ತುಂಡಾ ಬಂಧನ
ದಶಕಗಳಿಂದ ಭಾರತದಲ್ಲಿ ರಕ್ತದೋಕುಳಿ ಹರಿಸುತ್ತಿರುವ ಲಷ್ಕರ್-ಎ- ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ.
ನವದೆಹಲಿ: ದಶಕಗಳಿಂದ ಭಾರತದಲ್ಲಿ ರಕ್ತದೋಕುಳಿ ಹರಿಸುತ್ತಿರುವ ಲಷ್ಕರ್-ಎ- ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ. ಎಲ್‌ಇಟಿ ಬೆನ್ನೆಲುಬು, ಭಾರತದ 20 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ಅಬ್ದುಲ್ ಕರೀಂ ತುಂಡಾನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾರತದಲ್ಲಿ 40ಕ್ಕೂ ಹೆಚ್ಚು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ, ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ, ಎಲ್‌ಇಟಿ ಬಾಂಬ್ ತಜ್ಞನೂ ಆಗಿರುವ ತುಂಡಾನನ್ನು ಭಾರತ-ನೇಪಾಳ ಗಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಂಧಿಸಲಾಗಿದೆ.
70 ವಯಸ್ಸಿನ ತುಂಡಾ ಮುಂಬೈ ದಾಳಿಯ ರೂವಾರಿ ಲಷ್ಕರ್- ಎ- ತೊಯ್ಬಾ ಸಂಘಟನೆ ಸಂಸ್ಥಾಪಕ ಹಫೀಜ್ ಸಯೀದ್‌ನ ಪರಮಾಪ್ತನೂ ಹೌದು. ಈತನ ವಿರುದ್ಧ ದೆಹಲಿಯೊಂದರಲ್ಲೇ 21 ಪ್ರಕರಣಗಳಿವೆ. ಈತನಿಂದ ಅಬ್ದುಲ್ ಖಡ್ಡಾಸ್ ಹೆಸರಿನಲ್ಲಿ ಪಾಕಿಸ್ತಾನದ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ.
1990ರ ದಶಕದಲ್ಲಿ ಉಗ್ರರ ಸಂಪರ್ಕಕ್ಕೆ ಬಂದ ತುಂಡಾ ದೇಶದಲ್ಲಿ ಭಯೋತ್ಪಾದನೆಯ ನೆರಳು ವ್ಯಾಪಕವಾಗಿ ಹರಡುವಲ್ಲಿ ಮುಖ್ಯಪಾತ್ರ ವಹಿಸಿದ್ದ. ಮೂಲವೊಂದರ ಪ್ರಕಾರ ತುಂಡಾನನ್ನು ಗಲ್ಫ್ ದೇಶದಿಂದ ಗಡೀಪಾರು ಮಾಡಲಾಗಿದೆ. ಇನ್ನೊಂದು ಮೂಲದ ಪ್ರಕಾರ, ತುಂಡಾ 10 ದಿನದ ಹಿಂದೆ ಕರಾಚಿ ಬಿಟ್ಟಿದ್ದ. ದುಬೈ ಮೂಲಕ ಕಾಠ್ಮಂಡು ತಲುಪಿದ್ದ. ಈ ವೇಳೆ ಗುಪ್ತಚರ ಮೂಲಗಳು ನೀಡಿದ ಮಾಹಿತಿ ಆಧರಿಸಿ ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ತುಂಡಾನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಬಾಂಬ್ ತರಬೇತಿ
ಸ್ಥಳೀಯವಾಗಿಯೇ ದೊರೆಯುವ ಯೂರಿಯಾ, ನೈಟ್ರಿಕ್ ಆ್ಯಸಿಡ್, ಪೊಟ್ಯಾಷಿಯಂ ಕ್ಲೋರೈಡ್, ನೈಟ್ರೋಜನ್ ಮತ್ತು ಸಕ್ಕರೆ ಬಳಸಿಕೊಂಡು ಬಾಂಬ್ ತಯಾರಿಕೆ ಮತ್ತು ಅದನ್ನು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸುವ ಮೂಲಕ ಗರಿಷ್ಠ ಹಾನಿ ಮಾಡಬಹುದು ಎಂದು ಯುವ ಉಗ್ರರಿಗೆ ತರಬೇತಿ ನೀಡುವಲ್ಲಿ ಈತ ಎತ್ತಿದ ಕೈ
ಸಿಡಬ್ಲೂಜಿ ವೇಳೆ ಸ್ಫೋಟಕ್ಕೆ ಸಂಚು
2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆಯೂ ತುಂಡಾ ಸ್ಫೋಟದ ಸಂಚು ರೂಪಿಸಿದ್ದ. ಆದರೆ, ಸಹಚರರ ಬಂಧನದಿಂದ ಈತನ ಯೋಜನೆ ತಲೆಕೆಳಗಾಗಿತ್ತು. ಈತ ಕುಖ್ಯಾತ ಉಗ್ರರಾದ ಅಜಮ್ ಚೀಮಾ, ಹಫೀಜ್ ಸಯೀದ್ ಮತ್ತು ಝಕಿಉರ್ ರೆಹಮಾನ್ ಲಖ್ವಿ ಜತೆ ನಿರಂತರ ಸಂಪರ್ಕದಲ್ಲಿದ್ದ.
ಮುಂಬೈ ದಾಳಿ ಸೂತ್ರದಾರ
1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲೂ ತುಂಡಾ ಪ್ರಮುಖ ಆರೋಪಿ. 1997- 98ರ ದೆಹಲಿ ಬಾಂಬ್ ಸ್ಫೋಟ, ಹೈದರಾಬಾದ್, ಗುಲ್ಬರ್ಗಾ, ಸೂರತ್ ಮತ್ತು ಲಖನೌಗಳಲ್ಲಿ ಸ್ಫೋಟದಲ್ಲಿ ಈತ ಪೊಲೀಸರಿಗೆ ಬೇಕಾದವ.
ಸತ್ತಿದ್ದಾನೆ ಎಂದೇ ಭಾವಿಸಲಾಗಿತ್ತು!
1ಫೆಬ್ರವರಿ, 1998ರಲ್ಲಿ ದೆಹಲಿಯ ರೇಲ್ವೆ ನಿಲ್ದಾಣದಲ್ಲಿ ಸೆರೆ ಸಿಕ್ಕ ಬಾಂಗ್ಲಾದೇಶದ ವಿದ್ಯಾರ್ಥಿಗಳಿಂದಾಗಿ ತುಂಡಾನ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ಅವರು ತುಂಡಾನಿಂದ ತರಬೇತಿ ಪಡೆದಿದ್ದರು. ಇದಾದ ಬಳಿಕ ದೆಹಲಿ ಪೊಲೀಸರು ತುಂಡಾನ 24 ಸಹವರ್ತಿಗಳನ್ನು ಬಂಧಿಸಿದ್ದರು. 2000ದಲ್ಲಿ ಬಾಂಗ್ಲಾದಲ್ಲಿ ನಡೆದ ಸ್ಫೋಟವೊಂದರಲ್ಲಿ ತುಂಡಾ ಮೃತಪಟ್ಟಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ, ತುಂಡಾ ಸತ್ತಿಲ್ಲ ಎನ್ನುವ ಮಾಹಿತಿ ಸಿಕ್ಕ ಬಳಿಕ ಆತನ ಚಲನವಲನ ಕುರಿತು ಗುಪ್ತಚರದಳ ಹದ್ದಿನ ಕಣ್ಣಿಟ್ಟಿತ್ತು.
ತಂಜೀಮ್ ಸಂಸ್ಥಾಪಕ
1985ರ ವೇಳೆ ತುಂಡಾ ವ್ಯವಹಾರದ ಉದ್ದೇಶದಿಂದ ಮುಂಬೈಗೆ ತೆರಳಿದ್ದ. ಈ ವೇಳೆ ಡಾ. ಜಲೀಸ್ ಅನ್ಸಾರಿ ಎಂಬಾತನ ಸಂಪರ್ಕಕ್ಕೆ ಬಂದಿದ್ದ. ಆ ಬಳಿಕ ಇಬ್ಬರೂ ಸೇರಿ ತಂಜೀಮ್ ಇಸ್ಲಾಹ್ ಉಲ್‌ಮುಸ್ಲಿಮೀನ್ ಸಂಘಟನೆ ಕಟ್ಟಿದರು. ಇದು ಮುಸ್ಲಿಮರ ಸುಧಾರಣೆಗಾಗಿ ಸಂಘಟಿಸಿದ ಶಸಸ್ತ್ರ ಸಂಘಟನೆ. ಆ ಬಳಿಕ ಇದಕ್ಕೆ ಇನ್ನೊಬ್ಬ ಎಲ್‌ಇಟಿ ಮುಖಂಡ ಅಜಮ್ ಗೋರಿ ಈ ಸಂಘಟನೆಯನ್ನು ಸೇರಿಕೊಂಡ. ಈತ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅಹೆಲ್-ಇ- ಹದೀಸ್ ಸಂಘಟನೆ ಕಟ್ಟಿದ್ದ. ನಂತರ ತುಂಡಾ ಮತ್ತು ಅನ್ಸಾರಿ ಸೇರಿಕೊಂಡು 1993ರಲ್ಲಿ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಸರಣಿ ಸ್ಫೋಟ ಹಾಗೂ ರೈಲಿನಲ್ಲಿ ಏಳು ಪ್ರತ್ಯೇಕ ಸ್ಫೋಟ ನಡೆಸಿದ್ದರು. 1994ರಲ್ಲಿ ಅನ್ಸಾರಿ ಸೆರೆ ಸಿಕ್ಕ ಬಳಿಕ ಢಾಕಾಗೆ ಪಲಾಯನ ಮಾಡಿದ್ದ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.