೆಗಳಲ್ಲೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ.
ಮತ್ತೊಂದೆಡೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದಲ್ಲಿ ಸೌಲಭ್ಯಗಳನ್ನು ನೀಡಬೇಕೆಂಬ  ನೆಪದಲ್ಲಿ ಸುಮಾರು 5 ಸಾವಿರ ಸಿಬ್ಬಂದಿ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಅಕ್ರಮಗಳು ಮತ್ತಿತರ ಕಾರಣಗಳಿಂದ ಸುಮಾರು 2 ಸಾವಿರ ಹುದ್ದೆಗಳ ನೇಮಕಕ್ಕೆ ತಡೆಬಿದ್ದಿದೆ. ಇನ್ನು ಪಿಡಿಒ, ಎಂಜಿನಿಯರ್ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ಸೇರಿಸಿ ಸುಮಾರು 4 ಸಾವಿರ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ.
ಅತಿವೃಷ್ಟಿಯ ನೆಪ: ಕಳೆದ 2009ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿದ ಅತಿವೃಷ್ಟಿಯ ಕಾರಣದಿಂದ ರಾಜ್ಯದಲ್ಲಿ ಆರ್ಥಿಕ ಮಿತವ್ಯಯ ಘೋಷಿಸಲಾಗಿತ್ತು. ಅಗತ್ಯ ಸೇವೆಗಳ ನೇಮಕ ಪ್ರಕ್ರಿಯೆಗೂ ಇದನ್ನು ಅನ್ವಯಿಸಲಾಗಿತ್ತು. ಇದಾಗಿ 4 ವರ್ಷಗಳ ಬಳಿಕವೂ ಆರ್ಥಿಕ ಮಿತವ್ಯಯವನ್ನು ರಾಜ್ಯ ಸರ್ಕಾರ ಸಡಿಲಿಸಿಲ್ಲ.
2006ರಿಂದ ಇತ್ತೀಚೆಗೆ ರಾಜ್ಯ ಸರ್ಕಾರದಲ್ಲಿ ಭಾರಿ ಪ್ರಮಾಣದ ನೇಮಕ ಪ್ರಕ್ರಿಯೆ ನಡೆದಿಲ್ಲ. 2009ರ ಬಳಿಕ ಆರ್ಥಿಕ ಮಿತವ್ಯಯದ ವತಿಯಿಂದ ಸಂಪೂರ್ಣ ತಡೆಬಿದ್ದಿದೆ. ಆದರೆ ವಿಶೇಷ ಅನುಮತಿ ಪಡೆದು 4 ಸಾವಿರ ಶಿಕ್ಷಕರ ಹುದ್ದೆ ನೇಮಕಕ್ಕೆ ಅನುಮತಿ ಪಡೆಯಲಾಗಿತ್ತು. ಚುನಾವಣೆ ನೀತಿ ಸಂಹಿತೆ ಹಾಗೂ ಹೈದ್ರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನದ ಕಾರಣದಿಂದ ನೇಮಕವು ನೆನೆಗುದಿಗೆ ಬಿದ್ದಿದೆ. ಇದನ್ನು ಹೊರತುಪಡಿಸಿದರೆ 1764 ಉಪನ್ಯಾಸಕರ ನೇಮಕವಾಗಿರುವುದೇ ದೊಡ್ಡದು.
ಈ ಆರ್ಥಿಕ ಮಿತವ್ಯಯದಿಂದ ಇಲಾಖೆಯ ಸಾಮಾನ್ಯ ನೇಮಕ ಪ್ರಕ್ರಿಯೆಗಳು ಕಷ್ಟಸಾಧ್ಯವಾಗಿವೆ. ಶಿಕ್ಷಣ, ಆರೋಗ್ಯ ಹಾಗೂ ಗೃಹ ಇಲಾಖೆಗಳನ್ನು ಆರ್ಥಿಕ ಮಿತವ್ಯಯದಿಂದ ಹೊರಗಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಆರ್ಥಿಕ ಮಿತವ್ಯಯವನ್ನು ಸಡಿಲಿಸುವ ಯಾವುದೇ ಸಾಧ್ಯತೆಯಿಲ್ಲ. ಆರ್ಥಿಕ ಮಿತವ್ಯಯಕ್ಕೆ ಯಾವುದೇ ಕಾಲಮಿತಿ ನಿಗದಿಮಾಡಿಲ್ಲ ಎಂದು ಸರ್ಕಾರ ಹೇಳಿದೆ.
ಆದರೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಶಿಕ್ಷಣ, ಗೃಹ, ಪಶುಸಂಗೋಪನೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ಒಳಾಡಳಿತ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಆದರೆ ಈ ನೇಮಕ ಪ್ರಕ್ರಿಯೆಗಳು ಕೇವಲ ನಿವೃತ್ತಿ ಹೊಂದುತ್ತಿರುವ ಹುದ್ದೆಗಳಿಗೆ ಪರ್ಯಾಯವಾಗುತ್ತಿವೆಯೇ ಹೊರತು ಖಾಲಿ ಹುದ್ದೆಗಳು ಹಾಗೆಯೇ ಮುಂದುವರಿದುಕೊಂಡು ಬರುತ್ತಿವೆ.
ಇದು ಕೇವಲ ಸರ್ಕಾರ ಕಾಯಂ ಹುದ್ದೆಗಳಿಗೆ ಸಂಬಂಧಪಟ್ಟ ವಿಚಾರ. ಇನ್ನು ಗುತ್ತಿಗೆ ನೌಕರರು ಹಾಗೂ ತಾತ್ಕಾಲಿಕ ನೌಕರರ ಲೆಕ್ಕಾಚಾರ ಮಾಡಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ.
ಅಗತ್ಯ ಸೇವೆಗಳಿಗೆ ಸಿಬ್ಬಂದಿ ಇಲ್ಲ: ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಹಾಗೂ ಗೃಹ ಇಲಾಖೆಯಲ್ಲಿ ಕ್ರಮವಾಗಿ 24804, 19175 ಹಾಗೂ 22644 ಸಿಬ್ಬಂದಿ ಸಂಖ್ಯೆ ಖಾಲಿಯಿವೆ. ಈ 3 ಇಲಾಖೆಗಳ 66 ಸಾವಿರ ಸಿಬ್ಬಂದಿಯಲ್ಲಿ 60 ಸಾವಿರ ಹುದ್ದೆಗಳು ನೌಕರ ವರ್ಗಕ್ಕೆ ಸೇರುತ್ತವೆ. 6 ಸಾವಿರದಷ್ಟು ಅಧಿಕಾರಿಗಳ ಹುದ್ದೆಯೂ ಖಾಲಿಯಿವೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆಗುತ್ತಿರುವ 4 ಸಾವಿರ ಶಿಕ್ಷಕರ ನೇಮಕ ಹೊರತುಪಡಿಸಿದರೂ ಮತ್ತೆ 20 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಉಳಿಯುತ್ತವೆ. ಆರೋಗ್ಯ ಹಾಗೂ ಪಶುಸಂಗೋಪನೆ ಇಲಾಖೆಯ ವೈದ್ಯರು, ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ಗೃಹ ಇಲಾಖೆಯಲ್ಲಿನ ಪೊಲೀಸರ ನೇಮಕಕ್ಕೆ ಈ ಆರ್ಥಿಕ ಮಿತವ್ಯಯವನ್ನು ಸಡಿಲಗೊಳಿಸಿ ತ್ವರಿತ ನೇಮಕ ಪ್ರಕ್ರಿಯೆ ನಡೆಸಬೇಕಿದೆ.


 ಇಲಾಖಾವಾರು ಮಾಹಿತಿ


ಇಲಾಖೆ     ಅಧಿಕಾರಿಗಳು    ನೌಕರರು
ಕೃಷಿ    612    2387
ಪಶುಸಂಗೋಪನೆ     303    2150
ವಾಣಿಜ್ಯ ತೆರಿಗೆ     161    2108
ಸಹಕಾರ     70    1592
ಶಿಕ್ಷಣ    3454    21,350
ಅಬಕಾರಿ    196    1,960
ಅರಣ್ಯ     48    3,035
ಆರೋಗ್ಯ    2535    16,640
ನ್ಯಾಯಾಂಗ     518    7383
ಸಚಿವಾಲಯ    75    1507
ಕಾರ್ಮಿಕ     85    2554
ಗೃಹ     566    22,078
ಕಂದಾಯ    375     7845
ಸಮಾಜ ಕಲ್ಯಾಣ    57    5150
ಮಹಿಳಾ ಮತ್ತು ಮಕ್ಕಳ ಕಲ್ಯಾಣ     170    2296
ಇತರೆ ಇಲಾಖೆಗಳು    1499    14,602



ಮೂರು ವರ್ಷದಲ್ಲಿ 47 ಸಾವಿರ ನಿವೃತ್ತಿ!
2013, 2014 ಹಾಗೂ 2015ನೇ ಸಾಲಿನಲ್ಲಿ 47,153 ಸರ್ಕಾರಿ ನೌಕರರು ನಿವೃತ್ತರಾಗುತ್ತಿದ್ದಾರೆ. 2013ರಲ್ಲಿ 9265, 2014ರಲ್ಲಿ 17,298 ಹಾಗೂ 2015ರಲ್ಲಿ 20,590 ನೌಕರರು ನಿವೃತ್ತಿ ಹೊಂದುತ್ತಿದ್ದಾರೆ. ಇದರೊಂದಿಗೆ ಪ್ರಸ್ತುತವಿರುವ 1,25,359 ಖಾಲಿ ಹುದ್ದೆಗಳನ್ನು ಸೇರಿಸಿ ಒಟ್ಟು 1.72 ಲಕ್ಷ ಸಿಬ್ಬಂದಿ ನೇಮಕದ ಅಗತ್ಯ ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ.

-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement