ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾವೇರಿಯಂತೆ ಹರಿದಿದ್ದು ಬರೋಬ್ಬರಿ 32.91 ಕೋಟಿ!

ಕಾವೇರಿ ಜಲ ವಿವಾದ ಸಂಬಂಧ ಮೂರುವರೆ ದಶಕದಿಂದ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಸರ್ಕಾರ ಈವರೆಗೂ ಖರ್ಚು ಮಾಡಿರುವ ಹಣ ಬರೋಬ್ಬರಿ 32.91 ಕೋಟಿ!

Vishwanath S
Updated On : 21 Aug 2013, 1:52 am

ಕ.ಪ್ರ.ವಾರ್ತೆ, ಬೆಂಗಳೂರು, ಆ. 20-
ಕಾವೇರಿ ಜಲ ವಿವಾದ ಸಂಬಂಧ ಮೂರುವರೆ ದಶಕದಿಂದ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಸರ್ಕಾರ ಈವರೆಗೂ ಖರ್ಚು ಮಾಡಿರುವ ಹಣ ಬರೋಬ್ಬರಿ 32.91 ಕೋಟಿ!
ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ರಾಜ್ಯ ಅಲ್ಪ ಮಟ್ಟಿಗೆ ಯಶಸ್ಸು ಕಂಡಿರುವುದು 2007ರಲ್ಲಿ ಮಾತ್ರ. ರಾಜ್ಯದ ಪರ ಸುಮಾರು 31 ವಕೀಲರ ತಂಡವು ಕಾನೂನು ಸಮರದಲ್ಲಿ ವಕಾಲತ್ತು ವಹಿಸಿದೆ. ಆದರೆ ಈ ತಂಡದಲ್ಲಿ ರಾಜ್ಯದ ವಕೀಲರಿಗಿಂತ ಪರ ರಾಜ್ಯದ ವಕೀಲರೇ ಹೆಚ್ಚಿನ ಲಾಭ ಪಡೆದಿದ್ದಾರೆ.
ಕಳೆದ 1970ರ ದಶಕದಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳ ನಡುವೆ ಕಾನೂನು ಸಮರ ನಡೆಯುತ್ತಿದೆ. 1880ರ ಸಮಯದಲ್ಲಿಯೇ ವಿವಾದ ಏರ್ಪಟ್ಟಿದ್ದರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು 1970ರ ಬಳಿಕ.
ರಾಜ್ಯ ಸರ್ಕಾರ ಭರಿಸಿರುವ ಈ ವೆಚ್ಛದಲ್ಲಿ ಕಾವೇರಿ ನ್ಯಾಯಾಧೀಕರಣ, ಕೇಂದ್ರ ಜಲಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ಮಂಡಿಸಿರುವ ವಾದದ ಖರ್ಚು ಕೂಡ ಬರುತ್ತದೆ. ಸರ್ಕಾರ ವ್ಯಯಿಸಿರುವ ಒಟ್ಟು ಹಣದಲ್ಲಿ 91 ಲಕ್ಷವನ್ನು ಪ್ರಯಾಣಕ್ಕೆ ಖರ್ಚುಮಾಡಲಾಗಿದೆ.
ಎರಡೂ ರಾಜ್ಯದ ನಡುವಿನ ಕಾನೂನು ಹೋರಾಟ ಇನ್ನು ಅಂತ್ಯವಾಗಿಲ್ಲ. 2007ರಲ್ಲಿ ಕಾವೇರಿ ನ್ಯಾಯಮಂಡಳಿ ತೀರ್ಪು ಈ ವರ್ಷ ಅಧಿಸೂಚನೆಯಾಗಿ ಪ್ರಕಟವಾಗಿದೆ. ಇದಾದ ಬಳಿಕವೂ ಕಾನೂನು ಹೋರಾಟವನ್ನು ತಮಿಳುನಾಡು ಮುಂದುವರಿಸಿದೆ. ರಾಜ್ಯವೂ ಅನಿವಾರ್ಯವಾಗಿ ಇನ್ನಷ್ಟು ಹಣವನ್ನು ಇದಕ್ಕಾಗಿ  ಖರ್ಚು ಮಾಡಲೇಬೇಕಿದೆ.
ಮೂವರು ವಕೀಲರಿಗೆ ಶೇ.60ರಷ್ಟು ಶುಲ್ಕ!: ರಾಜ್ಯದ ಪರ ವಾದ ಮಂಡಿಸಿರುವ 31 ವಕೀಲರಲ್ಲಿ ಮೂವರು ಹಿರಿಯ ವಕೀಲರಿಗೆ ರಾಜ್ಯ ಸರ್ಕಾರ ಶೇ.60ಕ್ಕೂಅಧಿಕ ಶುಲ್ಕ ನೀಡಿದೆ.
ರಾಜ್ಯದ ಪರ ಹಿರಿಯ ವಕೀಲರಾದ ಎಸ್.ಎಸ್. ಜವಳಿ, ಎಫ್.ಎಸ್. ನಾರಿಮನ್ ಹಾಗೂ ಅನಿಲ್ ಬಿ ದಿವಾನ್ ವಾದ ಮಂಡಿಸಿದ್ದಾರೆ. ಈ ವಕೀಲರು ಕ್ರಮವಾಗಿ 4.26 ಕೋಟಿ, 4.57 ಕೋಟಿ ಹಾಗೂ 12.77 ಕೋಟಿ ಶುಲ್ಕ ಪಡೆದಿದ್ದಾರೆ. ಅಂದರೆ ಒಟ್ಟು ಶುಲ್ಕದಲ್ಲಿ 21.60 ಕೋಟಿ ಹಣವನ್ನು ಹಿರಿಯ ವಕೀಲರಿಗಾಗಿ ವ್ಯಯಿಸಲಾಗಿದೆ.  1980ರಿಂದ ನಂತರ ಬಂದ ಎಲ್ಲ ಸರ್ಕಾರಗಳ 10 ಅಡ್ವೊಕೇಟ್ ಜನರಲ್‌ಗಳು ಕಾವೇರಿ ಕಾನೂನು ಸಮರದಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಅಶೋಕ್ ಹಾರ್ನಹಳ್ಳಿ ಹಾಗೂ ನೂತನ ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ಅವರು ಯಾವುದೆ ಶುಲ್ಕ ಪಡೆದಿಲ್ಲ.
ಇವರನ್ನು ಹೊರತುಪಡಿಸಿ ಉಳಿದ ಎಜಿಗಳು 1.54 ಕೋಟಿ ಸಂಭಾವನೆ ಪಡೆದಿದ್ದಾರೆ. ಇದರಲ್ಲಿ ಸಿಂಹಪಾಲನ್ನು ಎಸ್. ವಿಜಯಶಂಕರ್ ಹಾಗೂ ಎ.ಎನ್. ಜಯರಾಂ ಅವರು ಪಡೆದಿದ್ದಾರೆ. ಉಳಿದ 8 ಕೋಟಿ ಸಂಭಾವನೆಯನ್ನು 18 ವಕೀಲರಿಗೆ ನೀಡಲಾಗಿದೆ. ಕಿರಿಯ ವಕೀಲರ ಪಟ್ಟಿಯಲ್ಲಿಯೂ ಹೊರ ರಾಜ್ಯದ ವಕೀಲರಾದ ಮೋಹನ್ ಕಾತರ್ಕಿ ಹಾಗೂ ಎಸ್.ಪಿ. ಸಿಂಗ್ ಅವರು ಸುಮಾರು 6.20 ಕೋಟಿ ಸಂಭಾವನೆ ಗಳಿಸಿದ್ದಾರೆ.
ಈ ಸಂಭಾವನೆಯು ರಾಜ್ಯ ಸರ್ಕಾರವೇ ಅಧಿಕೃತವಾಗಿ ನೀಡಿದ್ದು, ಕಳೆದ ಜೂನ್ ಅಂತ್ಯದವರೆಗೆ ನೀಡಿದ ಒಟ್ಟು ಹಣವಾಗಿದೆ.

ಸರ್ಕಾರದ ಪರ ಬಂದಿರುವ ತೀರ್ಪುಗಳಿವು: ಇವತ್ತಿನವರೆಗೆ ರಾಜ್ಯಕ್ಕೆ ಸಿಕ್ಕ ದೊಡ್ಡ ಯಶಸ್ಸೆಂದರೆ ಕಳೆದ 2007ರಲ್ಲಿ ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪು. ಆ ಪ್ರಕಾರ ರಾಜ್ಯಕ್ಕೆ 270 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ ಈ ಆದೇಶಕ್ಕೆ ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಪ್ರಕರಣ ದಾಖಲಿಸಿವೆ. ವಿಚಾರಣೆ ಇನ್ನು ಬಾಕಿಯಿದೆ. ಮತ್ತೊಂದೆಡೆ ನ್ಯಾಯಾಧೀಕರಣದಲ್ಲೂ ಕೆಲ ಸ್ಪಷ್ಟೀಕರಣ ಕೇಳಲಾಗಿದೆ. ಒಂದರ್ಥದಲ್ಲಿ ದೊಡ್ಡ ಕಾನೂನು ಹೋರಾಟದ ಬಳಿಕ ಇನ್ನು ಸ್ಪಷ್ಟನೆ ಸಿಕ್ಕಿಲ್ಲ, ತೃಪ್ತಿಯೂ ಆಗಿಲ್ಲ. ಬೊಕ್ಕಸದಿಂದಮಾತ್ರ ಕೋಟಿಗಟ್ಟಲೇ ಹಣ ಖರ್ಚಾಗಿದೆ. ಇದು ಅನಿವಾರ್ಯ ಕೂಡ ಆಗಿದೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement