ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಸು ಕರುವಿಗೆ ಹಾಲುಣಿಸುವ ನಾಯಿ!

Rashmi Kasaragodu
Updated On : 18 Aug 2013, 1:08 am

ಕ.ಪ್ರ.ವಾರ್ತೆ   ತುರುವೇಕೆರೆ   ಆ. 17
ಏನ್ ಪ್ರೀತಿ, ವಾತ್ಸಲ್ಯ ನೋಡಿ. ನಿಯತ್ತಿಗೆ ಹೆಸರಾದ ನಾಯಿಯೊಂದು ತಬ್ಬಲಿಯಾಗಿದ್ದ ಸೀಮೆ ಹಸುವಿನ ಕರುವಿಗೆ ಪ್ರತಿದಿನ ಹಾಲುಣಿಸುವ ಅಪರೂಪದ ಸಂಗತಿ ಸಮೀಪದ ಆಲ್ಬೂರಿನಲ್ಲಿ ನಡೆಯುತ್ತಿದೆ.
ಕಳೆದ ಏಪ್ರಿಲ್ನಲ್ಲಿ ಗ್ರಾಮದ ಜಮೀನ್ದಾರರಾದ ಬೋರೇಗೌಡರ ಮನೆಯಲ್ಲಿದ್ದ ಸೀಮೆಹಸು ಕರುವೊಂದಕ್ಕೆ ಜನ್ಮ ನೀಡಿತ್ತು. ಸುಮಾರು 20 ದಿನಗಳ ನಂತರ ಆರೋಗ್ಯದಲ್ಲಿ ತೊಂದರೆಯುಂಟಾಗಿ ತಾಯಿ ಹಸು ಮೃತ ಹೊಂದಿತ್ತು. ಅದೇ ವೇಳೆಗೆ ಬೋರೇಗೌಡರ ಮನೆಯಲ್ಲಿದ್ದ ಸಾಕು ನಾಯಿ ಸಹ 3 ಮರಿಗಳಿಗೆ ಜನ್ಮವಿತ್ತಿತ್ತು. ಆದರೆ ಮರಿಗಳು ಬಹಳ ಮುದ್ದಾಗಿದ್ದರಿಂದ ಮರಿಗಳು ಕಣ್ಣು ಬಿಟ್ಟ ಕೆಲ ದಿನಗಳಲ್ಲೇ ಮರಿಗಳನ್ನು ಕೆಲವರು ಸಾಕಲು ತೆಗೆದುಕೊಂಡು ಹೋದರು. ಇತ್ತ ಸೀಮೆ ಹಸುವಿನ ಕರು, ತಾಯಿಯಿಲ್ಲದೆ ಅನಾಥವಾದರೆ, ನಾಯಿ ತನ್ನ ಮರಿಗಳು ಜೀವಂತವಿದ್ದರೂ ಮರಿಗಳನ್ನು ಕಳೆದುಕೊಂಡು ಸಂಕಟಪಡುತ್ತಿತ್ತು.  ತದನಂತರದ ದಿನಗಳಲ್ಲಿ ನಾಯಿ ಮತ್ತು ಕರು ಒಟ್ಟಿಗೆ ಇರುವುದನ್ನು ಮಾತ್ರ ಮನೆ ಮಾಲೀಕ ಬೋರೇಗೌಡ ಗಮನಿಸಿದ್ದರು. ಕೆಲ ದಿನಗಳ ನಂತರ ಅಚಾನಕ್ಕಾಗಿ ನೋಡಿದಾಗ ಕರು, ನಾಯಿಯ ಕೆಚ್ಚಲಿನಿಂದ ಹಾಲು ಕುಡಿಯುವುದನ್ನು ದೂರದಿಂದಲೇ ಗಮನಿಸಿದ್ದರು. ಇದು ಕೇವಲ ಒಂದು ದಿನದ ಬದುಕಿರಬಹುದೇನೋ ಎಂದುಕೊಂಡಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಮನೆಯಿಂದ ಕರುವನ್ನು ಹೊರಗೆ ತಂದು ಕಟ್ಟುವ ವೇಳೆ ಗೆ ಸರಿಯಾಗಿ ನಾಯಿ ಕರುವಿನ ಬಳಿ ಬಂದು ಹಾಲುಣಿಸುವುದನ್ನು ಪ್ರತಿದಿನ ನೋಡತೊಡಗಿದರು. ನಾಯಿ ಕರುವಿನ ಬಳಿ ಬಂದು ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡಿಕೊಂಡಿತ್ತು.  ತಾಯಿ ಕಳೆದುಕೊಂಡಿದ್ದ ಸೀಮೆ ಹಸುವಿನ ಕರು ನಾಯಿ ರೂಪದಲ್ಲೇ ತಾಯಿಯನ್ನು ಕಂಡಿತ್ತು. ಇತ್ತ ನಾಯಿ ತನ್ನ ಒಡಲಲ್ಲಿ ಹುಟ್ಟಿದ ಮರಿಗಳಿಗೆ ಹಾಲುಣಿಸಬೇಕಿತ್ತು. ಆದರೆ ಯಾರೋ ತೆಗೆದುಕೊಂಡು ಹೋದ ಮರಿಗಳಿಂದ ಪರಿತಪಿಸುತ್ತಿದ್ದ ನಾಯಿಗೆ ಸೀಮೆ ಹಸುವೇ ತನ್ನ ಕರುಳ ಬಳ್ಳಿಯಾಯಿತು. ತನ್ನಲ್ಲಿದ್ದ ಹಾಲೆಂಬ ಅಮೃತವನ್ನು ಪ್ರತಿದಿನ ಧಾರೆ ಎರೆಯತೊಡಗಿತು. ಹೀಗೆ ಪ್ರತಿದಿನ ಕರು ಹಾಗೂ ನಾಯಿಯ ಪ್ರೀತಿ ವಾತ್ಸಲ್ಯ ಬಾಯಿಂದ ಬಾಯಿಗೆ ಹೋಗಿದೆ. ಜನರು ನಾಯಿ- ಕರುವಿನ ಪ್ರೀತಿಯನ್ನು ಕಣ್ಣಾರೆ ಕಂಡು ಧನ್ಯರಾಗುತ್ತಿದ್ದಾರೆ. ಎರಡೂ ಜೀವಗಳು ಒಟ್ಟಿಗೆ ಓಡಾಡುತ್ತವೆ. ಪ್ರೀತಿಸುತ್ತವೆ.  ನೋಡ್ರೀ ಹೇಗಿದೆ ಮೂಕ ಪ್ರಾಣಿಗಳ ಪ್ರೀತಿ, ವಾತ್ಸಲ್ಯ.  ಇವುಗಳ ಮುಂದೆ  ನೀಯಾರಿಗಾದೆಯೋ ಎಲೋ ಮಾನವ ಎಂಬ ಪ್ರಶ್ನೆ ಮನೆ ಮಾಡುತ್ತದೆ ಅಲ್ಲವೇ...

ಎಸ್. ನಾಗಭೂಷಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement