ಮಲೆನಾಡಿಗೆ ಮಾರಕ ಗ್ಯಾಸ್ ಪೈಪ್ಲೈನ್ ಯೋಜನೆ
ಮಲೆನಾಡು ಪರಿಸರ ಹಾಗೂ ಇಲ್ಲಿನ ಜನರ ಸ್ವಾತಂತ್ರ್ಯ ಹರಣಕ್ಕೆ ಮತ್ತೊಂದು ಯೋಜನೆ ಸಿದ್ಧವಾಗಿದ್ದು, ಇದರಿಂದ ಸದ್ಯಕ್ಕೆ ಜಿಲ್ಲೆಗೆ ಯಾವ ಪ್ರಯೋಜನವೂ ಇಲ್ಲ...
ಕ.ಪ್ರ.ವಾರ್ತೆ ಶಿವಮೊಗ್ಗ ಆ. 16
ಮಲೆನಾಡು ಪರಿಸರ ಹಾಗೂ ಇಲ್ಲಿನ ಜನರ ಸ್ವಾತಂತ್ರ್ಯ ಹರಣಕ್ಕೆ ಮತ್ತೊಂದು ಯೋಜನೆ ಸಿದ್ಧವಾಗಿದ್ದು, ಇದರಿಂದ ಸದ್ಯಕ್ಕೆ ಜಿಲ್ಲೆಗೆ ಯಾವ ಪ್ರಯೋಜನವೂ ಇಲ್ಲ. ಅಲ್ಲದೇ ಬೆಲೆ ಕಟ್ಟಲಾಗದ ಅಪರೂಪದ ಸಂಪತ್ತು ನಶಿಸಿ ಹೋಗಲಿದೆ.
ಭೂ ಅಡಿಯಲ್ಲಿ ಪೈಪ್ಲೈನ್ ಮೂಲಕ ನೈಸರ್ಗಿಕ ಅನಿಲ ಸಾಗಿಸುವ ಯೋಜನೆ ಜಿಲ್ಲೆಯನ್ನು ಹಾದು ಹೋಗಲಿದ್ದು, ಸಾವಿರಾರು ಎಕರೆ ಕೃಷಿ ಭೂಮಿ, ತೋಟಗಳಿಗೆ ಹಾನಿ ಸಂಭವಿಸಲಿದೆ. ಅದಕ್ಕಿಂತ ಮುಖ್ಯವಾಗಿ ವಿಶ್ವದಲ್ಲಿಯೇ ಅಪರೂಪವೆನಿಸಿದ ಪಶ್ಚಿಮಘಟ್ಟದ ಮಧ್ಯೆಯೇ ಈ ಕೊಳವೆ ಯೋಜನೆ ಹಾದುಹೋಗಲಿದ್ದು, ಇದರಿಂದ ಅರಣ್ಯ ಸಂಪತ್ತು- ಜೀವ ಸಂಕುಲಕ್ಕೆ ಕುತ್ತು ಖಚಿತ.
ನಷ್ಟ ಹೇಗೆ?: ತುಮಕೂರು, ರಾಮನಗರ ವ್ಯಾಪ್ತಿಯಲ್ಲಿ ಕೊಳವೆ ಅಳವಡಿಕೆ ಕಾರ್ಯ ಗಮನಿಸಿದರೆ ಹಾನಿ ತೀವ್ರತೆ ಅರ್ಥವಾಗಬಹುದು. ಭಾರೀ ಗಾತ್ರದ ಯಂತ್ರಗಳು ಕೃಷಿ ಭೂಮಿ, ತೋಟದೊಳಗೆ ಬಂದು, ಹೇಗೆ ಬೇಕೋ ಹಾಗೆ ತನ್ನ ಕಾರ್ಯವನ್ನು ಮುಗಿಸುತ್ತದೆ. ಮಣ್ಣನ್ನು ಬೇಕಾಬಿಟ್ಟಿ ಎತ್ತಿ ಹಾಕುವುದರಿಂದ ಇರುವ ಬೆಳೆಯೂ ಹಾನಿಯಾಗುವ ಸಾಧ್ಯತೆ ಇದೆ. ಕಟ್ಟಡಗಳಿಗೂ ತೊಂದರೆಯಾಗಬಹುದು.
ಕಳೆದುಕೊಳ್ಳೋದು ಇನ್ನೆಷ್ಟು?: ಮೂರು ಪ್ರಮುಖ ಜಲ ವಿದ್ಯುತ್ ಯೋಜನೆಗಳು, ನೀರಾವರಿಗಾಗಿ 6ಕ್ಕೂ ಹೆಚ್ಚು ಜಲಾಶಯ ಯೋಜನೆಗಳು, ಜತೆಗೆ ಇಲ್ಲಿಂದ ಬೇರೆ ಬೇರೆ ಜಿಲ್ಲೆಗಳಿಗೆ ನೀರು ಕೊಡಲು ಭಾರೀ ಗಾತ್ರದ ಕಾಲುವೆಗಳು, ಇವಕ್ಕೆಲ್ಲಾ ಜಿಲ್ಲೆಯ ಅಪಾರ ಪ್ರಮಾಣದ ಭೂಮಿ ಹಾಗೂ ಅರಣ್ಯ ಸಂಪತ್ತು ನಷ್ಟವಾಗಿದೆ. ಅಷ್ಟೇ ಅಲ್ಲದೇ, ವಿದ್ಯುತ್ ಯೋಜನೆಯಲ್ಲಿ ಉತ್ಪಾದಿತ ವಿದ್ಯುತ್ತನ್ನು ಬೇರೆಡೆ ಸಾಗಿಸಲು ಬಳಸಿದ ಬೃಹತ್ ವಿದ್ಯುತ್ ಲೇನ್ಗಳಿಂದಲೂ ಅಪಾರ ಅರಣ್ಯ ಸಂಪತ್ತು ಕಳೆದುಕೊಂಡಿದ್ದಾಗಿದೆ. ಇದೀಗ ಅನಿಲ ಪೈಪ್ಲೈನ್ ಅಳವಡಿಕೆ ಮೂಲಕ ಇಲ್ಲಿನ ಜನರ ಜೀವನ ಮತ್ತಷ್ಟು ಸಣಕಲಾಗುವುದರಲ್ಲಿ ಎರಡು ಮಾತಿಲ್ಲ.
ಯೋಜನೆ ಎಂದಿನಿಂದ ಕಾರ್ಯಾರಂಭವಾಗುತ್ತದೆ, ನಿಖರ ಮಾರ್ಗ ಯಾವುದೆಂಬುದನ್ನು ಗೇಲ್ ಇನ್ನು ಸ್ಪಷ್ಟಪಡಿಸಿಲ್ಲ.
ಪಶ್ಚಿಮಘಟ್ಟದಲ್ಲಿ ಪೈಪ್ಲೈನ್ ಹಾದು ಹೋದರೆ ಸಹಜವಾಗಿ ಅಲ್ಲಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತದೆ. ಅಭಿವೃದ್ಧಿ ಹೆಸರಲ್ಲಿ ಪಶ್ಚಿಮಘಟ್ಟವನ್ನು ಸಡಿಲಗೊಳಿಸಿದರೆ, ಮತ್ತೊಂದು ಉತ್ತರಾಖಂಡ್ ದುರಂತ ಸಂಭವಿಸುತ್ತದೆ. ಅದಕ್ಕೂ ಮುನ್ನ ಎಚ್ಚರಿಕೆ ಅಗತ್ಯ.
ಟಿ ಪ್ರೊ. ಬಿ.ಎಂ. ಕುಮಾರಸ್ವಾಮಿ, ಪರಿಸರ ತಜ್ಞ
ಏನಿದು ಯೋಜನೆ?
ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟು ಗೇಲ್ (ಇಂಡಿಯಾ) ಲಿಮಿಟೆಡ್ ಸಂಸ್ಥೆ ಮಹಾರಾಷ್ಟ್ರದ ದಾಬೋಲ್ನಿಂದ ಬೆಂಗಳೂರಿಗೆ ನೈಸರ್ಗಿಕ ಅನಿಲ ಸಾಗಿಸಲು ನೆಲದಡಿಯಲ್ಲಿ ಪೈಪ್ಲೈನನ್ನು ಅಳವಡಿಸುವ ಕಾರ್ಯನಡೆಸಿದೆ. ಈ ಯೋಜನೆಯ ಉಪ ಯೋಜನೆಯಾಗಿ ಚಿತ್ರದುರ್ಗದಿಂದ ಶಿವಮೊಗ್ಗ ಮಾರ್ಗವಾಗಿ ಉಡುಪಿಗೆ ಪೈಪ್ಲೈನ್ ಮೂಲಕ ಅನಿಲ ಸಾಗಿಸಲಾಗುತ್ತದೆ. ನೈಸರ್ಗಿಕ ಅನಿಲ ಶೇ.100ರಷ್ಟು ಉರಿಯುವ ಅನಿಲವಾಗಿದ್ದು ಯಾವುದೇ ಹೊಗೆ, ಬೂದಿ ಇತ್ಯಾದಿಗಳನ್ನು ಉಳಿಸುವುದಿಲ್ಲ. ಗಾಳಿಗಿಂತ ಹಗುರವಾಗಿ ಈ ಅನಿಲ ವಿಷ ರಹಿತವಾಗಿರುವುದರಿಂದ ಅನಿಲ ನಿಸರ್ಗಕ್ಕೆ ಮಿತ್ರನಾಗಿದೆ ಎಂಬುದು ಕಂಪನಿಯ ಅಭಿಪ್ರಾಯ.
ಎಲ್ಲಿಂದ ಎಲ್ಲಿಗೆ ಪೈಪ್ಲೈನ್?
ದಾಭೋಲ್ನಿಂದ ಬೆಂಗಳೂರಿಗೆ ಸುಮಾರು 747 ಕಿ.ಮೀ. ಉದ್ದ ಪೈಪ್ ಅಳವಡಿಸಲಾಗುತ್ತಿದ್ದು, ಕರ್ನಾಟಕದಲ್ಲಿ 546 ಕಿ.ಮೀ. ಇದ್ದ ಪೈಪ್ಲೈನ್ ಅಳವಡಿಸಲಾಗುತ್ತಿದೆ. ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ರಾಮನಗರದಲ್ಲಿ ಪೈಪ್ಲೈನ್ ಅಳವಡಿಸಲಾಗುತ್ತಿದೆ. ಇದು ಮೊದಲ ಹಂತದ ಯೋಜನೆಯಾದರೆ, ಉಪ ಯೋಜನೆ ಎಂಬಂತೆ ಈ ಪೈಪ್ಲೈನ್ ಅನ್ನು ಚಿತ್ರದುರ್ಗದಿಂದ ಶಿವಮೊಗ್ಗ ಮಾರ್ಗವಾಗಿ ಉಡುಪಿಗೆ ಸಾಗಿಸಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದು, 350 ಕಿ.ಮೀ. ಅನಿಲ ಪೈಪ್ಲೈನ್ ಅಳವಡಿಸುವ ಕಾರ್ಯಕ್ಕೆ 1400 ಕೋಟಿ ವ್ಯಯಿಸಲಿದೆ.
ಅಳವಡಿಕೆ ಹೇಗೆ?
ಐದಡಿ ಆಳದಲ್ಲಿ 30 ಅಂಗುಲ ವ್ಯಾಸದ ಪೈಪ್ ಅನ್ನು ಭೂಮಿಯಲ್ಲಿ ಅಳವಡಿಸಲಾಗುತ್ತದೆ. ವ್ಯವಸಾಯ ಜಮೀನಿನಲ್ಲಿ 100 ಅಡಿ ಅಗಲದ ಜಮೀನನ್ನು ಉಪಯೋಗಿಸಲಾಗುತ್ತದೆ. ಪೈಪ್ಲೈನ್ ಅಳವಡಿಸುವ ವೇಳೆಗೆ ಉಪಯೋಗಿಸುವ ಜಮೀನಿಗೆ ಪರಿಹಾರ ಧನವನ್ನು ಮಾರುಕಟ್ಟೆ ಬೆಲೆಯ ಅನ್ವಯ ಒಂದು ಮೊತ್ತ ನಿಗದಿಗೊಳಿಸಿ ನೀಡಲಾಗುತ್ತದೆ. ರೈತರ ಭೂಮಿಯಲ್ಲಿ ಪೈಪ್ ಹಾಕುವುದರಿಂದ ಆಗುವ ಬೆಳೆ ಹಾನಿಗೆ ತಕ್ಕ ಪರಿಹಾರವನ್ನು ನೀಡಲಾಗುತ್ತದೆ. ಪೈಪ್ ಅನ್ನು ಭೂಮಿಯಡಿಯಲ್ಲಿ ಹಾಕಿದ ನಂತರ ಮಟ್ಟ ಮಾಡಿ ಭೂಮಿಯನ್ನು ರೈತರಿಗೆ ವಾಪಸ್ ಮಾಡಲಾಗುತ್ತದೆ. ಪೈಪ್ ಹಾದು ಹೋಗುವ ಜಾಗದಲ್ಲಿ ಯಾವುದೇ ರಸ್ತೆ ವಗೈರೆ ಮಾಡುವ ಹಾಗಿಲ್ಲ, ಸ್ಪೆಷಲ್ ಗ್ರೇಡ್ ಸ್ಟೀಲ್ ಪೈಪುಗಳನ್ನು ಪಾಲಿಥೀನ್ ಕೋಟಿಂಗ್ ಮಾಡಿ ಪೂರ್ತಿ ನೆಲದಡಿಯಲ್ಲಿ ಹಾಕಲಿದ್ದು, ಪ್ರತಿ 25ರಿಂದ 30 ಕಿ.ಮೀ. ಅಂತರದಲ್ಲಿ ಸೇಫ್ಟಿ ವಾಲ್ವ್ ಅಳವಡಿಸಲಾಗುತ್ತದೆ. ಭಾರತ ಸರ್ಕಾರ ಪೆಟ್ರೋಲಿಯಂ ಆ್ಯಂಡ್ ಮಿನರಲ್ಸ್ ಪೈಪ್ಲೈನ್ಸ್ (ಅಕ್ವಿಜಿಷನ್ ಆಫ್ ರೈಟ್ ಆಫ್ ಯೂಸರ್ ಇನ್ ಲ್ಯಾಂಡ್ ಆಕ್ಟ್) ಅಡಿಯಲ್ಲಿ ಭೂಮಿಯ ಉಪಯೋಗದ ಹಕ್ಕನ್ನು ಸ್ವಾಧೀನ ಪಡೆಯಲು ಸರ್ಕಾರ ಸಿದ್ಧವಾಗಿದ್ದು, ಇದನ್ನು ವಿರೋಧಿಸಲು ಯಾರಿಗೂ ಅಧಿಕಾರವಿರುವುದಿಲ್ಲ.
ಶ್ರೀಕಾಂತ ಭಟ್