ದಾವೂದ್ ಇರೋದು ಕರಾಚಿಯಲ್ಲೇ
ಭೂಗತ ದೊರೆ ದಾವೂದ್ ಇಬ್ರಾಹಿಂನ ಉಪಸ್ಥಿತಿಯನ್ನು ನಿರಾಕರಿಸುತ್ತಲೇ ಬಂದಿರುವ ಪಾಕಿಸ್ತಾನ...
ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಂನ ಉಪಸ್ಥಿತಿಯನ್ನು ನಿರಾಕರಿಸುತ್ತಲೇ ಬಂದಿರುವ ಪಾಕಿಸ್ತಾನ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ದಾವೂದ್ ಕರಾಚಿಯಲ್ಲೇ ಇದ್ದಾನೆ. ಪಾಕಿಸ್ತಾನದ ಗುಪ್ತಚರದಳ ಐಎಸ್ಐ ಆತನಿಗೆ ರಕ್ಷಣೆ ನೀಡುತ್ತಿದೆ ಎಂದು ಬಂಧಿತ ಉಗ್ರ ಅಬ್ದುಲ್ ಕರೀಂ ತುಂಡಾ ತಿಳಿಸಿದ್ದಾನೆ.
ಈ ವಿಚಾರವನ್ನು ನೇಪಾಳ ಗಡಿಯಲ್ಲಿ ಶುಕ್ರವಾರವಷ್ಟೇ ಸೆರೆಸಿಕ್ಕ ತುಂಡಾ ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ಬಾಯ್ಬಿಟ್ಟಿದ್ದಾನೆ. ದಾವೂದ್ಗೆ ಆತ್ಮೀಯನೂ ಅಗಿರುವ ತುಂಡಾ ಹಲವು ಬಾರಿ ಆತನನ್ನು ಭೇಟಿಯಾಗಿದ್ದ. ಕಳೆದ ವರ್ಷವಷ್ಟೇ ತಾನು ದಾವೂದ್ ಭೇಟಿಯಾಗಿದ್ದಾಗಿ ತುಂಡಾ ಮಾಹಿತಿ ನೀಡಿದ್ದಾನೆ.
ದೆಹಲಿ ಪೊಲೀಸರ ಪ್ರಕಾರ, ದಾವೂದ್ ಇಬ್ರಾಹಿಂ ಹಾಗೂ ಜಮಾತ್ ಉದ್ ದಾವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ತುಂಡಾ ನಿರಂತರ ಸಂಪರ್ಕದಲ್ಲಿದ್ದ. ಆ.15ಕ್ಕಿಂತ ಮೊದಲು ತುಂಡಾ ಸಯೀದ್ ಅನ್ನು ಭೇಟಿಯಾಗಿದ್ದ.
ಪಾಕ್ ನಿರಾಕರಿಸಿತ್ತು: ದಾವೂದ್ ಪಾಕ್ನಲ್ಲಿದ್ದಾನೆ ಎಂದು ಪ್ರಧಾನಿ ನವಾಜ್ ಷರೀಫ್ ಅವರ ವಿಶೇಷ ರಾಯಭಾರಿ ಷೆಹರಿಯಾರ್ ಖಾನ್ ಕಳೆದ ವಾರವಷ್ಟೇ ಒಪ್ಪಿಕೊಂಡಿದ್ದರು. ಆದರೆ, ಈ ಹೇಳಿಕೆಗೆ ಪಾಕ್ನೊಳಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ತಾನು ಹಾಗೆ ಹೇಳಿಯೇ ಇಲ್ಲ ಎಂದು ತಿಪ್ಪೆ ಸಾರುವ ಕೆಲಸ ಮಾಡಿದ್ದರು.