ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಂಘರ್ಷ ಪ್ರಕರಣ ಸಿಬಿಐ ತನಿಖೆಗೆ?

Vishwanath S
Updated On : 23 Aug 2013, 12:42 pm

ನವದೆಹಲಿ: ಬೆಂಗಳೂರು ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ಮತ್ತು ಪತ್ರಕರ್ತರ ನಡುವಿನ ಸಂಘರ್ಷದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಮುನ್ಸೂಚನೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೀಡಿದ್ದಾರೆ.
ಆದರೆ, ಪ್ರಕರಣ ಕುರಿತು ರಾಜ್ಯ ಸರ್ಕಾರ ಮತ್ತು ವಕೀಲರ ಸಂಘದ ವಾದ ಆಲಿಸಿರುವ ಮುಖ್ಯ ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸಿದ್ದಾರೆ. ಈ ಪ್ರಕರಣ ಕುರಿತು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹೆಚ್ಚುವರಿ ಡಿಜಿಪಿಗಳು ಹಾಗೂ ಹಲಸೂರು ಗೇಟ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಲು ಸುಪ್ರೀಂ ಸೂಚಿಸಿತ್ತು. ಆದರೆ, ರಾಜ್ಯ ಸರ್ಕಾರ ತನಿಖಾ ತಂಡ ರಚನೆಗೆ ಉತ್ಸಾಹ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲರ ಸಂಘ ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

ಸಿಬಿಐಗೆ ಒಪ್ಪಿಸಬಹುದಾ?: ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುವ ವೇಳೆ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು, ಇದುವರೆಗೆ ಪ್ರಕರಣದ ತನಿಖೆಯೇ ನಡೆದಿಲ್ಲವಾದ್ದರಿಂದ ಸಿಬಿಐಗೆ ಒಪ್ಪಿಸಬಹುದಲ್ಲವೇ ಎಂದು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿದರು. ಆದರೆ, ಕರ್ನಾಟಕ ಸರ್ಕಾರ ಪರ ವಕೀಲ ವಿಶ್ವನಾಥ್ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಕ್ಕೆ ರಾಜ್ಯ ಸರ್ಕಾರದ ವಿರೋಧ ಇದೆ ಎಂದರು.
ಈ ಪ್ರಕರಣದ ಬಗ್ಗೆ ನೂತನ ಮುಖ್ಯಮಂತ್ರಿಗಳು ಖುದ್ದಾಗಿ ಗಮನ ಹರಿಸಿದ್ದಾರೆ. ತನಿಖೆಗೆ ಹೊಸ ತಂಡವನ್ನು ರಚಿಸಲಾಗುತ್ತದೆ. ಗೌರವಾನ್ವಿತ ನ್ಯಾಯಾಲಯದ ಸೂಚನೆಯಂತೆ ತನಿಖಾ ತಂಡ ನೇಮಕ ಮಾಡದೇ ಇರುವುದಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು ಕಾರಣ ಎಂದು ವಿವರಣೆ ನೀಡಿದರು. ಹೊಸ ತಂಡದ ತನಿಖೆ ಪ್ರಗತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದೂ ಹೇಳಿದರು. ರಾಜ್ಯ ಸರ್ಕಾರದ ವಕೀಲರು ನೀಡಿದ ಸ್ಪಷ್ಟನೆಗೆ ಸಮಾಧಾನಗೊಳ್ಳದ ಮುಖ್ಯನ್ಯಾಯಮೂರ್ತಿಗಳು, ನೀವು ಹೇಳಿಕೊಂಡರೂ ವರದಿ ಸಲ್ಲಿಸುವುದು ಅಷ್ಟು ಸುಲಭವಲ್ಲ ಎಂಬುದು ನಮಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಆದೇಶ ಕಾಯ್ದಿಟ್ಟ ಕೋರ್ಟ್: ವಕೀಲರ ಸಂಘದ ಪರವಾಗಿ ವಾದಿಸಿದ ಕೆ.ಕೆ. ವೇಣುಗೋಪಾಲ್ ಅವರು, ಪ್ರಕರಣದ ಬಗ್ಗೆ ಇದುವರೆಗೆ ತನಿಖೆಯೇ ಆಗಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ತನಿಖಾ ತಂಡ ರಚನೆ ಆಗಿಲ್ಲ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕು ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸಿದ್ದಾರೆ.  ಸಿಬಿಐ ತನಿಖೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ಎರಡು ಮೂರು ದಿನಗಳಲ್ಲಿ ಆದೇಶ ನೀಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement