ಇನ್ನೂ ಲೆಕ್ಕ ಸಿಗದ ಪ್ರಕೃತಿ ವಿಕೋಪ ಪರಿಹಾರ ನಿಧಿ
ಪ್ರಸಕ್ತ ವರ್ಷದ ಮುಂಗಾರು ಮಳೆ ...
ಚಿಕ್ಕಮಗಳೂರು: ಪ್ರಸಕ್ತ ವರ್ಷದ ಮುಂಗಾರು ಮಳೆ ಆರಂಭವಾಗಿ ಎರಡು ತಿಂಗಳು ಕಳೆದರೂ ಕಳೆದ ವರ್ಷ ರಾಜ್ಯ ಸರ್ಕಾರ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಿಡುಗಡೆ ಮಾಡಿದ ಅನುದಾನದ ಬಳಕೆಯ ಬಗ್ಗೆ ಕೆಲವು ಜಿಲ್ಲೆಗಳು ಇದುವರೆಗೆ ಪ್ರಮಾಣ ಪತ್ರವನ್ನೇ ನೀಡಿಲ್ಲ.
ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಕಾಲ ಕಾಲಕ್ಕೆ ಜಿಲ್ಲಾಡಳಿತ ಸರ್ಕಾರಕ್ಕೆ ಉಪಯೋಗಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಈ ಕೆಲಸ ಸಕಾಲಕ್ಕೆ ಆಗದೆ ಹೋದರೆ ಸರ್ಕಾರಕ್ಕೆ ಪ್ರಗತಿಯ ಬಗ್ಗೆ ಮಾಹಿತಿ ಸಿಗುವುದು ಕಷ್ಟ. 2012-13ನೇ ಸಾಲಿನಲ್ಲಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎಸ್ಡಿಆರ್ಎಫ್)ಯಿಂದ ರಾಜ್ಯ ಸರ್ಕಾರ 30 ಜಿಲ್ಲೆಗಳಿಗೆ 1027.68 ಕೋಟಿ ಬಿಡುಗಡೆ ಮಾಡಿತ್ತು.
ಇದರಲ್ಲಿ ಕಳೆದ ಜುಲೈ 31ರವರೆಗೆ ಬಳಕೆಯಾಗಿರುವ ಅನುದಾನ ಕೇವಲ 304.18 ಕೋಟಿ ಮಾತ್ರ.
ರಾಜ್ಯ ಸರ್ಕಾರ ಪ್ರತಿ ವರ್ಷ ಜಿಲ್ಲೆಗಳಿಂದ ಬೇಡಿಕೆಯ ಆಧಾರದ ಮೇಲೆ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಹಣ ಬಿಡುಗಡೆ ಮಾಡುತ್ತದೆ. ಈ ಹಣವನ್ನು ಆಸ್ತಿಪಾಸ್ತಿ ಹಾನಿಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳದಂತೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸುತ್ತಾ ಬರುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಪ್ರಕೃತಿ ವಿಕೋಪಗಳಿಗೆ ಮಾತ್ರ ಈ ಹಣವನ್ನು ಬಳಕೆ ಮಾಡುತ್ತಿದ್ದಾರೆ.
ಯಾವ ಜಿಲ್ಲೆಗೆ ಎಷ್ಟೆಷ್ಟು?: ರಾಜ್ಯ ಸರ್ಕಾರ 2012-13ನೇ ಸಾಲಿನಲ್ಲಿ ಬಾಗಲಕೋಟೆಗೆ 30.38 ಕೋಟಿ, ಬೆಂಗಳೂರು ನಗರ 11.49 ಕೋಟಿ, ಬೆಂಗಳೂರು ಗ್ರಾಮಾಂತರ 13.26 ಕೋಟಿ, ಬಳ್ಳಾರಿ 34.92 ಕೋಟಿ, ಬೆಳಗಾವಿ 50.77 ಕೋಟಿ, ಬೀದರ್ 20.36, ಬಿಜಾಪುರ 50.01 ಕೋಟಿ, ಚಾಮರಾಜನಗರ 23.28 ಕೋಟಿ, ಚಿಕ್ಕಮಗಳೂರು 35.44 ಕೋಟಿ, ಚಿಕ್ಕಬಳ್ಳಾಪುರ 40.19 ಕೋಟಿ, ಚಿತ್ರದುರ್ಗ 63.57 ಕೋಟಿ, ದಾವಣಗೆರೆ 30.99 ಕೋಟಿ, ಧಾರವಾಡ 27.66 ಕೋಟಿ, ಗದಗ 28.35 ಕೋಟಿ, ಗುಲ್ಬರ್ಗ 52.05 ಕೋಟಿ, ಹಾಸನ 54.23 ಕೋಟಿ, ಹಾವೇರಿ 32.22 ಕೋಟಿ, ಉತ್ತರ ಕನ್ನಡ 13.51 ಕೋಟಿ, ಕೋಲಾರ 38.97 ಕೋಟಿ, ಕೊಪ್ಪಳ 40.31 ಕೋಟಿ, ಮಡಿಕೇರೆ 7.84 ಕೋಟಿ, ಮಂಡ್ಯ 42.85 ಕೋಟಿ, ದಕ್ಷಿಣ ಕನ್ನಡ 9.56 ಕೋಟಿ, ಮೈಸೂರು 41.69 ಕೋಟಿ, ರಾಯಚೂರು 32.06 ಕೋಟಿ, ರಾಮನಗರ 34.29 ಕೋಟಿ, ಶಿವಮೊಗ್ಗ 23.05 ಕೋಟಿ, ತುಮಕೂರು 93.03 ಕೋಟಿ, ಉಡುಪಿ 6.91 ಕೋಟಿ, ಯಾದಗಿರಿ ಜಿಲ್ಲೆಗೆ 24.32 ಕೋಟಿ ಬಿಡುಗಡೆ ಮಾಡಲಾಗಿತ್ತು.
30 ಜಿಲ್ಲೆಗಳ ಪೈಕಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಉತ್ತರ ಕನ್ನಡ, ಕೊಪ್ಪಳ, ದಕ್ಷಿಣ ಕನ್ನಡ, ರಾಮನಗರ, ಶಿವಮೊಗ್ಗ, ಯಾದಗಿರಿ ಜಿಲ್ಲೆಗಳು ಹಣ ಬಳಕೆಯ ಪ್ರಮಾಣ ಪತ್ರವನ್ನು ಈವರೆಗೆ ಸಲ್ಲಿಸಿಲ್ಲ. ಹಣ ಬಳಕೆಯ ಬಗ್ಗೆ ಕೂಡಲೇ ಪ್ರಮಾಣಪತ್ರ ಸಲ್ಲಿಸುವಂತೆ ಜುಲೈ ಕೊನೆಯ ವಾರದಲ್ಲಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.
67 ಕೋಟಿ ಬಿಡುಗಡೆ: ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಈ ಬಾರಿ 67.50 ಕೋಟಿ ಬಿಡುಗಡೆ ಮಾಡಿದೆ. ನೆರೆ ಹಾವಳಿಯಿಂದ ಹಾನಿಯಾದ ಆಸ್ತಿ ಮತ್ತು ಜನ ಜಾನುವಾರುಗಳ ರಕ್ಷಣೆಗಾಗಿ 5 ತಾಲೂಕುಗಳಿಗಿಂತ ಕಡಿಮೆ ಹೊಂದಿರುವ ಜಿಲ್ಲೆಗಳಿಗೆ ತಲಾ 10 ಲಕ್ಷ, ಇನ್ನುಳಿದ ಜಿಲ್ಲೆಗಳಿಗೆ ತಲಾ 20 ಲಕ್ಷದಂತೆ 30 ಜಿಲ್ಲೆಗಳಿಗೆ 4.50 ಕೋಟಿ, ಇದರ ಜತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ 1.50 ಕೋಟಿ ಬಿಡುಗಡೆ ಮಾಡಿದೆ.
ಇದರ ಜತೆಗೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ 7.50 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ.
ಆರ್. ತಾರಾನಾಥ್