ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಗ್ಗಿತು ಚಿಕನ್, ಕೇಳೋರಿಲ್ಲ ಮಟನ್

Rashmi Kasaragodu
Updated On : 16 Aug 2013, 1:28 am


ಕ.ಪ್ರ.ವಾರ್ತೆ   ಬೆಂಗಳೂರು   ಆ. 15
ಶ್ರಾವಣ ಮಾಸದಲ್ಲಿ ಹೂವು, ಹಣ್ಣು ಮತ್ತು ಕೆಲ ತರಕಾರಿಗಳ ಬೆಲೆ ಏರಿಕೆ ಮತ್ತು ಇಳಿಕೆ ಕಂಡಿದೆ. ಆದರೆ, ಶಾಖಾಹಾರಿಗಳು ಮಾಂಸವನ್ನು ದೂರ ತಳ್ಳಿರುವುದರ ಪರಿಣಾಮ ಕೋಳಿ ಮಾಂಸ ದರ ದಿಢೀರ್ ಇಳಿಕೆ ಕಂಡಿದೆ. ಇದರಿಂದ ವಹಿವಾಟಿನಲ್ಲಿ ಭಾರೀ ಕುಸಿತ ಕಾಣುವಂತಾಗಿದೆ.
ಕಳೆದ ಜೂನ್-ಜುಲೈ ತಿಂಗಳಲ್ಲಿ ಪ್ರತಿದಿನಕ್ಕೆ 100ರಿಂದ 120ಟನ್ ಬಿಕರಿಯಾಗುತ್ತಿದ್ದ ಕೋಳಿ ಮಾಂಸದ ಮಾರಾಟ ಪ್ರಮಾಣ ಈಗ ಶೇ.40ರಷ್ಟು ಇಳಿಕೆಯಾಗಿದೆ. ಹೆಚ್ಚೆಂದರೆ ಕಳೆದ ಭಾನುವಾರ 55ಟನ್ ಮಾರಾಟವಾಗಿದೆ.
ಶ್ರಾವಣ ಮಾಸದಲ್ಲಿ ಹಿಂದೂ ಸಂಪ್ರದಾಯಸ್ಥರಲ್ಲಿ ಬಹುತೇಕ ಮಂದಿ ಮಾಂಸಾಹಾರ ಸೇವನೆಯಿಂದ ದೂರ ಉಳಿಯುತ್ತಾರೆ. ಹೀಗಾಗಿ ಕೋಳಿ ಮಾಂಸದ ವಹಿವಾಟು ಇಳಿಮುಖವಾಗಿದೆ.
ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನ ಮತ್ತು ಶುಭ ಕಾರ್ಯಗಳು ಹೆಚ್ಚು. ಮನೆಯಲ್ಲಿ ಪೂಜೆ, ಪುನಸ್ಕಾರ, ಮತ್ತಿತರೇ ಕೈಂಕರ್ಯಗಳು ಜೋರು. ಹೀಗಾಗಿ, ಮಾಂಸದೂಟಕ್ಕೆ ನಿರ್ಬಂಧವಿದೆ.  
ರಸ್ತೆಯ ಬದಿ ಅಂಗಡಿಗಳ ವ್ಯಾಪಾರ ಡಲ್: ಕೋಳಿ ಮಾಂಸ ಹೊಟೇಲ್‌ಗಿಂತ ಹೆಚ್ಚಾಗಿ ಮಾರಾಟವಾಗುವುದು ರಸ್ತೆಬದಿ ಕಬಾಬ್ ಅಂಗಡಿಗಳಲ್ಲಿ. ಇಲ್ಲಿ ವಹಿವಾಟು ಕೂಡ ಜೋರಾಗಿಯೇ ನಡೆಯುತ್ತಿತ್ತು. ಆದರೆ, ಶ್ರಾವಣದ ಬಿಸಿ ಇಲ್ಲಿಯೂ  ತಟ್ಟಿದೆ. ವ್ಯಾಪಾರ ಡಲ್ ಆಗಿದೆ.
ಪರಿಣಾಮ, ದಿನಕ್ಕೆ 50ಕೆ.ಜಿ ಬಿಕರಿಯಾಗುತ್ತಿದ್ದ ಕಬಾಬ್, ಈಗ 10ಕೆ.ಜಿ ವ್ಯಾಪಾರವಾಗುವುದೇ ಹೆಚ್ಚೆಂಬಂತಾಗಿದೆ. ಅಲ್ಲದೇ, ರಾತ್ರಿ 11ಗಂಟೆ ಆದರೂ ಅಂಗಡಿ ಮುಚ್ಚಲು ಮೀನಮೇಷ ಎಣಿಸುತ್ತಿದ್ದ ವ್ಯಾಪಾರಿಗಳು, ವ್ಯಾಪಾರ ಡಲ್ ಆದ ನಂತರ ಅವಧಿಯನ್ನು ಕಡಿತಗೊಳಿಸಿದ್ದಾರೆ.
ಕೋಳಿ ಮಾಂಸ ಮಾತ್ರವಲ್ಲ, ಮೀನು ಮತ್ತು ಕುರಿಮಾಂಸದ ತನ್ನ ವಹಿವಾಟಿನಲ್ಲಿಯೂ ಕೊಂಚ ಇಳಿಕೆ ಕಂಡಿದೆ. ರಂಜಾನ್ ದಿನವನ್ನು ಹೊರತುಪಡಿಸಿ ಬಾಕಿ ದಿನಗಳು ಮಾಂಸವನ್ನು ಕೇಳುವವರೇ ಇಲ್ಲವೆಂಬಂತಾಗಿದೆ.
ಶುಭಸೂಚನೆಯ ಸಂಕೇತವಾದ ಶ್ರಾವಣಕ್ಕೆ ವಿಶಿಷ್ಟ ಅರ್ಥವುಂಟು. ಕಾರಣ, ಅದೆಂತಹ ಮಾಂಸಪ್ರಿಯರು ಕೂಡ ಅದನ್ನು ದೂರ ತಳ್ಳಿ ವ್ರತವಲ್ಲದಿದ್ದರೂ, ಈ ಸಮಯದಲ್ಲಿ ತಿನ್ನಕೂಡದು ಎಂಬ ಮನಸ್ಸು ಹೊಂದಿದ್ದಾರೆ.



ಕೋಳಿ ಮಾಂಸದ ಕಳೆದ ತಿಂಗಳ ಬೆಲೆ 125 (ಕೆ.ಜಿ ಗೆ)


ಚಿಲ್ಲರೆ ಮಾರಾಟ ದರ    125
ಚರ್ಮಸಹಿತ    175
ಚರ್ಮರಹಿತ    213

ಇಳಿಕೆಯಾದ ಬೆಲೆ 87 (ಕೆ.ಜಿ.ಗೆ)

ಚಿಲ್ಲರೆ ಮಾರಾಟ ದರ    87
ಚರ್ಮಸಹಿತ    146
ಚರ್ಮರಹಿತ    177

ಭಾಗ್ಯಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement