ರುಪಾಯಿ ಛಿದ್ರಂಬರ
ಡಾಲರ್ ವಿರುದ್ಧ ಜಾರು ಹಾದಿಯಲ್ಲಿರುವ ರುಪಾಯಿ ಮೌಲ್ಯ ಗುರುವಾರ ಮತ್ತೊಂದು ದಾಖಲೆಯ ಮಜಲು ಮುಟ್ಟಿದೆ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಡಾಲರ್ ವಿರುದ್ಧ ಜಾರು ಹಾದಿಯಲ್ಲಿರುವ ರುಪಾಯಿ ಮೌಲ್ಯ ಗುರುವಾರ ಮತ್ತೊಂದು ದಾಖಲೆಯ ಮಜಲು ಮುಟ್ಟಿದೆ. ಆದರೆ, ರುಪಾಯಿ ಸಬಲವಾಗುತ್ತದೆ ಮತ್ತು ಸ್ಥಿರತೆ ಕಂಡುಕೊಳ್ಳುತ್ತದೆ ಎಂಬ ಆಶಾಭಾವನೆ ವ್ಯಕ್ತ ಪಡಿಸಿರುವ ವಿತ್ತ ಸಚಿವ ಪಿ. ಚಿದಂಬರಂ ಅವರು, ರುಪಾಯಿ ಮೌಲ್ಯ ಕುಸಿದಿಲ್ಲ, ಅದರ ಮೌಲ್ಯವನ್ನು ಕಡೆಗಣಿಸಲಾಗಿದೆ. ಸೂಕ್ತ ಕಾಲದಲ್ಲಿ ರುಪಾಯಿ ತನ್ನ ಮೌಲ್ಯ ಕಂಡುಕೊಳ್ಳುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ರುಪಾಯಿ ಅಪಮೌಲ್ಯಕ್ಕೆ ಕಾರಣವಾಗಿರುವ ಚಾಲ್ತಿ ಖಾತೆ ಕೊರತೆ ಪ್ರಮಾಣವನ್ನು ತಗ್ಗಿಸುವುದಾಗಿ ತಿಳಿಸಿರುವ ವಿತ್ತ ಸಚಿವರು, ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಯ ಶೇ. 4.8 ರಷ್ಟು ಮತ್ತು ಚಾಲ್ತಿ ಖಾತೆ ಕೊರತೆ ಪ್ರಮಾಣವನ್ನು ಶೇ.3.7ರಷ್ಟಕ್ಕೆ ಕಾಯ್ದುಕೊಳ್ಳಲಾಗುತ್ತದೆ ಮತ್ತು ಕೊರತೆಯನ್ನು ಸರಿದೂಗಿಸಲಾಗುವುದು ಎಂದು ಹೇಳಿದ್ದಾರೆ. ವಿಲಾಸಿ ವಸ್ತುಗಳ ಮೇಲಿನ ಸುಂಕ ಹೇರಿಕೆ ಈ ಹೊತ್ತಿನ ಆದ್ಯತೆ ಅಲ್ಲ, ಆದರೆ, ಅದನ್ನು ಪರಿಗಣಿಸಲಾಗುತ್ತದೆ. ಅಗತ್ಯ ಬಿದ್ದಾಗ ಕೆಲ ವಸ್ತುಗಳ ದರ ಏರಿಸಲಾಗುತ್ತದೆ ಎಂದೂ ಹೇಳಿದ್ದಾರೆ.
ಗುರುವಾರ ಷೇರುಪೇಟೆಯಲ್ಲಿ ಭಾರಿ ಚೇತರಿಕೆ ಕಂಡು ಬಂದರೂ ರುಪಾಯಿ ಕುಸಿತಕ್ಕೆ ಮಾತ್ರ ಯಾವುದೇ ಕಡಿವಾಣ ಬೀಳಲಿಲ್ಲ. ಒಂದು ಹಂತದಲ್ಲಿ ಡಾಲರ್ ವಿರುದ್ಧ 65.56 ಹಂತಕ್ಕೆ ಕುಸಿತ ಕಂಡ ರುಪಾಯಿ ದಿನದ ಅಂತ್ಯಕ್ಕೆ 64.55ಕ್ಕೆ ಸ್ಥಿರತೆ ಕಂಡಿತು. ಬುಧವಾರಕ್ಕೆ ಹೋಲಿಸಿದರೆ ರುಪಾಯಿ 44 ಪೈಸೆಯಷ್ಟು ಕುಸಿಯಿತು.
ನಿರಾಶವಾದಿಗಳಾಗಬೇಕಿಲ್ಲ: ಹಣಕಾಸು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬಂಡವಾಳ ನಿರ್ಬಂಧ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ ಚಿದಂಬರಂ, ಭಾರತದ ಆರ್ಥಿಕ ಅಭಿವೃದ್ಧಿ ಬಗ್ಗೆ ಅನಗತ್ಯ ನಿರಾಶವಾದಿಗಳಾಗಬೇಕಿಲ್ಲ. ಪ್ರಸಕ್ತ ವಿತ್ತೀಯ ವರ್ಷದ ದ್ವಿತಿಯಾರ್ಧದ ನಂತರ ನಾವು ಚೇತರಿಕೆ ನಿರೀಕ್ಷಿಸಿದ್ದೇವೆ. ಕಳೆದ ವಿತ್ತೀಯ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ಪ್ರಮಾಣ ದಶಕದ ಅತಿ ಕಳಪೆ ಮಟ್ಟದ್ದಾಗಿತ್ತು. ಈಗ ಚೇತರಿಕೆಯ ಹಂತದಲ್ಲಿವೆ ಎಂದರು. ಕರೆನ್ಸಿ ಮಾರುಕಟ್ಟೆಯಲ್ಲಿನ ಬೆಳವಣಿಗೆ ಕುರಿತಂತೆ ಆತಂಕ ಪಡುವ ಅಗತ್ಯವಿಲ್ಲ. ಸಂಬಂಧಪಟ್ಟವರು ಈ ನಿಟ್ಟನಲ್ಲಿ ನಮ್ಮ ಸಂದೇಶಗಳನ್ನು ವಿರೂಪಗೊಳಿಸ ಬಾರದು ಎಂದೂ ಹೇಳಿದರು.
ಬಂಡವಾಳದ ಮೇಲೆ ನಿರ್ಬಂಧ ಹೇರುವ ಉದ್ದೇಶ ನಮಗಿಲ್ಲ. ರುಪಾಯಿ ಸ್ಥಿರತೆ ಕಂಡುಕೊಂಡ ನಂತರ ಈ ಬಗ್ಗೆ ಗಮನ ಹರಿಸುತ್ತೇವೆ. ರುಪಾಯಿ ಸ್ಥಿರತೆ ಕಾಯ್ದುಕೊಳ್ಳಲು ಸಾವರಿನ್ ಬಂಡ್ಗಳ ವಿತರಣೆ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಸರ್ಕಾರ ಮುಕ್ತವಾಗಿಟ್ಟುಕೊಂಡಿದೆ ಎಂದೂ ಹೇಳಿದರು.
ಮತ್ತಷ್ಟು ಕುಸಿತದ ಹಾದಿ...: ಏಷಿಯಾದಲ್ಲಿ ಅತಿ ಹೆಚ್ಚು ಮೌಲ್ಯ ಕಳೆದುಕೊಂಡಿರುವ ರುಪಾಯಿ ಮತ್ತಷ್ಟು ಕುಸಿಯುವ ಲಕ್ಷಣ ಇದೆ. ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 500 ದಶಲಕ್ಷ ಡಾಲರ್ ಮೌಲ್ಯದಷ್ಟು ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಅಲ್ಲದೇ, 1.3 ಬಿಲಿಯನ್ ಡಾಲರ್ ಮೌಲ್ಯದಷ್ಟು ಭಾರತ ಸರ್ಕಾರದ ಮತ್ತು ಕಾರ್ಪೋರೆಟ್ ಬಾಂಡ್ಗಳನ್ನು ಮಾರಾಟ ಮಾಡಿದ್ದಾರೆ.
ಅತ್ತ ಅಮೆರಿಕದ ಆರ್ಥಿಕತೆ ಚೇತರಿಕೆ ಕಾಣಿಸುತ್ತಿದ್ದಂತೆ ಹೂಡಿಕೆದಾರರ ಸ್ವರ್ಗ ಎನಿಸಿದ್ದ ಭಾರತದಂತಹ ತ್ವರಿತ ಆರ್ಥಿಕಾಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೂಡಿದ್ದ ಹಣವನ್ನು ಹಿಂಪಡೆಯುತ್ತಿವೆ. ಹೀಗಾಗಿ ಭಾರತವಷ್ಟೆ ಅಲ್ಲ ಉದಯಿಸುತ್ತಿರುವ ಮಾರುಕಟ್ಟೆಗಳ ಪಟ್ಟಿಯಲ್ಲಿ ಬರುವ ಬಹುತೇಕ ರಾಷ್ಟ್ರಗಳ ಕರೆನ್ಸಿಗಳು ಅಪಮೌಲ್ಯಗೊಂಡಿವೆ. ಮುಖ್ಯ ಪ್ರಶ್ನೆ ಎಂದರೆ ರುಪಾಯಿ ಅಪಮೌಲ್ಯದ ಜಾರುಹಾದಿಗೆ ಕೊನೆ ಹೇಗೆ ಮತ್ತು ಯಾವಾಗ?
ಹೆಚ್ಚಾಯ್ತು ಸಾಲದ ಮೇಲಿನ ಬಡ್ಡಿದರ: ಐಸಿಐಸಿಐ, ಎಚ್ಡಿಎಫ್ಸಿ ಬ್ಯಾಂಕ್ಗಳು ಗೃಹ ಮತ್ತು ಆಟೋ ಸಾಲಗಳ ಮೇಲಿನ ಬಡ್ಡಿದರವನ್ನು ಶುಕ್ರವಾರದಿಂದಲೇ ಅನುಷ್ಠಾನಕ್ಕೆ ಬರುವಂತೆ ಶೇ.0.25ರಷ್ಟು ಹೆಚ್ಚಿಸಿದೆ.
ರುಪಾಯಿ ದಾಖಲೆ ಕುಸಿತ ಪರಿಣಾಮ ಎತ್ತೆತ್ತ ಏನೇನು?
ಸರ್ಕಾರದ ಮೇಲೆ
1. ರುಪಾಯಿ ಮೌಲ್ಯ ಕುಸಿತದಿಂದ ಹಣದುಬ್ಬರ ಹೆಚ್ಚುತ್ತದೆ. ಹಣದುಬ್ಬರ ಹೆಚ್ಚಿದರೆ ಸಹಜವಾಗಿಯೇ ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳ ವಿಷಚಕ್ರ ತಿರುಗುತ್ತದೆ. ಚುನಾವಣೆಗೆ ಸಿದ್ಧತೆ ನಡೆಸಿರುವ ಯುಪಿಎ ಸರ್ಕಾರಕ್ಕೆ ರುಪಾಯಿ ಕುಸಿತ ನುಂಗಲಾರದ ತುಪ್ಪವಷ್ಟೆ ಅಲ್ಲ, ಭರಿಸಲಾಗದ ಶಾಪವೂ ಹೌದು.
2. ಈಗಾಗಲೇ ಸಮಸ್ಯೆಗಳ ಸುಳಿಯಲ್ಲಿರುವ ಸರ್ಕಾರಕ್ಕೆ ರುಪಾಯಿ ಕುಸಿತ ಮತ್ತಷ್ಟು ಸಮಸ್ಯೆಗಳನ್ನೊಡ್ಡಿದೆ. ಆಡಳಿತ ಸಾಮರ್ಥ್ಯಕ್ಕೆ ಒರೆ ಹಚ್ಚಿದೆ. ಸರ್ಕಾರದ ಕೈಗೊಂಡಿರುವ ಎಲ್ಲಾ ಕ್ರಮಗಳೂ ವಿಫಲವಾಗುತ್ತಿದ್ದು, ಸರ್ಕಾರದ ಆಡಳಿತನಿರ್ವಹಣೆಯ ಅಸಮರ್ಥತೆಯ ಪ್ರತೀಕ ಎಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಈರುಳ್ಳಿಯ ಉರಿ ದೆಹಲಿ ಸರ್ಕಾರವನ್ನು ಕಿತ್ತೊಗೆಯುತ್ತ್ತೆಂದಾರೆ, ರುಪಾಯಿ ಅಪಮೌಲ್ಯದ ದಳ್ಳುರಿ ಯುಪಿಎ ಸರ್ಕಾರವನ್ನು ಉಳಿಸೀತೆ?
ಆರ್ಥಿಕತೆ ಮೇಲೆ
ದಶಕದ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ರುಪಾಯಿ ಅಪಮೌಲ್ಯ ಸೃಷ್ಟಿಸಿದೆ. ಕೈಗಾರಿಕಾ ಉತ್ಪಾದನೆ ಕುಸಿತ ಆರ್ಥಿಕ ಅಭಿವೃದ್ಧಿ ಪ್ರಮಾಣವನ್ನು ತಗ್ಗಿಸಿದೆ. ರುಪಾಯಿ ದುರ್ಬಲಗೊಂಡ ಪರಿಣಾಮ ಎಂದರೆ ಚಾಲ್ತಿ ಖಾತೆ ಕೊರತೆ ಪ್ರಮಾಣವನ್ನು ನಿರೀಕ್ಷೆ ಮೀರಿ ಹೆಚ್ಚಿಸಿದೆ. ಭಾರತದ ಆರ್ಥಿಕತೆಯನ್ನು ಮಟ್ಟವನ್ನು ರೇಟಿಂಗ್ ಏಜಿನ್ಸಿಗಳು ಕೆಳಕ್ಕಿಳಿಸಬಹುದು. ಈ ಎಲ್ಲವೂ ಆರ್ಥಿಕ ಹಿಂಜರಿತಕ್ಕೆ ಮುನ್ಸೂಚನೆಗಳು.
ಚಿದಂಬರಂ ಹೇಳಿದ್ದಿಷ್ಟು
- ರು. ಸ್ಥಿರತೆಗೆ ಇಂತಿಷ್ಟೇ ಹಂತ ಇಲ್ಲ. ಆದರೆ, ನಮಗೆ ಸುಸ್ಥಿರ ಕರೆನ್ಸಿ ಬೇಕಿದೆ.
- ಕಳೆದೊಂದು ವರ್ಷದಲ್ಲಿ ರು. ಸ್ಥಿರತೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಕೆಲವು ಮೇಲ್ನೋಟಕ್ಕೆ ಕಾಣಿಸುತ್ತಿವೆ. ಆದರೆ, ಸವಾಲು ಮಾತ್ರ ಹಾಗೆಯೇ ಉಳಿದಿದೆ.
- ವಿತ್ತೀಯ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಚೇತರಿಕೆ ನಿರೀಕ್ಷಿಸಿಲ್ಲ, ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಚೇತರಿಕೆ ಕಾಣಿಸಲಿದೆ. ಬಂಡವಾಳ ಹರಿವು ತನ್ನಿಂತಾನೆ ಸ್ಥಿರಗೊಳ್ಳುತ್ತದೆ.
- ಉಕ್ಕು ಅದಿರು ಗಣಿಗಾರಿಕೆ ಪುನಾರಂಭಿಸಬೇಕು, ಕಲ್ಲಿದ್ದಲು ಉತ್ಪಾದನೆ ಹೆಚ್ಚಳ ರಚನಾತ್ಮಕ ಹೆಜ್ಜೆಗಳಲ್ಲೊಂದು, ರಸಗೊಬ್ಬರ ಉತ್ಪಾದನಾ ಘಟಕಗಳ ಸಾಮರ್ಥ್ಯ ಹೆಚ್ಚಿಸಬೇಕು.
- ವಿದೇಶಿ ವಿನಿಮಯ ಮೀಸಲು 277 ಬಿಲಿಯನ್ ಡಾಲರ್ ಇದೆ.
- ನೀತಿ ನಿರೂಪಕರ ಸಂದೇಶಗಳನ್ನು ವಿರೂಪಗೊಳಿಸಲಾಗುತ್ತಿದೆ.
ರುಪಾಯಿ ಮೇಲೆ ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಸದ್ಯ ರುಪಾಯಿ ಮೌಲ್ಯ ಕುಗ್ಗಿದೆ. ಇದರಿಂದ ಯಾರೂ ನಿರಾಶೆಗೆ ಒಳಗಾಗಬೇಕಾಗಿಲ್ಲ. ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸ್ಥಿರತೆ ಮರಳಿ ಬರಲಿದೆ. ಈ ಮೂಲಕ ಬಂಡವಾಳ ಹೂಡಿಕೆ ಮತ್ತು ಶೀಘ್ರ ಗತಿಯ ಆರ್ಥಿಕ ಬೆಳವಣಿಗೆ ಕಾಣಲಿದ್ದೇವೆ.
- ಚಿದಂಬರಂ, ಹಣಕಾಸು ಸಚಿವ