ಬಿಜೆಪಿಗೆ ದೋಸ್ತಿ ಧ್ಯಾನ
ಲೋಕಸಭೆ ಉಪ ಚುನಾವಣೆ, ವಿಧಾನಪರಿಷತ್ ಚುನಾವಣೆಗೆ ಮತದಾನ ಮುಗಿದಿದೆ. ಇನ್ನು ಫಲಿತಾಂಶ ಬರುವುದಷ್ಟೇ ಬಾಕಿ ಇದರ ಬೆನ್ನಹಿಂದೆಯೇ...
ಬೆಂಗಳೂರು: ಲೋಕಸಭೆ ಉಪ ಚುನಾವಣೆ, ವಿಧಾನಪರಿಷತ್ ಚುನಾವಣೆಗೆ ಮತದಾನ ಮುಗಿದಿದೆ. ಇನ್ನು ಫಲಿತಾಂಶ ಬರುವುದಷ್ಟೇ ಬಾಕಿ. ಇದರ ಬೆನ್ನಹಿಂದೆಯೇ ರಾಜ್ಯ ಬಿಜೆಪಿ ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಲಿರುವ ಬಿಜೆಪಿ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸೇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಬಿಜೆಪಿಯ ಲೋಕಸಭೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದರಿಂದ ಮತ್ತು ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದರಿಂದ ಸಹಜವಾಗಿಯೇ ಕಾಂಗ್ರೆಸೇತರ ಪಕ್ಷಗಳು ಕೈಜೋಡಿಸಬಹುದು ಎಂಬುದು ಪಕ್ಷದ ನಿರೀಕ್ಷೆ.
ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸನ್ನು ಸೋಲಿಸಬೇಕು ಎಂದು ಬಿಜೆಪಿ ಈಗಾಗಲೇ ಜೆಡಿಎಸ್, ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಜತೆ ಕೈಜೋಡಿಸಿದೆ. ಈ ಪ್ರಯೋಗ ಯಶಸ್ವಿಯಾದರೆ ಅದನ್ನು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಮುಂದುವರಿಸಬೇಕು ಎಂಬುದು ಪಕ್ಷದ ರಾಜ್ಯ ನಾಯಕರ ಅಭಿಪ್ರಾಯವಾಗಿದೆ.
ಹೀಗಾಗಿ ಲೋಕಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪಕ್ಷದ ನಿರೀಕ್ಷೆಯಂತೆ ಬಂದರೆ ತಕ್ಷಣದಿಂದಲೇ ಕಾಂಗ್ರೆಸೇತರ ಪಕ್ಷಗಳನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಸ್ವತಃ ಬಿಜೆಪಿಯೇ ಚಾಲನೆ ನೀಡಲು ಯೋಚಿಸುತ್ತಿದ್ದು, ಇದಕ್ಕಾಗಿ ಪೂರ್ವಬಾವಿ ಸಭೆ ಕರೆಯುವ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಹೊಂದಾಣಿಕೆ ರಾಜಕಾರಣ: ಶತ್ರುವಿನ ಶತ್ರು ಮಿತ್ರ ಎಂಬಂತೆ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಇದರ ಫಲವಾಗಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಅದೇ ರೀತಿ ಮೂರು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿಯನ್ನು ಬೆಂಬಲಿಸಿತ್ತು.ಈ ಫಲಿತಾಂಶ ಪೂರಕವಾಗಿ ಬಂದರೆ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಜತೆ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂಬ ಬಯಕೆ ರಾಜ್ಯ ಬಿಜೆಪಿ ನಾಯಕರದ್ದು. ಇದಕ್ಕೆ ಜೆಡಿಎಸ್‌ನಿಂದ ಕೂಡ ಪೂರಕ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೂ ಈಗಾಗಲೇ ಪರೋಕ್ಷವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಬಗ್ಗೆ ಜೆಡಿಎಸ್ ಇದುವರೆಗೆ ಬಹಿರಂಗವಾಗಿ ಏನೂ ಹೇಳದೇ ಇದ್ದರೂ ವಿರೋಧ ವ್ಯಕ್ತಪಡಿಸಿಲ್ಲ. ದೇಶಾದ್ಯಂತ ಬಿಜೆಪಿಯೇತರ ಪಕ್ಷಗಳು ಮೋದಿ ಬಗ್ಗೆ ಕಿಡಿ ಕಾರುತ್ತಿದ್ದರೆ ಜೆಡಿಎಸ್ ಮಾತ್ರ ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಹೀಗಾಗಿ ಜೆಡಿಎಸ್ ನಾಯಕರು ಪಕ್ಷವನ್ನು ಬೆಂಬಲಿಸುವುದು ಖಚಿತ ಎಂಬ ನಿರೀಕ್ಷೆಯೊಂದಿಗೆ ಬಿಜೆಪಿ ಹೊಂದಾಣಿಕೆ ಪ್ರಕ್ರಿಯೆಗೆ ಮುಂದಾಗಿದೆ.
ಕೆಜೆಪಿ- ಬಿಜೆಪಿ ಗೊಂದಲ: ಈ ಮಧ್ಯೆ ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಬಿಜೆಪಿಗೆ ಬರುವುದು ಬಹುತೇಕ ಖಚಿತ ಎನ್ನುವಂತಾಗಿದೆ. ಇದಕ್ಕೇ ವೇದಿಕೆಯೂ ಸಿದ್ಧವಾಗುತ್ತಿದೆ. ಆದರೆ, ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ ಯಡಿಯೂರಪ್ಪ ಅವರು ಮತ್ತೆ ಬಿಜೆಪಿಗೆ ಬಂದರೆ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಸದ್ಯಕ್ಕೆ ಈ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಅವರು ಮತ್ತೆ ಬಿಜೆಪಿಗೆ ಬಂದು ಸ್ಥಾನಮಾನ ಪಡೆಯುವುದು ಪಕ್ಷದ ಕೆಲವು ನಾಯಕರಿಗೆ ಅಪಥ್ಯವಾಗಿದೆ. ಹೀಗಾಗಿ ಯಡಿಯೂರಪ್ಪ ಅವರು ಪಕ್ಷಕ್ಕೆ ಬರುವ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳುವ ಮುನ್ನವೇ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಒಂದು ತೀರ್ಮಾನ ಹೊರಬೀಳಬೇಕು ಎಂದು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರು ಮಾತ್ರ ಪಕ್ಷದಲ್ಲಿ ತಮಗೆ ಪ್ರಾಶಸ್ತ್ಯ ಸಿಕ್ಕಿದರೆ ಮಾತ್ರ ಬರುತ್ತೇನೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಹೀಗಾಗಿ ಬಿಜೆಪಿಯ ಒಂದು ಗುಂಪು ರಾಷ್ಟ್ರೀಯ ನಾಯಕರಿಂದ ಸೂಕ್ತ ಭರವಸೆಯೊಂದಿಗೆ ಯಡಿಯೂರಪ್ಪ ಅವರನ್ನು ಬರಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ಮೋದಿ ಬರುವಷ್ಟರಲ್ಲಿ ಪರಿಹಾರ: ಈ ಎಲ್ಲಾ ಹೊಂದಾಣಿಕೆ ಪ್ರಕ್ರಿಯೆ ಮತ್ತು ಗೊಂದಲಗಳಿಗೆ ಸೆಪ್ಟೆಂಬರ್ 20ರ ಒಳಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಕ್ಷದ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ಪಕ್ಷದ ಹಿರಿಯ ನಾಯಕರ ಸಭೆ ಕರೆದು ಒಂದು ತೀರ್ಮಾನ ಕೈಗೊಳ್ಳಲಾಗುವುದು.ಸೆಪ್ಟೆಂಬರ್ 20ರ ನಂತರ (ಬಹುತೇಕ ಸೆ. 22-23) ಮೋದಿ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ನವಭಾರತ ಯುವಭೇರಿ ರ್ಯಾಲಿ ರಾಜ್ಯಕ್ಕೆ ಬರಲಿದೆ. ಮೋದಿ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಹೊಂದಾಣಿಕೆ ಕುರಿತಂತೆ ಇರುವ ಸಣ್ಣ ಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ರಾಜ್ಯದ ನಾಯಕರು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಬಿಜೆಪಿ ಜತೆ ಮೈತ್ರಿ ಬೇಕಿದ್ದರೆ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಜೆಡಿಎಸ್ ಒಪ್ಪಿಕೊಳ್ಳಬೇಕು. ಅದಕ್ಕೆ ಒಪ್ಪಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಜೆಡಿಎಸ್ ಜತೆ ಮಾಡಿಕೊಂಡಿರುವ ಮೈತ್ರಿ ಈ ಚುನಾವಣೆಗೆ ಮಾತ್ರ ಸೀಮಿತ.
- ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷ