ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಸು ವಿಮೆ ನವೀಕರಣ ಅವಧಿ 3 ವರ್ಷಕ್ಕೆ ವಿಸ್ತರಣೆ

ಪ್ರತಿ ವರ್ಷಕ್ಕೊಮ್ಮೆ ನವೀಕರಿಸಬೇಕಾಗಿದ್ದ ಜಾನುವಾರು ವಿಮೆ ಅವಧಿಯನ್ನು ಈಗ ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ. ರೈತರಿಗೆ ಲಾಭವಾಗುವ ...

Rashmi Kasaragodu
Updated On : 17 Aug 2013, 12:01 pm

ಕ.ಪ್ರ.ವಾರ್ತೆ    ಮಂಗಳೂರು    ಆ. 16
ಪ್ರತಿ ವರ್ಷಕ್ಕೊಮ್ಮೆ ನವೀಕರಿಸಬೇಕಾಗಿದ್ದ ಜಾನುವಾರು ವಿಮೆ ಅವಧಿಯನ್ನು ಈಗ ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ. ರೈತರಿಗೆ ಲಾಭವಾಗುವ ಉದ್ದೇಶದಿಂದ ಸರ್ಕಾರ ಇದನ್ನು ಮಾರ್ಪಾಡುಗೊಳಿಸಿದೆ.
ಈ ವಿಮಾ ಯೋಜನೆ ಹೆಚ್ಚು ಹಾಲು ಕೊಡುವ ಮಿಶ್ರ ತಳಿ ಸೇರಿದಂತೆ ಸ್ಥಳೀಯ ಹಸು ಮತ್ತು ಎಮ್ಮೆಗಳಿಗೂ ಅನ್ವಯವಾಗಲಿದೆ. ಆದರೆ ಈ ಯೋಜನೆ ರಾಜ್ಯದ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿದ್ದು, ಉಳಿದ ಜಿಲ್ಲೆಗಳು ಜಾನುವಾರು ವಿಮೆ ಯೋಜನೆಯಿಂದ ಹೊರಗುಳಿದಿವೆ. ಇದರಿಂದ ಆ ಜಿಲ್ಲೆಗಳು ಜಾನುವಾರು ಸಾಕಣೆ ಇದ್ದರೂ ವಿಮೆ ಸೌಲಭ್ಯದಿಂದ ವಂಚಿತವಾಗಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ, ಗುಲ್ಬರ್ಗ, ಯಾದಗಿರಿ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಜಾನುವಾರು ವಿಮೆ ಸೌಲಭ್ಯ ಒದಗಿಸಲಾಗಿದೆ.
ಕೃಷಿ ವಿಶ್ವವಿದ್ಯಾಲಯದ ವೀರೇಶ್ ಕಮಿಟಿ ವರದಿಯಾಧಾರದಲ್ಲಿ ಹಿಂದೆ ಜಾನುವಾರು ಸಂತತಿ ರಕ್ಷಿಸಲು ಹಾಗೂ ಪಾಲನೆಗೆ ವಿಮೆ ಯೋಜನೆ ಜಾರಿಗೊಳಿಸಲಾಗಿತ್ತು. ಬಳಿಕ ಹೊಸ ಜಿಲ್ಲೆಗಳು ರಚನೆಯಾದಾಗ, ಅವುಗಳನ್ನು ಸೇರ್ಪಡೆಗೊಳಿಸಿದರೂ ಹಿಂದೆ ಬಾಕಿ ಉಳಿದಿದ್ದ ಜಿಲ್ಲೆಗಳನ್ನು ಸೇರ್ಪಡೆಗೊಳಿಸಲು ಯತ್ನಿಸಲಿಲ್ಲ. ಜಾನುವಾರು ವಿಮೆ ವ್ಯಾಪ್ತಿಗೆ ಜಿಲ್ಲೆಗಳನ್ನು ಸೇರ್ಪಡೆಗೊಳಿಸುವುದು ಕೇಂದ್ರ ಸರ್ಕಾರ. ಹಾಗಾಗಿ ಹೈನುಗಾರಿಕೆ ವಿಚಾರದಲ್ಲಿ ಈ ಪಟ್ಟಿಯಲ್ಲಿಲ್ಲದ ಜಿಲ್ಲೆಗಳು ವಿಮಾ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿವೆ.
ವಿಮೆ 3 ವರ್ಷಗಳಿಗೆ ವಿಸ್ತರಣೆ: ಈವರೆಗೆ ಜಾನುವಾರು ವಿಮೆಯನ್ನು ಪ್ರತಿ ವರ್ಷ ನವೀಕರಿಸಬಹುದಿತ್ತು. ಈ ವರ್ಷದ ಹೊಸ ನಿಯಮದ ಪ್ರಕಾರ, ಒಮ್ಮೆ ವಿಮೆ ಮಾಡಿದರೆ, ಅದನ್ನು ನವೀಕರಿಸಲು ಸಾಧ್ಯವಿಲ್ಲ. ಹಸು ಹಾಗೂ ಎಮ್ಮೆಗೆ ಒಂದು, ಎರಡು ಅಥವಾ ಮೂರು ವರ್ಷಗಳಿಗೆ ವಿಮೆ ಮಾಡಿಸಬಹುದು. ಒಮ್ಮೆ ವಿಮೆ ಮಾಡಿದರೆ ಮುಂದಿನ ವರ್ಷ ಮತ್ತೆ ವಿಸ್ತರಿಸಲು ಆಸ್ಪದವಿಲ್ಲ. ಒಂದು ವರ್ಷಕ್ಕೆ ಶೇ.3.25 ಪ್ರೀಮಿಯಂ, ಎರಡು ವರ್ಷಕ್ಕಾದರೆ ಶೇ.5.85 ಪ್ರೀಮಿಯಂ, ಮೂರು ವರ್ಷಕ್ಕೆ ಶೇ.8.25 ಪ್ರೀಮಿಯಂ ನಿಗದಿಪಡಿಸಲಾಗಿದೆ. ಮೂರು ವರ್ಷಗಳ ವಿಮೆ ಒಮ್ಮೆಲೇ ಮಾಡಿದರೆ ಶೇ.1.46 ಪ್ರೀಮಿಯಂ ಉಳಿತಾಯವಾಗುತ್ತದೆ. ಇದು ರೈತರಿಗೆ ಪ್ರಯೋಜನಕಾರಿ ಎನ್ನುತ್ತಾರೆ ಪಶು ಸಂಗೋಪನಾ ಅಧಿಕಾರಿಗಳು.
ಸ್ಥಳೀಯ ಹಸುಗಳಿಗೂ ಅನ್ವಯ: ಸಾಮಾನ್ಯವಾಗಿ ಮಿಶ್ರತಳಿ ಹಸುಗಳಿಗೆ ಮಾತ್ರ ವಿಮೆ ಮಾಡಿಸಲಾಗುತ್ತಿತ್ತು. ಇದೀಗ ಪ್ರತಿದಿನ 5 ಲೀಟರ್ಗಿಂತ ಹೆಚ್ಚು ಹಾಲು ಕೊಡುವ ಸ್ಥಳೀಯ (ದೇಸೀ) ಹಸುವಿಗೂ ವಿಮೆ ಮಾಡಿಸಬಹುದು. ಈ ವರ್ಷದಿಂದ ಜಾನುವಾರು ವಿಮೆ ಜವಾಬ್ದಾರಿಯನ್ನು ಜನರಲ್ ಇನ್ಸೂರೆನ್ಸ್ ಕಂಪನಿಯಿಂದ ಯುನೈಟೆಡ್ ಇನ್ಸೂರೆನ್ಸ್ ಕಂಪನಿಗೆ ವರ್ಗಾಯಿಸಲಾಗಿದೆ.
ಮುಖ್ಯವಾಗಿ ವಿಮೆ ಮಾಡಿಸಿದ ಜಾನುವಾರು ಕಿವಿಗೆ ಓಲೆ ಮುದ್ರೆ ಇಲ್ಲದಿದ್ದರೆ ವಿಮೆ ಸಿಗದು. ವಿಮಾ ಅವಧಿಯಲ್ಲಿ ಹಸು ಮೃತಪಟ್ಟರೆ ಪಶುವೈದ್ಯಾಧಿಕಾರಿ ಹಾಗೂ ವಿಮಾ ಕಂಪನಿ ಗಮನಕ್ಕೆ ತಂದು ಮರಣೋತ್ತರ ಪರೀಕ್ಷೆ ಮಾಡಿಸಿದರೆ ಪರಿಹಾರ ಪಡೆಯಬಹುದು. ಇದಕ್ಕೆ ಮರಣ ಹೊಂದಿದ ಜಾನುವಾರಿನ ಫೋಟೋ ಕಡ್ಡಾಯ.


ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 1 ಲೀಟರ್ ಹಾಲು ಕೊಡುವ ಹಸುವಿಗೆ 3 ಸಾವಿರ, ಎಮ್ಮೆಗೆ 4 ಸಾವಿರ ಮಾರಾಟ ಮೌಲ್ಯ ನಿಗದಿಪಡಿಸಲಾಗಿದೆ. ಇದೇ ಆಧಾರದಲ್ಲಿ ಜಾನುವಾರು ಮೌಲ್ಯ ನಿರ್ಧರಿಸುತ್ತೇವೆ. ಜಿಲ್ಲೆಯಲ್ಲಿ 21 ಸಾವಿರ ಹೈನುಗಾರ ಕುಟುಂಬವಿದ್ದು, 2011ರಲ್ಲಿ 5,550 ಜಾನುವಾರುಗಳಿಗೆ ವಿಮೆ ಮಾಡಿಸಲಾಗಿತ್ತು. ಈ ಬಾರಿ 10 ಸಾವಿರ ಜಾನುವಾರು ವಿಮೆ ಗುರಿ ಹಾಕಿಕೊಳ್ಳಲಾಗಿದೆ.
- ಡಾ.ಕೆ.ವಿ.ಹಲಗಪ್ಪ, ಪಶು ಸಂಗೋಪನಾ ಉಪನಿರ್ದೇಶಕ

-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement