ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಲ್ಲಿ ಜಾತಿಯೇ ಪ್ರಮುಖ ಅಸ್ತ್ರ

Rashmi Kasaragodu
Updated On : 16 Aug 2013, 12:39 pm

ಕ.ಪ್ರ.ವಾರ್ತ್ಣೆ ಮಂಡ್ಯ್ಣ ಆ.15
ಸಕ್ಕರೆ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಜಾತಿ ರಾಜಕಾರಣಕ್ಕೆ ಹೆಸರಾದ ಒಕ್ಕಲಿಗರ ಶಕ್ತಿ ಕೇಂದ್ರ. ಪ್ರತಿ ಚುನಾವಣೆಗಳಲ್ಲೂ ಅಭ್ಯರ್ಥಿಗಳ ಗೆಲುವಿನಲ್ಲಿ ಜಾತಿಯೇ ಪ್ರಮುಖ ಅಸ್ತ್ರ. ಒಕ್ಕಲಿಗರದ್ದೇ ಪಾರುಪತ್ಯ.
1952 ರಿಂದ 2009ರವರೆಗೆ ಲೋಕಸಭೆಗೆ ನಡೆದಿರುವ ಎರಡು ಉಪಚುನಾವಣೆ ಹಾಗೂ 15 ಸಾರ್ವತ್ರಿಕ ಚುನಾವಣೆಗಳಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾದವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ. ಹೀಗಾಗಿ ಇಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
ಲೋಕಸಭೆಗೆ 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಎಂ.ಕೆ.ಶಿವನಂಜಪ್ಪ ಆಯ್ಕೆಯಾಗುವ ಮೂಲಕ ಜಾತಿ ರಾಜಕಾರಣದ ಶಕ್ತಿ ಪ್ರದರ್ಶಿಸಿದ್ದರು. 1957, 1962 ಹಾಗೂ 1967ರಲ್ಲಿ ಕಾಂಗ್ರೆಸ್ನಿಂದ ಮರು ಆಯ್ಕೆಯಾಗಿದ್ದರು.
ಶಿವನಂಜಪ್ಪ ಅವರ ಅಕಾಲಿಕ ನಿಧನದಿಂದ 1968ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಜಯ ಸಾಧಿಸಿದ ಎಸ್.ಎಂ. ಕೃಷ್ಣ, 1971ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದರು. 1977ರ ಚುನಾವಣೆಯಿಂದ ರಾಜಕೀಯ ಪಕ್ಷದೊಳಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಹೆಚ್ಚಿನ ಮನ್ನಣೆ ಪಡೆದುಕೊಂಡಿತು.
ಅನ್ಯ ಸಮುದಾಯಗಳಲ್ಲಿ ಪ್ರಬಲ ನಾಯಕರಿದ್ದರೂ ಸಹ ರಾಜಕೀಯ ಪಕ್ಷಗಳು ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ ಎಂಬ ನೆಪ ಮುಂದಿಟ್ಟುಕೊಂಡು ಅವರಿಗೆ ಟಿಕೆಟ್ ನೀಡುವ ಗೋಜಿಗೆ ಹೋಗಿಲ್ಲ. ಜತೆಗೆ ಈವರೆಗಿನ ಚುನಾವಣೆಗಳಲ್ಲಿ ಅನ್ಯ ಸಮುದಾಯದ ಮುಖಂಡರು ಸ್ವತಂತ್ರರಾಗಿ ಸ್ಪರ್ಧೆ ಮಾಡಿರುವುದು ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ.
ಕ್ಷೇತ್ರದಲ್ಲಿ  ಜಾತಿಯದ್ದೇ ಪ್ರಾಬಲ್ಯ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಯಾವ ಚುನಾವಣೆಯಲ್ಲಿಯೂ ಒಕ್ಕಲಿಗ ಸಮುದಾಯದವರನ್ನು ಹೊರತು ಪಡಿಸಿ ಅನ್ಯ ಸಮುದಾಯದ ಯಾವ ಅಭ್ಯರ್ಥಿಯೂ ಗೆಲವು ಸಾಧಿಸಲು ಸಾಧ್ಯವಾಗಿಲ್ಲ.  ಕ್ಷೇತ್ರದ ಮತದಾರರು ಎಂದೂ ಜಾತ್ಯತೀತತೆ ಮೆರೆದಿಲ್ಲ.
ಒಕ್ಕಲಿಗರನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ಟಿಕೆಟ್ ಕೊಟ್ಟರೆ ಮಾತ್ರ ಗೆಲವು ಸಾಧ್ಯ ಎಂಬ ಸತ್ಯವನ್ನು ಮನಗಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಅವರಿಗೇ ಟಿಕೆಟ್ ನೀಡಿಕೊಂಡು ಬಂದಿದೆ. ಈ ಲೆಕ್ಕಾಚಾರವನ್ನು ಚುನಾವಣೆಯಲ್ಲಿ ಮತದಾರರು ತಲೆ ಕೆಳಗೆ ಮಾಡದಿರುವುದು ಗಮನಾರ್ಹ ಸಂಗತಿ. ಪ್ರತಿ ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ನಿಂದ ಹಿಡಿದು ಗೆಲುವಿನ ತನಕ ಎಲ್ಲಾ ವಿಷಯಗಳಲ್ಲಿಯೂ ಜಾತಿ ಲೆಕ್ಕಾಚಾರ ಮೇಲುಗೈ ಸಾಧಿಸುತ್ತಿದೆ. ಮೇಲ್ನೋಟಕ್ಕೆ ಒಕ್ಕಲಿಗರ ಪ್ರಾಬಲ್ಯ ಸತ್ಯವಾದರೂ, ಇಲ್ಲೂ ಒಳ ಜಾತಿಗಳ ಪ್ರಭಾವವೇ ಪ್ರಮುಖ ಅಸ್ತ್ರ.
ಇದನ್ನು ಅರಿತುಕೊಂಡಿರುವ ಕಾಂಗ್ರೆಸ್, ಮಂಡ್ಯ ಸಂಸತ್ ಕ್ಷೇತ್ರ ಉಪಚುನಾವಣೆಯಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ವರ್ಗದ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸಿ ಮತಬೇಟೆ ನಡೆಸುತ್ತಿದೆ.
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಶಕ್ತಿಯನ್ನು ಕುಂದಿಸಿ ಒಕ್ಕಲಿಗ ಮತಗಳನ್ನು ಸೆಳೆಯಲು ಆ ಸಮುದಾಯದ ಪ್ರಭಾವಿ ನಾಯಕರಾಗಿರುವ ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ. ಕೃಷ್ಣ ಮತ್ತು ಜಿಲ್ಲಾ ಮಂತ್ರಿ ಅಂಬರೀಷ್ ಅವರನ್ನು ಕಾಂಗ್ರೆಸ್ ಪಕ್ಷ ಐಕಾನ್ಗಳಾಗಿ ಬಳಸಿಕೊಳ್ಳುತ್ತಿದೆ. ಇನ್ನು ಅಹಿಂದ ವರ್ಗದ ಮತದಾರರನ್ನು ಓಲೈಸಿಕೊಳ್ಳಲು ಆಯಾ ವರ್ಗದ ಪ್ರಭಾವಿ ನಾಯಕರನ್ನೇ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿದೆ.
ಅಷ್ಟೇ ಅಲ್ಲದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ಷೇತ್ರದಾದ್ಯಂತ ಪ್ರಚಾರ ಸಭೆಗಳ ಮೂಲಕ ಅಹಿಂದ ವರ್ಗದವನ್ನು ಸೆಳೆಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಸಮರ್ಥ ಮುಖಂಡರು, ಕಾರ್ಯಕರ್ತರು ಇಲ್ಲ. ಒಂದರ್ಥದಲ್ಲಿ ಜಿಲ್ಲೆಯ ಮಟ್ಟಿಗೆ ನೆಲೆಯೇ ಇಲ್ಲದ ಬಿಜೆಪಿ ಚಿಂತಾಜನಕ ಸ್ಥಿತಿಯಲ್ಲಿದೆ. ಈ ಪಕ್ಷದೊಂದಿಗಿನ ಮೈತ್ರಿಯಿಂದ ಅಲ್ಪಸಂಖ್ಯಾತರ ಮತಗಳು ಎಲ್ಲಿ ಕೈ ತಪ್ಪುತ್ತದೆಯೇ ಎಂಬ ಭೀತಿ ಜೆಡಿಎಸ್ನ ಕೆಲ ನಾಯಕರನ್ನು ಕಾಡುತ್ತಿದೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಚಿತ್ರನಟಿ ರಮ್ಯಾ ಕಾಂಗ್ರೆಸ್ ಹಾಗೂ ಸಿ.ಎಸ್.ಪುಟ್ಟರಾಜು ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿ ಇರುವುದರಿಂದ ನೇರ ಹಣಾಹಣಿ ನಡೆಯುತ್ತಿದೆ. ಇಬ್ಬರಲ್ಲಿ ಯಾರೇ ಗೆಲವು ಸಾಧಿಸಬೇಕಾದರು ಅದು ಜಾತಿ ಶಕ್ತಿ ರಾಜಕಾರಣದಿಂದ ಮಾತ್ರ ಸಾಧ್ಯ.


ಲೋಕಸಭಾ ಸದಸ್ಯರು
1952 - ಎಂ.ಕೆ.ಶಿವನಂಜಪ್ಪ  (ಕಾಂಗ್ರೆಸ್)
1957 - ಎಂ.ಕೆ.ಶಿವನಂಜಪ್ಪ (ಕಾಂಗ್ರೆಸ್)
1962 - ಎಂ.ಕೆ.ಶಿವನಂಜಪ್ಪ (ಕಾಂಗ್ರೆಸ್)
1967- ಎಂ.ಕೆ.ಶಿವನಂಜಪ್ಪ (ಕಾಂಗ್ರೆಸ್)
1968 ಉಪಚುನಾವಣೆ- ಎಸ್.ಎಂ. ಕೃಷ್ಣ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ)
1971- ಎಸ್.ಎಂ. ಕೃಷ್ಣ (ಕಾಂಗ್ರೆಸ್)
1972 ಉಪಚುನಾವಣೆ- ಚಿಕ್ಕಲಿಂಗಯ್ಯ (ಕಾಂಗ್ರೆಸ್)
1977 - ಕೆ.ಚಿಕ್ಕಲಿಂಗಯ್ಯ  (ಕಾಂಗ್ರೆಸ್)
1980 - ಎಸ್.ಎಂ.ಕೃಷ್ಣ (ಕಾಂಗ್ರೆಸ್)
1984 - ಕೆ.ವಿ.ಶಂಕರಗೌಡ (ಜನತಾ ಪಾರ್ಟಿ)
1989 - ಜಿ.ಮಾದೇಗೌಡ (ಕಾಂಗ್ರೆಸ್)
1991 - ಜಿ.ಮಾದೇಗೌಡ (ಕಾಂಗ್ರೆಸ್)
1996- ಕೃಷ್ಣ ( ಜನತಾ ದಳ)
1998 - ಅಂಬರೀಷ್ (ಜನತಾ ದಳ)
1999 - ಅಂಬರೀಷ್ (ಕಾಂಗ್ರೆಸ್)
2004- ಅಂಬರೀಷ್ (ಕಾಂಗ್ರೆಸ್)
2009- ಎನ್.ಚಲುವರಾಯಸ್ವಾಮಿ (ಜೆಡಿಎಸ್)

ಎಂ.ಅಫ್ರೋಜ್ ಖಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement