ಬೆಲಸಿಂದ ವನ ಅಭಿವೃದ್ಧಿ: ರು. 5.5 ಕೋಟಿ ಪ್ರಸ್ತಾವನೆ
ಹಾಸನ: ಜಿಲ್ಲೆಯ ಪ್ರವಾಸೋದ್ಯಮ ಈಗ ಅಭಿವೃದ್ಧಿಯತ್ತ ಕಣ್ಣು ತೆರೆದು ನೋಡಲಾರಂಭಿಸಿದೆ. ಸಕಲೇಶಪುರ ತಾಲೂಕಿನ ಪ್ರಕೃತಿ ಮಡಿಲಿನಲ್ಲಿರುವ ಹಚ್ಚ ಹಸಿರಿನ ಬಿಸ್ಲೆ ಅರಣ್ಯದ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಬೃಹತ್ ಗೋಪುರ ನಿರ್ಮಾಣ, ಪ್ರಕೃತಿ ಪ್ರಿಯರು ವಾಸ್ತವ್ಯ ಮಾಡಲು ಒಂದೆರಡು ಕೊಠಡಿಗಳ ನಿರ್ಮಾಣ ಮಾಡುವುದು ಮತ್ತು ಚನ್ನರಾಯಪಟ್ಟಣ ಸಮೀಪದ ಬೆಲಸಿಂದ ಪ್ರಕೃತಿ ವನವನ್ನು ಸೂಜಿಗಲ್ಲಿನಂತೆ ಸೆಳೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಅಲ್ಲದೇ ಜಿಲ್ಲೆಯ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಅದ್ಭುತ ಶಿಲೆಕಲೆಯಿಂದ ಮೆರೆಯುತ್ತಿರುವ ದೇವಾಲಯಗಳ ಬಳಿ ಉದ್ಯಾನವನ, ವಾಹನ ನಿಲುಗಡೆ ಮತ್ತು ಶೌಚಾಲಯ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಐದೂವರೆ ಕೋಟಿ ರು.ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಬಿಸ್ಲೆ ಅರಣ್ಯದ ಮಧ್ಯ ಭಾಗದಲ್ಲಿ ಎತ್ತರದ ಗೋಪುರ ನಿರ್ಮಿಸಿ, ಅಲ್ಲಿಂದ ಕಾಡಿನಲ್ಲಿರುವ ಹುಲಿ ಮತ್ತಿತರ ಅಪರೂಪದ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿಯಲ್ಲದೆ, ದೇಶ, ಹೊರ ದೇಶಗಳಿಂದ ಕಾಡಿನ ಬಗ್ಗೆ ಅಧ್ಯಯನ ಮಾಡಲು ಬರುವವರಿಗೆ ಹಾಗೂ ಪ್ರಕೃತಿ ಪ್ರಿಯರ ವಾಸ್ತವ್ಯಕ್ಕೆ ಕೊಠಡಿಗಳನ್ನು ನಿರ್ಮಿಸಲು 50 ಲಕ್ಷ ರು. ಅಂದಾಜು ಮಾಡಲಾಗಿದೆ.
285 ಎಕರೆ ವಿಸ್ತೀರ್ಣದ ಬೆಲಸಿಂದ ಅರಣ್ಯ: ಜಿಲ್ಲೆಯ ಪೂರ್ವಭಾಗದಲ್ಲಿರುವ ತೆಂಗಿನ ಬೀಡು ಚನ್ನರಾಯಪಟ್ಟಣದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಲಸಿಂದ ಕಿರು ಅರಣ್ಯ 285 ಎಕರೆ ವಿಸ್ತೀರ್ಣವಿದೆ. ಅಲ್ಲಿ ಶ್ರೀಗಂಧದ ಗಿಡಗಳೇ ಹೆಚ್ಚಾಗಿದ್ದು, ಅದಕ್ಕಾಗಿ ಈ ತಾಣವನ್ನು ಸಿರಿಚಂದನವನ ಎಂದೂ ಕರೆಯಲಾಗುತ್ತದೆ. ಇದೊಂದು ಪ್ರಕೃತಿ ವನವೂ ಕೂಡ. ಅರಣ್ಯ ಇಲಾಖೆಗೆ ಸೇರಿದ ಈ ವನದಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 3 ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಬೆಲಸಿಂದ ವನದ 6 ಹೆಕ್ಟೇರ್ ಪ್ರದೇಶದಲ್ಲಿ ನಿಸರ್ಗ ಪ್ರವಾಸೋದ್ಯಮ ಮತ್ತು ಪಶ್ಚಿಮಘಟ್ಟ ಕಾರ್ಯಪಡೆ ಯೋಜನೆಯಡಿ ಜಿಲ್ಲೆಯ ಪ್ರವಾಸೋದ್ಯಮಗಳ ಬಗ್ಗೆ ಸಂಪೂರ್ಣ ವಿವರ ನೀಡುವ ಮಾಹಿತಿ ಗೋಡೆ ನಿರ್ಮಾಣ, ಪ್ರಕೃತಿ ವನದ ಪ್ರದೇಶದಲ್ಲಿ ವಿಶ್ವ ಪರಂಪರಾ ವಾಸ್ತುಶಿಲ್ಪದ ಮಾದರಿಯಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುವುದು.
ಮಕ್ಕಳ ಆಟದ ಉದ್ಯಾನವನ: ಇಲ್ಲಿರುವ ಮಕ್ಕಳ ಆಟದ ಉದ್ಯಾನವನ 40 ಹೆಕ್ಟೇರ್ ವಿಸ್ತೀರ್ಣವಿದ್ದು, ಅದನ್ನು 1.50 ಹೆಕ್ಟೇರ್ಗೆ ವಿಸ್ತರಿಸಿ ಹೆಚ್ಚುವರಿ ಆಟಿಕೆಗಳು ಮತ್ತು ನೀರಿನ ಕಾರಂಜಿ ಅಳವಡಿಸಲಾಗುತ್ತಿದೆ. ಇಲ್ಲಿ ನವಗ್ರಹ ವನ, ನಕ್ಷತ್ರವನ, ಮಕ್ಕಳ ಆಟದ ಉದ್ಯಾನ ಮತ್ತು ವೈವಿಧ್ಯಮಯ ಸಸಿಗಳಿಂದ ಕೂಡಿದ ಸಸ್ಯೋದ್ಯಾನ ಸುತ್ತ 1.50 ಕಿ.ಮೀ ಇಂಟರ್ ಬಾಕ್ಸ್ ಅಳವಡಿಸಲಾಗುತ್ತಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಬೆಳೆಯುವ ನಾನಾ ಅರಣ್ಯಗಳ ಸಸ್ಯ ಪ್ರಬೇಧಗಳು, ಪ್ರಾಣಿಗಳ ಬಗ್ಗೆ ನೀಡಲು ಅರಣ್ಯ ಮಾಹಿತಿ ಕೇಂದ್ರ ಆರಂಭಿಸಲಾಗುತ್ತಿದೆ. ಬೆಲಸಿಂದ ವನದಲ್ಲಿ ಈಗಿರುವ ದೋಣಿ ವಿಹಾರ ಧಾಮವನ್ನು ವಿಸ್ತರಿಸಿ, ಎರಡೂ ಬದಿಗಳಲ್ಲಿ ವಿಶ್ರಾಂತಿ ತಾಣ ನಿರ್ಮಾಣ, ಎರಡು ತೂಗು ಸೇತುವೆ, ರೋಪ್ವೇ ಮತ್ತು ತಾಣದ ಸುತ್ತ ರಕ್ಷಣಾ ರೈಲಿಂಗ್ ಹಾಗೂ ಕುಳಿತು ಕೊಳ್ಳಲು ಆಸನಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಟೆರಾ ಕೋಟೆ ನಿರ್ಮಾಣ ಸಿಂಹ, ಹುಲಿ, ಚಿರತೆ, ಕಾಡೆಮ್ಮೆ, ಆನೆ ಮತ್ತಿತರ ಕಾಡು ಪ್ರಾಣಿಗಳ ಮೂರ್ತಿ ಶಿಲ್ಪಗಳನ್ನು ಅನಾವರಣ ಗೊಳಿಸಲಾಗುತ್ತದೆ ಮತ್ತು ಜಿಲ್ಲೆಯಲ್ಲಿ ದೊರೆಯುವ ನಾನಾ ಬಗೆಯ ಖನಿಜ ಮತ್ತು ಗ್ರಾನೈಟ್ ಮಾದರಿಗಳನ್ನು ಸಂಗ್ರಹಿಸಿ ಫಿಲಂ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ.ಅಲ್ಲದೇ ರೈತರಿಗೆ ಮಣ್ಣು ಮತ್ತು ತೇವ ಸಂರಕ್ಷಣೆಯ ಮಾಹಿತಿ ನೀಡುವ ಸಲುವಾಗಿ ಬೆಲಸಿಂದ ಅರಣ್ಯದಲ್ಲಿ ಮಣ್ಣಿನ ಬದು ಮತ್ತು ನಾನಾ ಬದುಗಳನ್ನು ನಿರ್ಮಿಸಲಾಗುತ್ತಿದೆ.
ಪ್ರವಾಸಿಗರಿಗೆ, ರೈತರಿಗೆ ಶ್ರೀಗಂಧ ಪರಿಚಯಿಸಲು ಬೆಲಸಿಂದ ಅರಣ್ಯದ ಸುತ್ತ 4.80 ಕಿ.ಮೀ ಉದ್ದದ ಚೈನ್ಲಿಂಕ್ ಬೇಲಿಯನ್ನು ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಳ್ಳಿವನ ನಿರ್ಮಾಣ, ಭೇಟಿ ನೀಡುವ ಪ್ರವಾಸಿಗರ ಸವಿ ನೆನಪಿಗಾಗಿ ಸ್ಮೃತಿ ವನ ನಿರ್ಮಿಸಲಾಗುತ್ತಿದೆ. ಮಕ್ಕಳ ರೈಲು ವಿಹಾರಧಾಮ, ಕೃತಕ ಜಲಪಾತ ನಿರ್ಮಾಣ. ಇದಕ್ಕಾಗಿ 3 ಕೋಟಿ ರು. ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕೋರಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಪ್ರಕಾಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಶಾಸಕರ ಸಾಥ್: ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣ ಕೂಡಾ ಬೆಲಸಿಂದ ಅರಣ್ಯವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಉತ್ಸಾಹ, ಆಸಕ್ತಿ ತೋರಿದ್ದಾರೆ.
ಬಿಸ್ಲೆ ಮತ್ತು ಬೆಲಸಿಂದ ಅರಣ್ಯದಲ್ಲಿ ಮಾತ್ರವಲ್ಲದೆ ಹಾಸನ ತಾಲೂಕು ಗೊರೂರಿನಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ನರಸಿಂಹಸ್ವಾಮಿ ದೇವಾಲಯ, ಕೋರವಂಗಲ ಬುಚ್ಚೇಶ್ವರ ದೇವಾಲಯ, ದೊಡ್ಡಗದ್ದವಳ್ಳಿ ಶ್ರೀ ಲಕ್ಷ್ಮೀ ದೇವಾಲಯ, ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮತ್ತು ಆಲೂರು ತಾಲೂಕು ಪಾಳ್ಯ ಶ್ರೀ ಲಕ್ಷ್ಮೀ ಜನಾರ್ದನ ದೇವಾಲಯ ಬಳಿ ಉದ್ಯಾನವನ, ವಾಹನ ನಿಲುಗಡೆ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲು ಎರಡು ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದಯಾಶಂಕರ ಮೈಲಿ