ಕಲ್ಲಿದ್ದಲು ಹಗರಣದ ಫೈಲ್‌ಗಳೇ ಮಾಯ!
ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳೆಲ್ಲ ಎಲ್ಲಿವೆ? ಅಯ್ಯೋ, ಅವೆಲ್ಲ ಮಾಯವಾಗಿವೆ. ಒಂದೂ ಕಾಣುತ್ತಿಲ್ಲ...
ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳೆಲ್ಲ ಎಲ್ಲಿವೆ? ಅಯ್ಯೋ, ಅವೆಲ್ಲ ಮಾಯವಾಗಿವೆ. ಒಂದೂ ಕಾಣುತ್ತಿಲ್ಲ. ಹೌದು. ಕೇಂದ್ರ ಸರ್ಕಾರದ ನಿದ್ದೆಗೆಡಿಸಿದ್ದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಕಲ್ಲಿದ್ದಲು ಬ್ಲಾಕ್‌ಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳು ಹಾಗೂ ಇತರೆ ದಾಖಲೆಗಳು ನಾಪತ್ತೆಯಾಗಿವೆ.
ದಾರ್ದಾ ಶಿಫಾರಸು ಕೂಡ ಮಾಯ: 1993ರಿಂದ 2005ರ ಅವಧಿಯಲ್ಲಿ ಹಂಚಿಕೆಯಾದ 45 ಕಲ್ಲಿದ್ದಲು ಬ್ಲಾಕ್‌ಗಳಿಗೆ ಹಲವು ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಗಳ ಕಡತಗಳು ಕಾಣುತ್ತಿಲ್ಲ. ಕಲ್ಲಿದ್ದಲಿಗಾಗಿ ಅರ್ಜಿ ಸಲ್ಲಿಸಿದ್ದರೂ, ಪಡೆಯಲು ವಿಫಲವಾದ ಸುಮಾರು 157 ಖಾಸಗಿ ಕಂಪನಿಗಳ ಬಗೆಗಿನ ಮಾಹಿತಿಯೂ ಕಾಣೆಯಾಗಿದೆ. ಜತೆಗೆ, 2005ಕ್ಕೂ ಮೊದಲಿನ 4 ಪ್ರಮುಖ ಫೈಲ್‌ಗಳೂ ಈಗ ಇಲ್ಲ. ಅಷ್ಟೇ ಅಲ್ಲ, ಬಂದೇರ್ ಬ್ಲಾಕ್‌ಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ವಿಜಯ್ ಡರ್ಡಾ ಸಲ್ಲಿಸಿದ್ದ ಶಿಫಾರಸು ಹಾಗೂ ಪಿಎಂಓಗೆ ಕಳುಹಿಸಿಕೊಡಲಾಗಿದ್ದ ಕಡತಗಳ ದಾಖಲೆಗಳೂ ನಾಪತ್ತೆಯಾಗಿವೆ. ಸ್ಕ್ರೀನಿಂಗ್ ಸಮಿತಿ ನಡೆಸಿದ ಸಭೆಗಳ ಮಾಹಿತಿ, ದಾಖಲೆಗಳೂ ಕಾಣುತ್ತಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕೇಂದ್ರ ನೇಮಿಸಿದ ಶೋಧ ಸಮಿತಿ ಸಭೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಕಲ್ಲಿದ್ದಲು ಹಗರಣದ ವಿಚಾರಣೆಯನ್ನು ಸದ್ಯ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದ್ದು, ದಾಖಲೆಗಳು ಕಾಣೆಯಾಗಿರುವುದು ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದೇ ವೇಳೆ, ಕೇಂದ್ರ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರು, ಶೀಘ್ರದಲ್ಲೇ ನಾಪತ್ತೆ ಆಗಿರುವ ಫೈಲ್‌ಗಳನ್ನು ಪತ್ತೆಹಚ್ಚಲಾಗುವುದು ಎಂದಿದ್ದಾರೆ.