ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಚ್ಡಿಕೆ ಪತ್ನಿ ಗೆಲವಿಗಾಗಿ ಬಿಜೆಪಿ ಸಾಥ್: ಡಿ.ಕೆ. ಸುರೇಶ್

ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಗೆ ...

Rashmi Kasaragodu
Updated On : 16 Aug 2013, 12:02 pm

ಕ.ಪ್ರ.ವಾರ್ತೆ   ಬೆಂಗಳೂರು   ಆ. 15
ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದರೆ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೇ ? ಖಂಡಿತಾ ಇಲ್ಲ. ಅಭ್ಯರ್ಥಿಯನ್ನು ಅವರು ಬಲಿಪಶು ಮಾಡುತ್ತಿದ್ದರು. ಸ್ವಾರ್ಥ ರಾಜಕಾರಣಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ.
ಇದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಆರೋಪ.
ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಸಂದರ್ಭ ಬಂದರೆ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿ ಹಿತವನ್ನೂ ಬಲಿಕೊಡುತ್ತಾರೆ. ಆದರೆ ಕುಟುಂಬದ ವಿಚಾರ ಬಂದಾಗ ಸ್ವಾರ್ಥ ಮೆರೆಯುತ್ತಾರೆ ಎಂದು ಕಿಡಿಕಾರಿದರು.
ಸಂದರ್ಶನದ ಪೂರ್ಣಪಾಠ ಹೀಗಿದೆ...
ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ರಾಜ್ಯ ಹಾಗೂ ದೇಶದ ಹಿತ ಮುಖ್ಯವಲ್ಲ. ಸ್ವಹಿತಾಸಕ್ತಿ ಅವರಿಬ್ಬರ ಮನೋಧರ್ಮ. ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸುವುದಕ್ಕೆ ಮೊದಲೇ ಅವರ ಈ ಸ್ವಭಾವ ಅನಾವರಣಗೊಂಡಿದೆ. ಅಧಿಕಾರಕ್ಕಾಗಿ ಈ ಹಿಂದೆ ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದ ಕುಮಾರಸ್ವಾಮಿ ಈಗ ಬಿಜೆಪಿ ಸಖ್ಯ ಬೆಳೆಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಸ್ವಾರ್ಥ ರಾಜಕಾರಣ ಮಾಡುವುದಿಲ್ಲ ಎಂದಾಗಿದ್ದರೆ ವಿಧಾನಸಭೆಗೆ ಅವರು ರಾಜಿನಾಮೆ ನೀಡಬಹುದಿತ್ತು. ಅದನ್ನು ಬಿಟ್ಟು ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುಂದುವರಿದರೂ ಆಶ್ಚರ್ಯವಿಲ್ಲ. ಆದರೆ ಜನತೆಗೆ ಅವರು ಮಾಡುವ ಮೋಸ ಗೊತ್ತಾಗಿದೆ.
ಬಿಜೆಪಿ ಜತೆ ಒಡಂಬಂಡಿಕೆ ಮಾಡಿಕೊಂಡ ಇದೇ ಮುಖಂಡರು ನಾವು ಯೋಗೇಶ್ವರ ಅವರ ಬೆಂಬಲ ಪಡೆದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಯೋಗೇಶ್ವರ ನನ್ನ ಹಿತೈಶಿ. ಅವರು ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಕೇಂದ್ರದಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೂ ದೇವೇಗೌಡರ ಕುಟುಂಬ ವರ್ಗದಿಂದ ಸಾಕಷ್ಟು ತೊಂದರೆಯಾಗಿದೆ.
10 ವರ್ಷದ ಹಿಂದೆ ನಿಲ್ಲುತ್ತಿದೆ: ನಾನು ಚುನಾವಣೆಗೆ ನಿಂತ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದು ತಪ್ಪು ಕಲ್ಪನೆ. ಮನಸ್ಸು ಮಾಡಿದ್ದರೆ 10 ವರ್ಷದ ಹಿಂದೆ ಸಂಸದನಾಗಿರುತ್ತಿದ್ದೆ. ಆದರೆ ಈ ರೀತಿ ಮಾಡಿದ್ದರೆ ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ಬರುತ್ತಿತ್ತು. ಅವರು ಪಕ್ಷದ ಶಿಸ್ತಿನ ಸಿಪಾಯಿ. ನನ್ನನ್ನು ಮುಂದಿಟ್ಟುಕೊಂಡು ಅವರು ಸಚಿವ ಸ್ಥಾನ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದರಲ್ಲಿ ಹುರುಳಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು, ದೆಹಲಿ ಮುಖಂಡರು ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿಯೇ ನನ್ನನ್ನು ಕಣಕ್ಕಿಳಿಸಿದ್ದಾರೆ.
ಬೇಟೆಯಾಡುತ್ತಿಲ್ಲ : ನನ್ನ ಗೆಲುವಿಗಾಗಿ ಬೇರೆ ಪಕ್ಷದ ಮುಖಂಡರನ್ನು ಬೇಟೆಯಾಡುತ್ತಿಲ್ಲ. ಜೆಡಿಎಸ್ ಹಾಗೂ ಬಿಜೆಪಿಯ ಸೈದ್ಧಾಂತಿಕ ಅಧಃಪತನದಿಂದ ಬೇಸತ್ತು, ಅಲ್ಲಿನ ಉಸಿರುಗಟ್ಟಿಸುವ ವಾತಾವಾರಣವನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಪ್ರಕ್ರಿಯೆ ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲೇ ನಡೆಯುತ್ತಿತ್ತು. ರಾಜರಾಜೇಶ್ವರಿ ನಗರದಲ್ಲಿ ಅನೇಕ ಬಿಜೆಪಿ ಮುಖಂಡರು ಈ ಮೊದಲೇ ಕಾಂಗ್ರೆಸ್ ಸೇರಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಅದು ದೊಡ್ಡದಾಗಿ ಕಾಣುತ್ತದೆ. ಜೆಡಿಎಸ್ ಹಾಗೂ ಬಿಜೆಪಿಯವರು ಮಾಡುತ್ತಿರುವ ಈ ಆರೋಪಕ್ಕೆ ಯಾರೂ ಬೆಲೆ ಕೊಡಬೇಕಿಲ್ಲ.
ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಳ್ಳದೇ ಇದ್ದರೂ ನನಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ಇಲ್ಲಿನ ಅರ್ಧ ಭಾಗ ನಗರ ಪ್ರದೇಶಕ್ಕೆ ಸೇರಿದ್ದರೆ, ಇನ್ನರ್ಧ ಗ್ರಾಮಾಂತರ ಪ್ರದೇಶದಲ್ಲಿದೆ. ವಿಶೇಷವೆಂದರೆ ನಗರ ಪ್ರದೇಶದಲ್ಲಿರುವ ಜನರಿಗೆಕುಮಾರಸ್ವಾಮಿ ಇಷ್ಟು ದಿನ ತಮ್ಮ ಪ್ರತಿನಿಧಿಯಾಗಿದ್ದರು ಎಂಬುದೇ ಗೊತ್ತಿಲ್ಲ. ಅಷ್ಟರಮಟ್ಟಿಗೆ ಅವರು ಜನತೆಯ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ನಾನು ಕಳೆದ ಹತ್ತು ವರ್ಷಗಳಿಂದ ಈ ಭಾಗದ ಜನರ ಸಂಪರ್ಕದಲ್ಲಿದ್ದೇನೆ. ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರಂತರವಾಗಿ ಜನಸೇವೆ ಮಾಡುತ್ತಿದ್ದೇವೆ.
ನೀರು ಪೂರೈಕೆಗಾಗಿ ನಾವು ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇವೆ ಎಂಬುದು ಕನಕಪುರ, ರಾಮನಗರದ ಪ್ರತಿಯೊಬ್ಬ ನಾಗರಿಕನಿಗೂ ಗೊತ್ತು. ಕ್ಷೇತ್ರದ 20 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇವೆ. ಈ ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಪ್ರತಿ ಪಂಚಾಯಿತಿಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುತ್ತೇನೆ. ಕೇಂದ್ರ-ರಾಜ್ಯ ಸರ್ಕಾರ ಹಾಗೂ ಜನತೆಯ ನಡುವಿನ ಸಂಪರ್ಕ ಸೇತುವಾಗಿ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.


ಕುಮಾರಸ್ವಾಮಿ ಚಿತಾವಣೆಯಿಂದ ಮೊಕದ್ದಮೆ


ನನ್ನ ಮೇಲಿರುವ ಎಲ್ಲ ಮೊಕದ್ದಮೆಗಳೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಚಿತಾವಣೆಯಿಂದ ದಾಖಲಾಗಿರುವಂತದ್ದು. ನನಗೆ ನ್ಯಾಯಾಲಯದಲ್ಲಿ ವಿಶ್ವಾಸವಿದೆ. ಇವೆಲ್ಲವೂ ಸುಳ್ಳು ಎಂದು ಸಾಬೀತು ಮಾಡುತ್ತೇನೆ ಎಂದು ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಈ ಎಲ್ಲ ಮೊಕದ್ದಮೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣಪತ್ರದಲ್ಲಿ ನಮೂದಿಸಿದ್ದೇನೆ. ಯಾವುದನ್ನೂ ಮುಚ್ಚಿಡುವ ಸ್ವಭಾವ ನನ್ನದಲ್ಲ.


ಯಾರೋ ಮಾಡಿದ ಕೆಲಸ ತನ್ನದು ಎನ್ನುತ್ತಿದ್ದಾರೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾರೋ ಮಾಡಿದ ಕೆಲಸವನ್ನು ತನ್ನ ಕೊಡುಗೆ ಎನ್ನುತ್ತಿದ್ದಾರೆ. ಶಿಂಶಾದಿಂದ ಕನಕಪುರದ ಮೂರು ಹೋಬಳಿಗೆ ರು. 120 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಿದ್ದು ಶಾಸಕ ಡಿ.ಕೆ.ಶಿವಕುಮಾರ್. ಆದರೆ ಕುಮಾರಸ್ವಾಮಿ ಈ ಸಾಧನೆ ಮಾಡಿದ್ದು ನಾನು ಎನ್ನುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ.

-ರಾಘವೇಂದ್ರ ಭಟ್



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement