ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಕಲಚೇತನ ಬಾಲಕಿಯರಿಗೆ ಧನ ಬಲ

Rashmi Kasaragodu
Updated On : 17 Aug 2013, 1:34 am

ಕ.ಪ್ರ.ವಾರ್ತೆ   ಬೆಂಗಳೂರು   ಆ.16
ಶಾಲೆಗೆ ಹೋಗುವ ಬಾಲೆಯರಿಗೆ ಸರ್ಕಾರ ನಿತ್ಯ 2 ನೀಡಲು ನಿರ್ಧರಿಸುವ ಬೆನ್ನಲ್ಲೇ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವಿಕಲಚೇತನ ಹೆಣ್ಣು ಮಕ್ಕಳಿಗೆ ಮಾಸಿಕ200 ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಯೋಜನೆ ಪರಿಚಯಿಸುತ್ತಿದ್ದು, ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಪ್ರೋತ್ಸಾಹ ಧನ ವಿತರಣೆ ಉದ್ದೇಶವಾಗಿದೆ.
ಈ ಬಗ್ಗೆ ಭಾರತೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಯೋಜನಾ ಅನುಷ್ಠಾನ ಮಂಡಳಿಯಿಂದ ಅನುಮೋದನೆ ಸಹ ಪಡೆದಿದ್ದು 2013-14ನೇ ಸಾಲಿನಿಂದ ಈ ಯೋಜನೆ ಫಲವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬಹುದು.
ರಾಜ್ಯದಲ್ಲಿ ಸರ್ಕಾರದ 4443 ಮತ್ತು ಖಾಸಗಿ ಅನುದಾನಿತ 3559 ಪ್ರೌಢಶಾಲೆಗಳಿವೆ. ಈ ಪೈಕಿ ಮಾಧ್ಯಮಿಕ ಹಂತದಲ್ಲಿ, ಅಂಗವೈಕಲ್ಯ ಮಕ್ಕಳಿಗೆ ನೀಡುವ ಅಂತರ್ಗತ ಶಿಕ್ಷಣ(ಐಇಡಿಎಸ್‌ಎಸ್) ಯೋಜನೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 4,452 ವಿಕಲಚೇತನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದು ಶಿಕ್ಷಣ ಜಿಲ್ಲಾ ಮಾಹಿತಿ ವ್ಯವಸ್ಥೆ(ಡೈಸ್) ನೀಡಿರುವ ವಿವರ. ಇದನ್ನು ಹೊರತುಪಡಿಸಿ ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ಪ್ರೋತ್ಸಾಹ ಧನ ನೀಡಲಾಗುವುದು.
ಶಾಲೆಗೆ ಕರೆತರುವ ಉದ್ದೇಶ: ಪೋಷಕರು ವಿಕಲಚೇತನ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಇದರಿಂದ ಮಕ್ಕಳಿಗೆ ಸೂಕ್ತ ಶಿಕ್ಷಣ ಮತ್ತು ಸಾಮಾನ್ಯ ಜ್ಞಾನ ದೊರೆಯುವುದು ಕಷ್ಟವಾಗುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳು ಎಂದರೆ, ಕೆಲವು ಪೋಷಕರಿಗೆ ಅಸಡ್ಡೆ ಮನೋಭಾವ ಇರುತ್ತದೆ. ಇದನ್ನು ದೂರಾಗಿಸಲು ಮತ್ತು ಶಾಲೆಗೆ ಬರುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಈ ಯೋಜನೆ ಪ್ರಾರಂಭಿಸಲಾಗಿದೆ. ಮನೆಯಲ್ಲಿ ಮಗುವನ್ನು ಇಟ್ಟುಕೊಳ್ಳುವ ಬದಲಾಗಿ ಶಾಲೆಗೆ ಕಳುಹಿಸಿದರೆ ಮಾಸಿಕ 200 ಬರಲಿದೆ ಎಂಬ ದೃಷ್ಟಿಯಿಂದಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂಬುದು ಶಿಕ್ಷಣ ಇಲಾಖೆ ಕಲ್ಪನೆಯಾಗಿದೆ.
ಪ್ರತಿ ವರ್ಷ 6,300: ವಿಕಲಚೇತನ ಹೆಣ್ಣುಮಕ್ಕಳು ಶಾಲೆಗೆ ಹೋಗುವುದರಿಂದ ಒಂದು ವರ್ಷಕ್ಕೆ 6,300 ಪಡೆದುಕೊಳ್ಳಬಹುದಾಗಿದೆ. ಓದುವ ಭತ್ಯೆ- 500, ಅಂಗರಕ್ಷಕ ಭತ್ಯೆ- 750, ಸಾರಿಗೆ ಭತ್ಯೆ- 500, ಸಹಾಯ ಮತ್ತು ಯಂತ್ರ ಅನುಮತಿ ಭತ್ಯೆ- 2,000, ಶಿಬಿರ ಭತ್ಯೆ- 150 ಮತ್ತು ಸ್ಟೇಷನರಿ ಭತ್ಯೆ- 400 ಹಾಗೂ 10 ತಿಂಗಳು ವಿದ್ಯಾರ್ಥಿನಿ ಶೇ.100 ಹಾಜರಾತಿ ಪಡೆದಲ್ಲಿ 2,000 ಸೇರಿದಂತೆ ಪ್ರತಿ ವರ್ಷಕ್ಕೆ 6,300 ಧನ ಪಡೆದುಕೊಳ್ಳಬಹುದಾಗಿದೆ.
ಏನಿದು ಐಇಡಿಎಸ್‌ಎಸ್: ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮೊದಲು ಅಂಗವಿಕಲ ಮಕ್ಕಳಿಗೆ ಸಮಗ್ರ ಶಿಕ್ಷಣ(ಐಇಡಿಎಸ್) ಎಂದು ನಾಮಕಾರಣ ಮಾಡಿತ್ತು. ಆನಂತರ 2009-10ನೇ ಸಾಲಿನಲ್ಲಿ ಮಾಧ್ಯಮಿಕ ಹಂತದಲ್ಲಿ ಅಂಗವೈಕಲ್ಯ ಮಕ್ಕಳಿಗೆ ಅಂತರ್ಗತ ಶಿಕ್ಷಣ(ಐಇಡಿಎಸ್‌ಎಸ್) ಎಂದು ಮರು ನಾಮಕರಣಮಾಡಲಾಯಿತು. ಇದರಲ್ಲಿ ಅಂಧರು ಸೇರಿದಂತೆ ಸಾಕಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ಪ್ರಾಥಮಿಕ ಶಾಲೆಯಲ್ಲಿ ಎಂಟು ವರ್ಷ ಪೂರೈಸಿದ ವಿದ್ಯಾರ್ಥಿಗಳಿಗೆ ವಿಶೇಷ ಶಾಲೆಗಳಲ್ಲಿ ಬೋಧನೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅವರ ಬುದ್ಧಿಮಟ್ಟವನ್ನು ಹೆಚ್ಚಿಸಲು ಮತ್ತು ಸಮಾಜದ ಮುಖ್ಯವಾಹಿನಿಗೆ ತರುವುದು ಇದರ ಪ್ರಮುಖ ಉದ್ದೇಶ.


ಇದೊಂದು ವಿಶೇಷವಾದ ಯೋಜನೆ. ಇದರಿಂದ ವಿಕಲಚೇತನ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗಲಿದೆ.
ಟಿ ಸುಬೋಧ್ ಯಾದವ್, ರಾಜ್ಯ ಯೋಜನಾ ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ

-ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement