ಮಳೆ ನುಂಗಿದ ಕಾಫಿ, ಏಲಕ್ಕಿ, ಕಾಳಮೆಣಸು
ಕ.ಪ್ರ.ವಾರ್ತೆ, ಹಾಸನ, ಆ. 22-
ನಿರಂತರವಾಗಿ ಸುರಿದ ಮಳೆಗೆ ಮಲೆನಾಡ ರೈತರು ತತ್ತರಿಸಿ ಹೋಗಿದ್ದಾರೆ. ಕಷ್ಟವೆಂದಾಗ ಕೈ ಹಿಡಿಯುತ್ತಿದ್ದ ಏಲಕ್ಕಿ, ಮೆಣಸೂ ಈ ಬಾರಿ ಮಳೆಗೆ ಬಲಿಯಾಗಿದೆ.
ಸತತವಾಗಿ ಸುರಿದ ಮಳೆಯಿಂದ ಏಲಕ್ಕಿಗೆ ಕೊಕ್ಕೆ ಕಂದು ರೋಗ ಬಂದರೆ, ಮೆಣಸಿಗೆ ಕೊಳೆ ರೋಗ ತಗುಲಿ ಫಸಲು ನಾಶವಾಗಿದೆ. ಕಾಫಿ ಗಿಡಗಳ ನಡುವೆ ಬೆಳೆಯುವ ಮೆಣಸಿನ ಬಳ್ಳಿಗಳಿಗೆ ರೋಗ ತಗುಲಿದ್ದರಿಂದ ಗೊಂಚಲು ಗೊಂಚಲಾಗಿದ್ದ ಮೆಣಸಿನ ಕಾಳುಗಳು ಮಳೆಯಿಂದಟಿಡಿ ಉದುರಿ ಹೋಗಿವೆ.
ಜೂನ್ ಆರಂಭದವರೆಗೆ ಕಡಿಮೆ ಮಳೆಯಾದ ಪರಿಣಾಮ ಮೆಣಸಿನ ಬಳ್ಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೂವು ಅರಳಲಿಲ್ಲ. ಅಲ್ಪ ಸ್ವಲ್ಪ ಉಳಿದಿದ್ದ ಹೂವುಗಳು ಕಾಯಿಯಾಗಿ ಪರಿವರ್ತನೆಗೊಳ್ಳುತ್ತಿದ್ದಂತೆ ಭೀಕರ ಮಳೆಯಾಯಿತು. ಇದರಿಂದ ರೋಗ ಬಂದು ಇದ್ದ ಮೆಣಸೂ ನೆಲ ಕಚ್ಚಿತು.
ಇದೀಗ ಏಲಕ್ಕಿ, ಮೆಣಸು ಮತ್ತು ಕಾಫಿ ಬೆಳೆಗಾರರು ಮಾಡಿದ ಸಾಲ ತೀರಿಸಲಾಗದ ಸ್ಥಿತಿಗೆ ಬಂದಿದ್ದಾರೆ. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ, ಮೆಣಸನ್ನು ಬೆಳೆಯಲಾಗುತ್ತದೆ. ಆದರೆ ಅತಿ ಮಳೆ ಹಾಗೂ ರೋಗಗಳಿಂದ ಅವೆರಡೂ ಬೆಳೆಗಳು ನಷ್ಟವಾಗಿವೆ. ಸಕಲೇಶಪುರದಲ್ಲಿ 8 ರಿಂದ 10 ಏಲಕ್ಕಿ ವಹಿವಾಟು ನಡೆಸುವ ಮಂಡಿಗಳಿದ್ದವು. ಈಗ ಎರಡು ಇರುವುದು ಏಲಕ್ಕಿ ಬೆಳೆ ಎಷ್ಟು ಕುಸಿತವಾಗಿದೆ ಎಂಬುದಕ್ಕೆ ಉತ್ತಮ ಉದಾಹರಣೆ.
2002-2005ರಲ್ಲಿ ಬರದಿಂದ ತತ್ತರಿಸಿ ಹೋಗಿದ್ದ ಮಲೆನಾಡು ರೈತರು 2007ರಲ್ಲಿ ಕೊಂಚ ಚೇತರಿಕೆ ಕಂಡರಾದರೂ, 2008-09 ರಲ್ಲಿ ಅತಿವೃಷ್ಟಿಯಾಯಿತು. ಹೀಗೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಈಡಾಗುತ್ತಿರುವ ರೈತರ ಸಹಾಯಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ನಿಲ್ಲದೇ ಇರುವುದು ವಿಷಾದನೀಯ. ಕೇಂದ್ರದ ಏಲಕ್ಕಿ ಮಂಡಳಿ ಮತ್ತು ಸಾಂಬಾರ ಮಂಡಳಿ ಇದ್ದರೂ ಇಲ್ಲದಂತಾಗಿವೆ. ಈ ಮಂಡಳಿಗಳು ಕೇರಳ ರೈತರಿಗೆ ಸಹಾಯವಾಗಿವೆಯೇ ಹೊರತು ಕರ್ನಾಟಕದ ಬೆಳೆಗಾರರಿಗೆ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಸದಸ್ಯ ಬಿ.ಎ. ಜಗನ್ನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅರಬ್ಬರಿಗೆ ನಿರಾಶೆ: ಮಸಾಲೆ ಪ್ರಿಯರಾದ ಅರಬ್ಬರಿಗೆ ಕೇಳಿದಷ್ಟು 'ಕರಿ ರಾಣಿ' ಎಂದೇ ಸಾಂಬಾರ ಲೋಕದಲ್ಲಿ ಖ್ಯಾತಿ ಪಡೆದಿರುವ ಮೆಣಸಿನ ಕಾಳನ್ನು ಪೂರೈಸಲು ಸ್ಥಳೀಯ ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಮೆಣಸು, ಏಲಕ್ಕಿ ಉತ್ಪಾದನೆಯಾಗಿಲ್ಲ. ಈಗ ಕೆಜಿ ಮೆಣಸಿನ ಕಾಳಿನ ಬೆಲೆ 398-400 ಇದ್ದರೆ, 8 ಎಂಎಂ ಗಾತ್ರದ ಅತ್ಯುತ್ತಮ ಏಲಕ್ಕಿ ಬೆಲೆ ಕೆ.ಜಿ.ಗೆ 1050-1,100ಗೆ ತಲುಪಿದೆ.
ಈ ವರ್ಷ ಕೇರಳದಲ್ಲಿ ಉತ್ಪಾದನೆಯಾಗಬೇಕಿದ್ದ 3 ಲಕ್ಷ ಕೆ.ಜಿ. ಏಲಕ್ಕಿ ಕೇವಲ 2 ಲಕ್ಷ ಕೆ.ಜಿ.ಗಿಂತಲೂ ಕಡಿಮೆ ಉತ್ಪಾದನೆಯಾಗಿದೆ. ಕರ್ನಾಟಕದಲ್ಲಿಯೂ ಈ ಬೆಳೆಗಳ ಉತ್ಪಾದನೆ ಕುಸಿದಿದೆ ಎನ್ನುತ್ತಾರೆ ಸಕಲೇಶಪುರದ ಏಲಕ್ಕಿ ವ್ಯಾಪಾರಿ ಸುಪ್ರದೀಪ್ ಎನ್ನುತ್ತಾರೆ.
- ದಯಾಶಂಕರ ಮೈಲಿ