ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರವೀಂದ್ರ ಶ್ರೀಕಂಠಯ್ಯ ಅತಂತ್ರ

Rashmi Kasaragodu
Updated On : 16 Aug 2013, 12:40 pm

ಮಂಡ್ಯ:  ಕಾಂಗ್ರೆಸ್ ಹಾಗೂ ಆ ಪಕ್ಷದ ಕೆಲವು ಪ್ರಭಾವಿ ನಾಯಕರನ್ನು ಮೊದಲಿನಿಂದಲೂ ನಂಬಿಕೊಂಡು ಬಂದಿರುವ ಶ್ರೀರಂಗಪಟ್ಟಣದ ಯುವ ಮುಖಂಡ ರವೀಂದ್ರ ಶ್ರೀಕಂಠಯ್ಯ ಇಂದು ರಾಜಕೀಯವಾಗಿ ಇಂದು ನಿಜಕ್ಕೂ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಅತ್ತು, ಕರೆದು ಔತಣಕ್ಕೆ ಕರೆಸಿಕೊಳ್ಳುವ ಜಾಯಮಾನಕ್ಕೆ ಅಂಟಿಕೊಂಡಿರದ ರವೀಂದ್ರ, ಕಾಂಗ್ರೆಸ್ಸಿನ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರನ್ನು ಬಲವಾಗಿ ನಂಬಿಕೊಂಡು ಬಂದಿದ್ದಾರೆ. ಹೀಗಾಗಿ, ರವೀಂದ್ರ ಶ್ರೀಕಂಠಯ್ಯ ಈ ಬಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ರಮ್ಯ ಅವರನ್ನು ಬೆಂಬಲಿಸುತ್ತಾರೆಯೇ ಎಂಬ ಪ್ರಶ್ನೆ ಜೊತೆಯಲ್ಲೇ ಸಾಹೇಬ್ರ (ಕೃಷ್ಣ) ಆದೇಶವನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 42 ಸಾವಿರ ಮತಗಳನ್ನು ಪಡೆದು ರವೀಂದ್ರ ಕಾಂಗ್ರೆಸ್ಗೆ ಎದುರಾಳಿಯಾಗಿ ನಿಂತು ಕ್ಷೇತ್ರದಲ್ಲಿ ಸ್ವಂತ ಸಾಮರ್ಥ್ಯ ಕಾಂಗ್ರೆಸ್ ನಾಯಕರಿಗೆ ಪರಿಚಯ ಮಾಡಿರುವ ಗಟ್ಟಿಗ. ಆದರೂ ಕೆಲವು ನಾಯಕರ ಹಠದಿಂದಾಗಿ ರವೀಂದ್ರ ಶ್ರೀಕಂಠಯ್ಯರನ್ನು ಕಾಂಗ್ರೆಸ್ನಿಂದ ಹೊರ ಹಾಕುವ ಪ್ರಯತ್ನ ಸಧ್ಯಕ್ಕೆ ಫಲ ನೀಡಿದೆಯಾದರೂ, ಕ್ಷೇತ್ರದ ಜನರು ಮಾತ್ರ ರವೀಂದ್ರರನ್ನು ಮನಸ್ಸಿನಿಂದ ಹೊರ ಹಾಕಿಲ್ಲ ಎಂಬುದು ಚುನಾವಣೆಯಿಂದ ಸಾಬೀತಾಗಿದೆ.
ರವೀಂದ್ರ ಮಾತ್ರ ಅಮಾನತು ಯಾಕೆ:  ಕಾಂಗ್ರೆಸ್ನಲ್ಲಿ ಬಹಳಷ್ಟು ಮಂದಿ ಹಿರಿಯ ನಾಯಕರೇ ಪಕ್ಷ ವಿರೋಧಿಯಾಗಿ ಕೆಲಸ ಮಾಡಿದರೂ ಅವರೆಲ್ಲರನ್ನೂ ಕೈ ಬಿಟ್ಟು, ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂಡಾಯ ಸ್ಪರ್ಧೆ ಮಾಡಿದ ಕಾರಣಕ್ಕಾಗಿ ಪಕ್ಷ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಕಾಂಗ್ರೆಸ್ನಿಂದ ಬಲವಂತವಾಗಿ 6 ವರ್ಷ ಕಾಲ ಅಮಾನತುಗೊಳಿಸಲಾಗಿದೆ. ಈ ನಿರ್ಧಾರದಿಂದ ಕಾಂಗ್ರೆಸ್ ್ಪಕ್ಷ ಹಿಂದಕ್ಕೆ ಸರಿದರೆ ತಾವು ಅಭ್ಯರ್ಥಿ ರಮ್ಯ ಅವರಿಗೆ ಸಂಪೂರ್ಣ ಬೆಂಬಲ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಏಕೆಂದರೆ, ಒಂದು ವೇಳೆ ಕಾಂಗ್ರೆಸ್ನಲ್ಲಿ ತನ್ನ ಅಸ್ತಿತ್ವಕ್ಕೆ ಬೆಲೆ ಇಲ್ಲ ಎಂದ ಮೇಲೆ ಅಥವಾ ತಾನು ನೆಚ್ಚಿಕೊಂಡಿರುವ ನಾಯಕರು ಮೌನಕ್ಕೆ ಶರಣಾಗಿ ಹೋದರೆ ಭವಿಷ್ಯದ ರಾಜಕೀಯ ಅಧ್ಯಾಯ ನಾನು ಹೇಗೆ ಆರಂಭಿಸಬೇಕು ಎನ್ನುವ ತಳಮಳ, ಗೊಂದಲದಲ್ಲಿ ರವೀಂದ್ರ ಸಿಲುಕಿದ್ದಾರೆ ಎಂದು ಎಂದು ಬೆಂಬಲಿಗರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಮ್ಯ ಗೆಲುವಿಗೆ ಅನುಕೂಲವಾಗಲಿ ಎಂದು 16 ಸಾವಿರ ಮತ ಪಡೆದ ಮದ್ದೂರಿನ ಕಲ್ಪನಾ ಸಿದ್ದರಾಜು, ಮಂಚೇಗೌಡರ ಕುಟುಂಬದವರನ್ನು ಹಾಗೂ 37 ಸಾವಿರ ಮತ ಪಡೆದ ಕೆ.ಆರ್.ಪೇಟೆ ಕೃಷ್ಣ ಅವರಿಗೆ ಕೆಲವು ಭರವಸೆಗಳನ್ನು ನೀಡಿ ಕಾಂಗ್ರೆಸ್ಗೆ ಕರೆದು ತರುವ ಜಿಲ್ಲಾ ನಾಯಕರು ಹಾಗೂ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ, ಈಗಲೂ ಕಾಂಗ್ರೆಸ್ನ ಕಾಯಂ ಮಾನಸ ಪುತ್ರ ಎಂದೇ ಗುರುತಿಸಿಕೊಂಡು 42 ಸಾವಿರ ಮತ ಪಡೆದಿರುವ ರವೀಂದ್ರ ಶ್ರೀಕಂಠಯ್ಯನವರ ಅಮಾನತು ರದ್ದುಗೊಳಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನೆರವು ಪಡೆದರೆ ತಪ್ಪೇನು ಎನ್ನುವ ಪ್ರಶ್ನೆ ಬೆಂಬಲಿಗರನ್ನು ಕಾಡುತ್ತದೆ.
ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಈಗಂತೂ ಬಲಿಷ್ಠವಾಗಿಲ್ಲ. ಜನರ ನಂಬಿಕೆ, ವಿಶ್ವಾಸ ಗಳಿಸಲು ಕೇವಲ ಹಣವೊಂದೇ ಮಾನದಂಡವಲ್ಲ. ಹಣ ಸುರಿದು, ಕೆಲವು ನಾಯಕರ ಶ್ರೀರಕ್ಷೆಯಲ್ಲಿ ರಾಜಕೀಯ ಚದುರಂಗದ ಆಟ ಆಡುವ ಆ ಕ್ಷೇತ್ರದ ಕೆಲವು ನಾಯಕರಿಗೆ ಎಂದಿಗೂ ಜನ ಮನ್ನಣೆ ಸಿಕ್ಕಿಲ್ಲ. ಮುಂದೆಯೂ ಸಿಗುವುದಿಲ್ಲ. ರವೀಂದ್ರ ಅವರನ್ನು ಹೊರಗಿಟ್ಟು ಕಾಂಗ್ರೆಸ್ ಈ ಬಾರಿ ಲೋಕಸಭೆ ಉಪ ಚುನಾವಣೆ ಎದುರಿಸಿದರೆ ಅಭ್ಯರ್ಥಿಗೆ ಆ ಕ್ಷೇತ್ರದಲ್ಲಿ ಯಾವ ಕಾರಣಕ್ಕೂ ಲೀಡ್ ಸಿಗಲು ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪರೋಕ್ಷವಾಗಿ ರವೀಂದ್ರ ಬೆಂಬಲಿಗರು ನೀಡಿದ್ದಾರೆಂದು ಹೇಳಲಾಗಿದೆ.
ಜೆಡಿಎಸ್ ಗಾಳ: ಈ ನಡುವೆ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ಗೆ ಬದ್ಧ ವೈರಿ ಪಕ್ಷ ಎಂದರೆ ಜೆಡಿಎಸ್. ರವೀಂದ್ರ ಹಾಗೂ ಬೆಂಬಲಿಗರಲ್ಲಿ ಕಾಂಗ್ರೆಸ್ ಬಗ್ಗೆ ಉಂಟಾಗಿರುವ ಅಸಮಾಧಾನದ ಲಾಭ ಪಡೆಯಲು ಜೆಡಿಎಸ್ ಹವಣಿಸುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ಗೆ ರವೀಂದ್ರರ ಬೆಂಬಲ ಪಕ್ಕಾ ಆದರೆ ಕಾಂಗ್ರೆಸ್ ಗೆಲುವಿಗೆ ತಿಣುಕಾಟ ಮಾಡಬೇಕಾದ ಅನಿವಾರ್ಯತೆ ಬೆಂಬಲಿಗರು ಲೆಕ್ಕಾಚಾರದ ಮೂಲಕ ಹೇಳುತ್ತಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ರವೀಂದ್ರ ಇಲ್ಲದೇ ಹೋದರೂ ಪರ್ವಾಗಿಲ್ಲ. ನಾನು ಈ ಬಾರಿ ಚುನಾವಣೆಯಲ್ಲಿ ರಮ್ಯಗೆ ಹೆಚ್ಚಿನ ಬಹುಮತ ಕೊಡಿಸುತ್ತೇನೆ ಎಂದು ಸಚಿವ ಅಂಬರೀಷ್ ತಮ್ಮ ನಾಯಕರಿಗೆ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ. ಈ ಸಂದೇಶ ನಿಜ ಎಂತಾದರೆ ರವೀಂದ್ರ ಕಾಂಗ್ರೆಸ್ ಯಾವತ್ತೂ ಅನಿವಾರ್ಯ ಅಗಿರುವುದಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿ ಪುಟ್ಟರಾಜುಗೆ ರವೀಂದ್ರ ನೆರವಾಗುತ್ತಾರೆಯೇ ಅಥವಾ ಕಾಂಗ್ರೆಸ್ ಪಕ್ಷದಿಂದ ಮಾಡಲಾಗಿರುವ ತಮ್ಮ ಅಮಾನತು ರದ್ದುಗೊಳಿಸಲು ಎಸ್.ಎಂ. ಕೃಷ್ಣ ತಮ್ಮ ಶಕ್ತಿ ತೋರಿಸಿ, ಯಾವ ರೀತಿ ಸಂದೇಶ ನೀಡುತ್ತಾರೆ ಎನ್ನುವುದನ್ನು ರವೀಂದ್ರ ಕಾದು ನೋಡುತ್ತಾರೆಯೇ ಎನ್ನುವುದು ಕುತೂಹಲದ ಅಂಶವಾಗಿದೆ.
ಉಪ ಚುನಾವಣೆ ಮತದಾನಕ್ಕೆ ಕೊನೆಯ ಎರಡು ದಿನಗಳು ಸಾಕು ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ನ ಲೀಡ್ ಹಣೆಬರಹ ಬದಲಾಯಿಸಲು ಎನ್ನುವ ರವೀಂದ್ರ ಬೆಂಬಲಿಗರ ಶಕ್ತಿ ಈ ಚುನಾವಣೆಯಲ್ಲಿ ಹೇಗೆ ಬಳಕೆಯಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ.

 ಕೆ.ಎನ್. ರವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement