ವರದಿಗೆ ಗರ, ರಸ್ತೆಗಳಿಗೆ ಜ್ವರ
ಕ.ಪ್ರ.ವಾರ್ತೆ ಬೆಂಗಳೂರು ಆ.15
ನಗರದಲ್ಲಿನ ರಸ್ತೆಗಳಿಗೂ, ವಿವಿಧ ಕಾರಣಕ್ಕೆ ರಚನೆಯಾಗುವ ಆಯೋಗದ ವರದಿಗಳಿಗೂ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ! ಕಾರಣ ನಗರದ ರಸ್ತೆಗಳ ಅವಸ್ಥೆ ಎಂದಿಗೂ ಬದಲಾಗದು. ವಿವಿಧ ವರದಿಗಳು ಸಾವಿರ ಕಸರತ್ತುಗಳನ್ನು ಮಾಡಿದರೂ ಜಾರಿಯಾಗದು!
ಈ ಎರಡೂ ವಿಚಾರಗಳಲ್ಲಿ ಒಂದಷ್ಟು ಹಣ, ಸಮಯ ವ್ಯರ್ಥ ಆಗುವುದು ಬಿಟ್ಟರೆ ಬದಲಾವಣೆಗಳಾಗುತ್ತವೆ ಎಂಬ ಮಾತು ಮಾತ್ರ ಸುಳ್ಳು.
ರಸ್ತೆಗಳ ದುಸ್ಥಿತಿ ಅಧ್ಯಯನ ಮಾಡಿ, ಅದರ ಅಭಿವೃದ್ಧಿಗೆ ವರದಿ ತಯಾರಿಸಲು ಹೈಕೋರ್ಟ್ 2005ರಲ್ಲಿ ಕ್ಯಾಪ್ಟನ್ ರಾಜಾರಾವ್ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. 10 ತಿಂಗಳ ಕಾಲ ನಗರದ ರಸ್ತೆಗಳ ಕುರಿತು ಅಧ್ಯಯನ ನಡೆಸಿ ವರದಿ ತಯಾರಿಸಿ 2006ರಲ್ಲಿ ಅದನ್ನು ಕೋರ್ಟ್‌ಗೆ ಮಂಡಿಸಿದ್ದರು. ಆದರೆ ವರದಿ ತಯಾರಾಗಿ 7 ವರ್ಷ ಕಳೆದರೂ ವರದಿ ಜಾರಿ ವಿಚಾರವಾಗಿ ಬಿಬಿಎಂಪಿ ಏನೂ ಮಾಡಿಲ್ಲ!
ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ ವರದಿಯಲ್ಲಿ ಒಟ್ಟು 112 ಶಿಫಾರಸುಗಳನ್ನು ನೀಡಲಾಗಿತ್ತು. ಇದರಲ್ಲಿರುವ 107 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬಹುದು ಎಂದು ಬಿಬಿಎಂಪಿ ಹೇಳಿತ್ತು. ವರದಿಯಲ್ಲಿನ ಬಹುಪಾಲು ಅಂಶಗಳು ಇಂದಿನ ರಸ್ತೆಗಳ ದುಸ್ಥಿತಿಗೆ ಸೂಕ್ತ ಪರಿಹಾರ ಮಾರ್ಗವಾಗಿ ಕಾಣುತ್ತವೆ. 2 ವಾರಗಳ ಹಿಂದೆ ಹೈಕೋರ್ಟ್ ಕೂಡ ವರದಿ ವಿಚಾರ ಪ್ರಸ್ತಾಪಿಸಿತ್ತು. ಕೋರ್ಟ್‌ನ ಸೂಚನೆ ಇದ್ದರೂ ಬಿಬಿಎಂಪಿ ಏನೂ ಮಾಡದೆ 7 ವರ್ಷಗಳನ್ನು ಕಳೆದಿದೆ.
ತಾಂತ್ರಿಕ ಸಮಿತಿ ರಚನೆ: ವರದಿಯ 2 ಮತ್ತು 3ನೇ ಭಾಗದ ಶಿಫಾರಸಿನಲ್ಲಿ ರಸ್ತೆಗಳ ದುರಸ್ತಿ ವಿಚಾರದಲ್ಲಿ ಅಧ್ಯಯನ, ಸಲಹೆಗಳನ್ನು ನೀಡಲು ಬಿಬಿಎಂಪಿಯಲ್ಲಿ ಯಾವುದೇ ರೀತಿಯ ಪರಿಣತರು ಇಲ್ಲ ಎಂಬ ವಿಚಾರವನ್ನು ವರದಿಯಲ್ಲಿ ಸೂಚಿಸಲಾಗಿತ್ತು. ಇದನ್ನು ಮನಗಂಡ ಬಿಬಿಎಂಪಿ ರಸ್ತೆಗಳ ಅವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಪರಿಣತರ ತಂಡವೊಂದು ಬೇಕೆಂದು ಹೈಕೋರ್ಟ್ ಮುಂದೆ ಹೇಳಿತ್ತು. ಹೈಕೋರ್ಟ್, ಕ್ಯಾಪ್ಟನ್ ರಾಜಾರಾವ್ ಜತೆಗೆ ಇನ್ನಿಬ್ಬರನ್ನು ಒಳಗೊಂಡ ತಾಂತ್ರಿಕ ತಂಡ ರಚನೆಗೆ ಬಿಬಿಎಂಪಿಗೆ ಸೂಚಿಸಿತ್ತು. ಅಂತೆಯೇ ತಂಡ ರಚನೆಯಾಗಿತ್ತು.
ಕ್ಯಾಪ್ಟನ್ ರಾಜಾರಾವ್ ಮತ್ತು ತಂಡ ಇದರೊಳಗೆ ಕಾರ್ಯನಿರ್ವಹಿಸುತ್ತಿದ್ದರು. ಸಿದ್ದಯ್ಯ ಅವರು ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜಾರಾವ್ ಅವರನ್ನು ಆ ಸಮಿತಿಯಿಂದ ಹೊರಗೆ ಕಳುಹಿಸಿದ್ದರು. ಸಮಿತಿಯನ್ನು ಹೈಕೋರ್ಟ್ ಸೂಚನೆ ಮೇಲೆ ನೇಮಿಸಿದ ಕಾರಣ ಸಮಿತಿಯಿಂದ ತೆಗೆಯುವಾಗ ಕೋರ್ಟ್ ಗಮನಕ್ಕೆ ತರಬೇಕಿತ್ತು. ಆದರೆ ಇದನ್ನು ಹೈಕೋರ್ಟ್ ಗಮನಕ್ಕೆ ತರಲಾಗಿತ್ತೋ, ಇಲ್ಲವೋ ಎಂಬ ವಿಚಾರ ಯಾರಿಗೂ ತಿಳಿದಿಲ್ಲ.
ವರದಿಯ ಪ್ರಮುಖ ಅಂಶಗಳು
ಟಿ ನಗರದಲ್ಲಿ ಮಳೆ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಮಳೆ ಸುರಿದರೆ ಆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ರಸ್ತೆಗಳು ಶೀಘ್ರ ಹಾಳಾಗುತ್ತವೆ.
ಟಿ ನಗರದ ಉದ್ದಗಲಕ್ಕೂ ಇರುವ ಅವ್ಯವಸ್ಥಿತ ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಯಾವ ರೀತಿಯಲ್ಲಿ ಚರಂಡಿಗಳ ನಿರ್ಮಾಣ ಮಾಡಬೇಕು ಎಂಬ ವಿಚಾರವನ್ನೂ ವರದಿಯಲ್ಲಿ ವಿವರವಾಗಿ ನೀಡಲಾಗಿತ್ತು.
ಟಿ ನಗರದಲ್ಲಿ ಅಂದು ಸುಮಾರು 68 ವಾರ್ಡ್‌ಗಳಿದ್ದವು. ಎಲ್ಲ ವಾರ್ಡ್‌ಗಳಿಂದಲೂ ಮಾಹಿತಿಗಳನ್ನು ಸಂಗ್ರಹಿಸಿ ಎಲ್ಲ ಕಡೆಯಲ್ಲಿನ ಚರಂಡಿ ವ್ಯವಸ್ಥೆ ಸರಿಪಡಿಸಲು ಅಂದಿನ ಲೆಕ್ಕಾಚಾರಗಳ ಮೂಲಕ 435 ಕೋಟಿ ಬೇಕೆಂದು ಅಂದಾಜಿಸಲಾಗಿತ್ತು.
ಆದರೆ ಈಗ ವಾರ್ಡ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 100 ಕ್ಕಿಂತ ಹೆಚ್ಚು ಗ್ರಾಮಗಳು ನಗರಕ್ಕೆ ಸೇರ್ಪಡೆಯಾಗಿವೆ. ಹೊಸದಾಗಿ ರಚನೆಯಾದ ವಾರ್ಡ್‌ಗಳಲ್ಲೂ ಚರಂಡಿ ದುಸ್ಥಿತಿ ಬದಲಾಗದೆ ಅಂತೆಯೇ ಇದೆ.
ಟಿ ಮಳೆ ನೀರು ಸಂಗ್ರಹದ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಟಿ ರಸ್ತೆಗಳ ಎತ್ತರ ಹೆಚ್ಚಾಗುತ್ತಿದೆ. ಹಳೆಯ ರಸ್ತೆಯ ಮೇಲೆಯೇ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹೀಗೆ ಮಾಡುವ ಬದಲು ಹಳೆಯ ಡಾಂಬರ್‌ಗಳನ್ನೆಲ್ಲಾ ಸಂಪೂರ್ಣ ತೆಗೆದು ಹಳೆಯ ಡಾಂಬರ್ ಬಳಸಿಕೊಂಡು ಹೊಸತಾಗಿಯೇ ರಸ್ತೆ ನಿರ್ಮಾಣ ಮಾಡಬಹುದು.
ಟಿ ಪ್ರತೀ ವಾರ್ಡ್‌ಗಳಲ್ಲೂ ಪರಿಸರ ಕೊಠಡಿಗಳ ನಿರ್ಮಾಣ ಮಾಡಬೇಕು.
ಟಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುವ ಮೊದಲು ಅಪಾರ್ಟ್‌ಮೆಂಟ್ ಮಾಲೀಕರು, ಆರ್ಕಿಟೆಕ್ಟರ್, ಕಂಟ್ರಾಕ್ಟರ್‌ಗಳಲ್ಲಿ ಬಿಬಿಎಂಪಿ ನಿಯಮಗಳ ಪ್ರಕಾರವೇ ನಿರ್ಮಾಣ ಮಾಡುವುದೆಂದು ಬರೆಯಿಸಿಕೊಳ್ಳಬೇಕು.
ನನ್ನನ್ನು ಸಮಿತಿಯಿಂದ ತೆಗೆಯುವ ಮೊದಲು ಕೋರ್ಟ್ ಗಮನಕ್ಕೆ ತರಬೇಕಿತ್ತು. ಹೈಕೋರ್ಟ್ ಗಮನಕ್ಕೆ ತಾರದೆ ನಮ್ಮನ್ನು ಸಮಿತಿಯಿಂದ ವಜಾ ಮಾಡಿರುವುದು ತಪ್ಪು. ವರದಿ ಮಂಡನೆಯಾದ ಮೇಲೆ ಅದರತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ವರದಿ ತಯಾರಿಯ ಮುನ್ನವೇ ಯೋಚಿಸಬೇಕು.
ಟಿ ಕ್ಯಾಪ್ಟನ್ ರಾಜಾರಾವ್
ಅನುರಾಧಾ ತೆಳ್ಳಾರ್