ಇಂದು ಪ್ರಚಾರಕ್ಕೆ ತೆರೆ
ತೀರಾ ವೈಯಕ್ತಿಕ ಟೀಕೆಗಳಿಗೆ ವೇದಿಕೆಯಾದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಪ್ರಚಾರಕ್ಕೆ...
ಕನ್ನಡಪ್ರಭ ವಾರ್ತೆ, ಮಂಡ್ಯ/ರಾಮನಗರ, ಆ.18
ತೀರಾ ವೈಯಕ್ತಿಕ ಟೀಕೆಗಳಿಗೆ ವೇದಿಕೆಯಾದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಪ್ರಚಾರಕ್ಕೆ ಸೋಮವಾರ ಸಂಜೆ 5 ಗಂಟೆಗೆ ತೆರೆ ಬೀಳಲಿದೆ. 21ಕ್ಕೆ ಚುನಾವಣೆ ನಡೆಯಲಿದೆ.
ಈ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದು, ಎರಡೂ ಪಕ್ಷಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಅಂಬರೀಷ್, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು, ಪ್ರಮುಖ ನಾಯಕರು ಕಾಂಗ್ರೆಸ್ ಅಭ್ಯರ್ಥಿ ರಮ್ಯ ಹಾಗೂ ಡಿ.ಕೆ.ಸುರೇಶ್ ಅವರ ಗೆಲವಿಗೆ ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಅದೇ ವೇಳೆ, ಜೆಡಿಎಸ್‌ನ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಗೆಲವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ.
ಪ್ರಚಾರದ ಅಂತಿಮ ದಿನವಾದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸಚಿವರು ಮಂಡ್ಯ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಭಾನುವಾರ ಬೆಂ.ಗ್ರಾ. ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಬಿರುಸಿನ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ತಮ್ಮ ಪರವಾಗಿ ಮತಯಾಚಿಸಿದರು.
ಜೆಡಿಎಸ್‌ಗೂ ಅಳಿವು ಉಳಿವಿನ ಪ್ರಶ್ನೆ: ಜೆಡಿಎಸ್‌ನ ಅಧಿನಾಯಕರಾದ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿಯವರಿಗೂ ಕೂಡಾ ಪಕ್ಷದ ಅಳಿವು, ಉಳಿವಿನ ಪ್ರಶ್ನೆಯಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಪುಟ್ಟರಾಜು, ಅನಿತಾ ಕುಮಾರಸ್ವಾಮಿ ಗೆಲವಿಗೆ ಹರಸಾಹಸ ನಡೆಸಲಿದ್ದಾರೆ. ಸೋಮವಾರ ಸಂಜೆ ವೇಳೆಗೆ ಜೆಡಿಎಸ್, ಕಾಂಗ್ರೆಸ್‌ನ ಬಹಿರಂಗ ಸಭೆಗಳು ಅಂತಿಮಗೊಳ್ಳಲಿವೆ. ಸಂಜೆ ವೇಳೆಗೆ ಅಭ್ಯರ್ಥಿಗಳನ್ನು ಹೊರತುಪಡಿಸಿ ಕ್ಷೇತ್ರದವರಲ್ಲದ ನಾಯಕರು ಕ್ಷೇತ್ರರಿಂದ ಹೊರಗೆ ಹೋಗುವಂತೆ ಸೂಚಿಸಲಾಗಿದೆ ಎಂದು ಎರಡೂ ಕ್ಷೇತ್ರಗಳ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.