ಉಪ ಚುನಾವಣೆಗೆ ಸಿಬ್ಬಂದಿ ಹಿಂದೇಟು
ಕ.ಪ್ರ.ವಾರ್ತೆ ಬೆಂಗಳೂರು ಆ.17
ವಿಧಾನಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಚುನಾವಣೆ ಕೊಂಚ ಕಿರಿಕಿರಿ ಉಂಟು ಮಾಡಿದೆ.
ಏಕೆಂದರೆ, ಚುನಾವಣೆ ಆಯೋಗ ಸಾಲಗಾರರ ಕಾಟಕ್ಕೆ ಸಿಲುಕಿದೆ. ಅಂದರೆ, ಕಳೆದ ಚುನಾವಣೆಯಲ್ಲಿ ದುಡಿಸಿಕೊಂಡವರಿಗೆ ನೀಡಬೇಕಾದ ಸಂಭಾವನೆಯನ್ನು ಆಯೋಗ ಇನ್ನೂ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಉಪ ಚುನಾವಣೆ ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಹಗಲಿರುಳು ದುಡಿದ ಕಾರು ಚಾಲಕರು, ವಿಡಿಯೋ ಕ್ಯಾಮೆರಾಗಳ ಒದಗಿಸಿದವರಿಗೆ ಇನ್ನೂ ಬಿಲ್ ಪಾವತಿಯಾಗಿಲ್ಲ. ಇದರಿಂದ ಕಾರುಗಳ ಮಾಲೀಕರು ಮತ್ತು ಕ್ಯಾಮೆರಾಗಳ ಮಾಲೀಕರು ಆಯೋಗದ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಎರಡು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಆಯೋಗಕ್ಕೆ ತಲೆನೋವು ಉಂಟು ಮಾಡಿದೆ. ಚುನಾವಣೆ ಕರ್ತವ್ಯ ನಿರ್ವಹಿಸದ ನೌಕರರನ್ನು ಜನಪ್ರತಿನಿಧಿ ಕಾಯ್ದೆಯ 134ನೇ ಸೆಕ್ಷನ್ ಪ್ರಕಾರ, ಕರ್ತವ್ಯಲೋಪದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸುವುದಾಗಿ ಆಯೋಗ ಎಚ್ಚರಿಕೆ ನೀಡಿತ್ತು. ಹೀಗಾಗಿ ಸರ್ಕಾರಿ ನೌಕರರು ಭದ್ರತಾ ಸಿಬ್ಬಂದಿ, ಡ್ರೈವರ್, ಕಂಡಕ್ಟರ್, ಕ್ಲೀನರ್ ಹಾಗೂ ಇತರೆ ಸಿಬ್ಬಂದಿಯಾಗಿ ದುಡಿದಿದ್ದರು. ಆದರೆ ಇವರ ದುಡಿಮೆಗೆ ಫಲ ಸಿಕ್ಕಿಲ್ಲ.
ನೌಕರರ ಒದ್ದಾಟ: ಅದರಲ್ಲೂ ಅಂಚೆ ಮತದಾನಕ್ಕಾಗಿ ಸೇವೆ ಸಲ್ಲಿಸಿದವರಿಗಂತೂ ಸಂಭಾವನೆ ಸಿಗುವ ಲಕ್ಷಣಗಳೇ ಇಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.ಇದೇ ಆಯೋಗ ಈಗ ಉಪ ಚುನಾವಣೆಗೆಂದು ನೌಕರರನ್ನು ನಿಯೋಜಿಸಿದೆ. ಅವರಿಗೆ ತರಬೇತಿಯನ್ನೂ ಆರಂಭಿಸಿದೆ. ಆದರೆ, ನೌಕರರು ಹಿಂದಿನ ಚುನಾವಣೆಯ ಸಂಭಾವನೆ ಸಿಗದ ಕಾರಣ ಚುನಾವಣೆ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಆಯೋಗದ ಸೂಚನೆ ತಿರಸ್ಕರಿಸಲು ಆಗದೆ ಒದ್ದಾಡುತ್ತಿದ್ದಾರೆ.
ಕ್ಯಾರೆ ಎನ್ನದ ಕ್ಯಾಮೆರಾಮನ್: ಇನ್ನು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ವಿಡಿಯೋಗ್ರಾಫರ್ಗಳನ್ನು ರಾಜಕೀಯ ಚಟುವಟಿಕೆಗಳ ಚಿತ್ರೀಕರಣಕ್ಕೆ ಆಶ್ರಯಿಸಿದೆ. ಆದರೆ, ಆಯೋಗ ಹಿಂದಿನ ಚುನಾವಣೆಯಲ್ಲಿ ದುಡಿಸಿಕೊಂಡ ಹಣವನ್ನೇ ಇನ್ನೂ ನೀಡದೆ ಸತಾಯಿಸುತ್ತಿರುವುದರಿಂದ ಕ್ಯಾಮೆರಾಮನ್ಗಳು ಆಯೋಗದ ಕೂಗಿಗೆ ಕ್ಯಾರೆ ಎನ್ನುತ್ತಿಲ್ಲ.
ಅಲ್ಲದೆ, ಆಯೋಗದ ಕೆಲಸಕ್ಕೆ ಕ್ಯಾಮೆರಾ ಬಾಡಿಗೆ ನೀಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಸಹ ಸಿಬ್ಬಂದಿಯೇ ಹ್ಯಾಂಡಿ ಕ್ಯಾಮೆರಾಗಳನ್ನು ಖರೀದಿಸಿ ಬಳಸುವಂತಾಗಿದೆ. ಇದರೊಂದಿಗೆ ವಿಡಿಯೋಗ್ರಾಫರ್ಗಳ ಸಂಭಾವನೆಯನ್ನು ಆಯಾ ಜಿಲ್ಲೆಗಳಲ್ಲಿರುವ ದರಕ್ಕೆ ತಕ್ಕಂತೆ ನಿಗದಿ ಮಾಡಬೇಕೆಂದು ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದರೂ ಜಾರಿಯಾಗಿಲ್ಲ. ಅಂದಮೇಲೆ ಚುನಾವಣೆ ಕೆಲಸ ಒಪ್ಪಿಕೊಂಡರೂ ಪ್ರಯೋಜನವಿಲ್ಲ. ಆದ್ದರಿಂದ ಆಯೋಗ ನಮಗೆ ಆಹ್ವಾನಿಸಿದ್ದರೂ ಹೋಗುತ್ತಿಲ್ಲ ಎನ್ನುತ್ತಿದ್ದಾರೆ ವಿಡಿಯೋಗ್ರಾಫರ್ಗಳ ಸಂಘದ ಅಧ್ಯಕ್ಷ ಆರಾಧ್ಯ.
ಇನ್ನೂ ಮಾರ್ಗಸೂಚಿ ಬಂದಿಲ್ವಂತೆ!
ಆಯೋಗ ಹಿಂದಿನ ಚುನಾವಣೆಗಳಲ್ಲಿ ಸರ್ಕಾರಿ ನೌಕರರನ್ನು ಚುನಾವಣಾಧಿಕಾರಿ, ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಅಧಿಕಾರಿಗಳನ್ನಾಗಿ ನಿಯೋಜಿಸಿಕೊಂಡು ಅವರಿಗೆ ವಿಶೇಷ ಸಂಭಾವನೆ ನೀಡುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ಲೈಯಿಂಗ್ ಸ್ಕ್ವಾಡ್ಗಳು, ವೀಕ್ಷಕರು ಸೇರಿದಂತೆ ಅನೇಕ ಹಂತದಲ್ಲಿ ತಂಡಗಳನ್ನು ರಚಿಸಿತ್ತು. ಈ ತಂಡಗಳಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಎಷ್ಟೆಷ್ಟು ಸಂಭಾವನೆ ನೀಡಬೇಕೆನ್ನುವ ಬಗ್ಗೆ ಆಯೋಗಕ್ಕೆ ಅಂದಾಜಿಲ್ಲ. ಏಕೆಂದರೆ, ಇವರಿಗೆ ಸಂಭಾವನೆ ನೀಡುವ ಬಗ್ಗೆ ಕೇಂದ್ರ ಚುನಾವಣೆ ಆಯೋಗದಿಂದ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಪ್ರತಿ ಕ್ಷೇತ್ರದಲ್ಲೂ ಚುನಾವಣಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳನ್ನು ಬಿಟ್ಟರೆ ಉಳಿದ ವಿಭಾಗಗಳಲ್ಲಿ ದುಡಿದ ಕೆಲವು ನೌಕರಿಗೆ ಇನ್ನೂ ಸಂಭಾವನೆಯೇ ಸಿಕ್ಕಿಲ್ಲ. ಈ ಬಗ್ಗೆ ವಿಚಾರಣೆ ಮಾಡಿದವರಿಗೆ ಆಯೋಗದ ಸ್ಥಳೀಯ ಅಧಿಕಾರಿಗಳು ಮಾರ್ಗಸೂಚಿ ಬಂದಿಲ್ಲ ಎಂದು ಕಥೆ ಹೇಳಿ ಕಳುಹಿಸುತ್ತಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ದುಡಿದವರಿಗೆ ಎಲ್ಲ ರೀತಿಯ ಸಂಭಾವನೆ ಬಿಡುಗಡೆಗೊಳಿಸಿದ್ದೇವೆ. ಇನ್ನೂ ಬಾಕಿ ಇದ್ದರೆ ನೀಡುತ್ತೇವೆ. ಆದರೆ, ಸ್ಥಳೀಯ ಅಧಿಕಾರಿಗಳು ಸಂಭಾವನೆ ನೀಡದೆ ಸತಾಯಿಸುತ್ತಿದ್ದರೆ ಅದು ಅವರಿಗೇ ತೊಂದರೆ.
ಟಿ ಪಿ.ಟಿ. ಕುಲಕರ್ಣಿ,
ಸಹಾಯಕ ಚುನಾವಣಾಧಿಕಾರಿ
ಕಳೆದ ಬಾರಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಸಂಭಾವನೆ ಸಿಕ್ಕಿಲ್ಲ ಎಂದರೆ ಅದು ನಮಗೆ ಗೊತ್ತಿಲ್ಲ. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ತರಬೇತಿ ನೀಡುವುದಷ್ಟೇ ನಮ್ಮ ಕೆಲಸ.
ಟಿ ಎಸ್. ಜಿಯಾವುಲ್ಲಾ,
ರಾಜ್ಯ ಚುನಾವಣಾ ವಿಶೇಷಾಧಿಕಾರಿ (ತರಬೇತಿ)
ಶಿವಕುಮಾರ್ ಬೆಳ್ಳಿತಟ್ಟೆ