ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆತ್ಮದ ಫಲ; ರೈತರಿಗೆ ಬಲ

Rashmi Kasaragodu
Updated On : 16 Aug 2013, 12:47 pm

ಕ.ಪ್ರ.ವಾರ್ತೆ   ಮೈಸೂರು   ಆ. 15
ಹುಣಸೂರು ತಾಲೂಕು ಗಾವಡಗೆರೆ ಹೋಬಳಿ ಮಾಚಬಾಯನಹಳ್ಳಿಯ ರೈತರೊಬ್ಬರು 'ಆತ್ಮ' ಯೋಜನೆಯ ಲಾಭ ಪಡೆದು, ಬತ್ತದ ಇಳುವರಿ ಹೆಚ್ಚಿಸಿಕೊಂಡು, ಅಧಿಕ ಲಾಭ ಪಡೆದಿದ್ದಾರೆ.
ಮಾಚಬಾಯನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರು ಬತ್ತದ ಬೆಳೆಯಲ್ಲಿ ಅವೈಜ್ಞಾನಿಕ ಪದ್ಧತಿಯಿಂದಾಗಿ ಕಡಿಮೆ ಇಳುವರಿ ಪಡೆಯುತ್ತಿದ್ದರು. 'ಆತ್ಮ' ಯೋಜನೆಯಡಿ ವೈಜ್ಞಾನಿಕ ಬೆಳೆ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು ಈ ಭಾಗದ ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ, 'ಆತ್ಮ' ಯೋಜನೆ ಉಪಯೋಜನಾ ನಿರ್ದೇಶಕ ಎಸ್. ಸತೀಶ್ ಅವರ ಮಾರ್ಗದರ್ಶನದಲ್ಲಿ ವಿಷಯ ತಜ್ಞ ಸಿ.ಕೆ. ಸತೀಶ್ ಅವರು ತರಬೇತಿ ಮತ್ತು ಅಧ್ಯಯನ ಪ್ರವಾಸದ ಮೂಲಕ ಮನವರಿಕೆ ಮಾಡಿ, ರಾಮಕೃಷ್ಣೇಗೌಡ ಎಂಬವರನ್ನು ದಾನಿ ರೈತನನ್ನಾಗಿ ಆಯ್ಕೆ ಮಾಡಿ ಪ್ರಾತ್ಯಕ್ಷತೆ ಕೈಗೊಂಡರು.
ಬಸವೇಗೌಡ ಎಂಬವರ ಪುತ್ರರಾದ ರಾಮಕೃಷ್ಣೇಗೌಡ 10ನೇ ತರಗತಿವರೆಗೆ ಓದಿದ್ದು, ಒಂದು ಎಕರೆ ನೀರಾವರಿ ಜಮೀನನ್ನು ಹೊಂದಿದ್ದಾರೆ. ಮೊದಲು ಸಾಮಾನ್ಯ ತಳಿಗಳಾದ ಜಯ- 64, ತನು ಬಿತ್ತನೆ ಬೀಜ ಉಪಯೋಗಿಸುತ್ತಿದ್ದರು. ಇದರಿಂದಾಗಿ ಪ್ರತಿ ಎಕರೆಗೆ 15 ರಿಂದ 18 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದರು.
ಬಂಡವಾಳಕ್ಕಿಂತ ಆದಾಯ ಕಮ್ಮಿ... ಎಕರೆಗೆ 25 ರಿಂದ 30 ಕೆಜಿ ಬಿತ್ತನೆ ಬೀಜ ಉಪಯೋಗ, ಒಂದು ಗುಣಿಗೆ 4 ರಿಂದ 5 ಪೈರು ನಾಟಿ ಮಾಡುವುದು. ಒಂದು ಗುಣಿಗೂ ಇನ್ನೊಂದು ಗುಣಿಗೂ ಕಡಿಮೆ ಅಂತರದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ಹೀಗಾಗಿ ಕಡಿಮೆ ಇಳುವರಿ ಬಂದು, ಆ ರೈತ ಬೇಸಾಯ ಮಾಡಲು ವ್ಯಯಿಸಿದ ಹಣಕ್ಕಿಂತ ಕಡಿಮೆ ಆದಾಯ ಬರುತ್ತಿತ್ತು.
'ಆತ್ಮ'ವಿಶ್ವಾಸ: ಇದನ್ನು ಮನಗೊಂಡ ಕೃಷಿ ಇಲಾಖೆ ಅಧಿಕಾರಿಗಳು, ರೈತನಿಗೆ 'ಆತ್ಮ' ಯೋಜನೆಯಡಿ ತರಬೇತಿ ಕೊಡಿಸುವುದರ ಜೊತೆಗೆ ಅಧ್ಯಯನ ಪ್ರವಾಸದಲ್ಲಿ ಪ್ರಗತಿಪರ ರೈತರ ಜಮೀನಿಗೆ ಭೇಟಿ ಮಾಡಿಸಿ, ಬತ್ತದ ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿಯಿಂದ ಅಧಿಕ ಇಳುವರಿ ಜೊತೆಗೆ ಉತ್ತಮ ಲಾಭ ಪಡೆಯುತ್ತಿರುವ ಬಗ್ಗೆ ಮಾಹಿತಿ ಕೊಡಿಸಿದರು.
ಹೊಸ ತಾಂತ್ರಿಕತೆ ಏನು?: ಹೈಬ್ರಿಡ್ ಬತ್ತದಲ್ಲಿ 6 ಕೆಜಿ ಮಾತ್ರ ಬಿತ್ತನೆ ಬೀಜ ಉಪಯೋಗಿಸಲು, ಬಿತ್ತನೆಗೆ ಮೊದಲು ಶೇ. 2ರ ಬೇವಿಸ್ಟಿನ್ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಲು, 1 ರಿಂದ 2 ಪೈರುಗಳನ್ನು ಮಾತ್ರ ನಾಟಿ ಮಾಡಲು, ಲಘು ಪೋಷಕಾಂಶಗಳಾದ ಜಿಂಕ್ ಸಲ್ಪೇಟ್, ಬೋರಾಕ್ಸ್, ಜಿಪ್ಸಮ್ ಮತ್ತು ಎರೆಹುಳು ಗೊಬ್ಬರ ಬಳಕೆ ಮಾಡಲು ಮಾರ್ಗದರ್ಶನ ಮಾಡಲಾಯಿತು.
ಕೃಷಿ ಇಲಾಖೆ 'ಆತ್ಮ' ಯೋಜನೆ ವತಿಯಿಂದ ರೈತರಿಗೆ ಹೈಬ್ರೀಡ್ ಬತ್ತದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಂಡು ರೈತರಿಗೆ ಬೀಜೋಪಚಾರ, ನೀರಿನ ನಿರ್ವಹಣೆ, ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು. 'ಆತ್ಮ' ಯೋಜನೆಯಡಿ ರೈತರಿಗೆ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲಿ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬತ್ತಕ್ಕೆ ಬರುವ ಕೀಟಬಾಧೆ ತಡೆಗಟ್ಟಲು ಬದುಗಳ ಮೇಲೆ ಚೆಂಡು ಹೂವು ಗಿಡಗಳನ್ನು ಬೆಳೆಸಲು ಶಿಫಾರಸು ಮಾಡಲಾಯಿತು.
ಮಣ್ಣಿನ ಆಯ್ಕೆ ಮತ್ತು ಮಣ್ಣು ಪರೀಕ್ಷೆಯಿಂದಾಗುವ ಉಪಯೋಗ, ಬೀಜೋಪಚಾರದ ಮಹತ್ವ ಮತ್ತು ಅವಶ್ಯಕತೆ, ನೀರಿನ ನಿರ್ವಹಣೆ ಮತ್ತು ಸ್ಥಳಾವಕಾಶ ನೀಡುವುದರಿಂದ ಆಗುವ ಉಪಯೋಗಗಳು, ನಿಗದಿತ ಸಮಯದಲ್ಲಿ ಕಳೆ ಮತ್ತು ರೋಗ ನಿರ್ವಹಣೆ, ಲಘು ಪೋಷಕಾಂಶಗಳ ಮಹತ್ವ ಹಾಗೂ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು.
ಇಳುವರಿಯಲ್ಲಿ ಭಾರಿ ವ್ಯತ್ಯಾಸ: ಮೊದಲು ಸಾಮಾನ್ಯ ತಳಿಗಳಾದ ಜಯ-64, ತನು ಬಳಸುತ್ತಿದ್ದರು. ನಂತರ ಹೈಬ್ರಿಡ್ ತಳಿಗಳಾದ ಜೆಪಿಆರ್ಎಚ್- 401 ಬಳಸಲಾಯಿತು. ಮೊದಲು 1 ಎಕರೆಗೆ 25 ರಿಂದ 30 ಕೆಜಿ ಬಿತ್ತನೆ ಬೀಜ ಉಪಯೋಗಿಸಲಾಗುತ್ತಿತ್ತು. ನಂತರ 6 ಕೆಜಿ ಮಾತ್ರ ಬಳಸಲಾಯಿತು. ಕೊಟ್ಟಿಗೆ ಗೊಬ್ಬರ ಬಳಕೆಯಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಮೊದಲು, ನಂತರ 5 ಗಾಡಿ ಬಳಸಲಾಯಿತು.
ಆದರೆ ಶೇ. 2 ಬೆವಿಸ್ಟಿನ್ನಿಂದ ಬೀಜೋಪಚಾರ ಮಾಡಲಾಯಿತು. ಮೊದಲು 4 ರಿಂದ 6 ಪೈರು ಒಂದು ಗುಣಿಗೆ ನಾಟಿ ಮಾಡಿದರೆ ನಂತರ 1-2 ಪೈರು ಮಾತ್ರ ಒಂದು ಗುಣಿಗೆ ನಾಟಿ ಮಾಡಲಾಯಿತು.
ಮೊದಲು ನಾಟಿ ಸಮಯದಲ್ಲಿ 20,20 ರಸಗೊಬ್ಬರ 40 ಕೆಜಿ ಬಳಕೆ ಮಾಡುತ್ತಿದ್ದರೆ ನಂತರ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್, ಜಿಪ್ಸಮ್ ಮತ್ತು ಎರೆಹುಳು ಗೊಬ್ಬರ ಬಳಕೆ ಮಾಡಲಾಯಿತು. ಮೊದಲು ಹಾಗೂ ನಂತರ ಕೂಡ ಕಳೆ ತೆಗೆದ  25 ಕೆಜಿ ಸಾರಜನಕ ನೀಡಲಾಯಿತು. ಮೊದಲು ಬತ್ತದ ಇಳುವರಿ 15 ರಿಂದ 18 ಕ್ವಿಂಟಲ್ ಬರುತ್ತಿದ್ದರೆ ಈಗ 33 ರಿಂದ 35 ಕ್ವಿಂಟಲ್ ಬರುತ್ತಿದೆ. ಮೊದಲು 4 ರಿಂದ 5 ಗಾಡಿ ಹುಲ್ಲು ಬರುತ್ತಿದ್ದರೆ ಈಗ 6 ರಿಂದ 7 ಗಾಡಿ ಹುಲ್ಲು ಬರುತ್ತಿದೆ.


ಯೋಜನೆಯಡಿಯಲ್ಲಿ ಕೈಗೊಂಡ ಪ್ರಾತ್ಯಕ್ಷತೆಯಲ್ಲಿ ಅಳವಡಿಸಿದ ತಾಂತ್ರಿಕತೆಗಳಿಂದ ನನಗೆ ಉತ್ತಮ ಇಳುವರಿ ಬಂದಿದೆ. ಈ ತಂತ್ರಜ್ಞಾನವನ್ನು ಮುಂದೆಯೂ ಅಳವಡಿಸಿಕೊಳ್ಳುತ್ತೇನೆ.
   ರಾಮಕೃಷ್ಣೇಗೌಡ, ಮಾಚಬಾಯನಹಳ್ಳಿ



ರೈತರು ಬತ್ತದ ಬೇಸಾಯದಲ್ಲಿ ಬೀಜೋಪಚಾರ ಮತ್ತು ಲಘು ಪೋಷಕಾಂಶಗಳಾದ ಜಿಪ್ಸಮ್, ಜಿಂಕ್ ಸಲ್ಫೇಟ್ ಮತ್ತು ಬೋರಾಕ್ಷ್ಗಳ ಬಳಕೆಯಿಂದ ಹೆಚ್ಚಿನ ಉತ್ಪಾದನೆ ಜತೆ ಉತ್ತಮ ಆದಾಯ ಗಳಿಸಬಹುದು.
   ಕೆ. ಕೆಂಚೇಗೌಡ, ಸಹಾಯಕ ಕೃಷಿ ನಿರ್ದೇಶಕರು, ಹುಣಸೂರು


'ಆತ್ಮ' ಯೋಜನೆಯು ವ್ಯವಸ್ಥಿತ ಸಂಶೋಧನಾ ಮತ್ತು ವಿಸ್ತರಣಾ ಯೋಜನೆಯ ಕಾರ್ಯಸೂಚಿಯನ್ವಯ ರೈತ ಸಮುದಾಯಕ್ಕೆ ತರಬೇತಿ, ಕ್ಷೇತ್ರ ದರ್ಶನ, ಪ್ರಾತ್ಯಕ್ಷತೆಗಳು, ಅಧ್ಯಯನ ಪ್ರವಾಸ, ವಸ್ತು ಪ್ರದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಾಹಿತಿ ಒದಗಿಸುವುದಾಗಿದೆ. ರೈತ ಬಾಂಧವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.
   ಡಾ.ಎಂ.ವಿ. ಗೋವಿಂದ ರಾಜು, ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಹುಣಸೂರು

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement