ಆಂಧ್ರ ಆಯ್ತು, ರಾಜ್ಯದಲ್ಲೂ ರೆಡ್ಡಿ ಆಸ್ತಿ ಮುಟ್ಟುಗೋಲು?
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ...
ಕನ್ನಡಪ್ರಭ ವಾರ್ತೆ , ಬಳ್ಳಾರಿ , ಆ.20
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೇಲೆಕೇರಿ ಹಾಗೂ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಸೇರಿದ ರಾಜ್ಯದಲ್ಲಿರುವ 650 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ.
ಈಗಾಗಲೇ ಸಿಬಿಐನಿಂದ ಜಾರಿ ನಿರ್ದೇಶನಾಲಯ ಅಗತ್ಯ ಮಾಹಿತಿ ಕಲೆ ಹಾಕಿದ್ದು ಶೀಘ್ರವೇ 650 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದಷ್ಟೇ ಆಂಧ್ರದ ಒಎಂಸಿಯಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 884 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿತ್ತು.
ಸಿಬಿಐ ಅಧಿಕಾರಿಗಳು ಒಎಂಸಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಮತ್ತು ಅಕ್ರಮ ಹಣದ ವಹಿವಾಟು ಕಾಯ್ದೆ (ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆ್ಯಕ್ಟ್) ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಿಬಿಐನಿಂದ ಮಾಹಿತಿ ಪಡೆದು ಆಂಧ್ರದಲ್ಲಿರುವ ಜನಾರ್ದನ ರೆಡ್ಡಿಗೆ ಸೇರಿದ ಸುಮಾರು 884 ಕೋಟಿ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಂಡಿತ್ತು. ಇದೀಗ ಕರ್ನಾಟಕದಲ್ಲಿ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಹಾಗೂ ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಿದ ಹಣದ ಆಧಾರದ ಮೇಲೆ ಇದೀಗ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
ರೆಡ್ಡಿ ಮೇಲೆ ಇಸಿಐಆರ್ ರಿಜಿಸ್ಟರ್: ಬಳ್ಳಾರಿ ಜಿಲ್ಲೆಯ ರಾಮಘಡದಲ್ಲಿರುವ ಒಎಂಸಿಯಿಂದ ಸುಮಾರು 480 ಕೋಟಿಗಳಷ್ಟು ಬೆಲೆಬಾಳುವ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಎಎಂಸಿಗೆ ಸಂಬಂಧಿಸಿದಂತೆ 2012ರಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಕುರಿತು ಜಾರಿ ನಿರ್ದೇಶನಾಲಯ ಅಧಿಕಾರಿಗಳು 2012ರಲ್ಲಿ ಜನಾರ್ದನ ರೆಡ್ಡಿ ಮೇಲೆ ಇಸಿಐಆರ್ ರಿಜಿಸ್ಟರ್ ಮಾಡಿದ್ದರು.
ಜನಾರ್ದನ ರೆಡ್ಡಿ ಅವರ ಕುಟುಂಬದವರು ರಾಜ್ಯದಲ್ಲಿ ಎಲ್ಲಿ, ಯಾವ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ತನ್ನ ನೋಡಲ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ. ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆಯಿಂದ ನಾಲ್ಕು ಜನ ನೋಡಲ್ ಅಧಿಕಾರಿಗಳನ್ನು ಸಿಬಿಐ ಹೊಂದಿದ್ದು, ಜನಾರ್ದನ ರೆಡ್ಡಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ, ಆಸ್ತಿಯ ಮಾಹಿತಿಯನ್ನು ಇವರ ಮೂಲಕ ಕಲೆ ಹಾಕಲಾಗಿದೆ. ಈ ಮಾಹಿತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಡೆದಿದ್ದು ಶೀಘ್ರದಲ್ಲಿಯೇ ಆಸ್ತಿ ಮುಟ್ಟುಗೋಲು ಹಾಕಿದರೂ ಆಶ್ಚರ್ಯ ಪಡಬೇಕಿಲ್ಲ.
-ಶಶಿಧರ ಮೇಟಿ