ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಬ್ಬಂದಿಗಿದು 'ಸಕಾಲ'ವಲ್ಲ!

Vishwanath S
Updated On : 23 Aug 2013, 11:40 am

ಕ.ಪ್ರ. ವಾರ್ತೆ,  ಶಿವಮೊಗ್ಗ,  ಆ.22-
'ಚೆನ್ನಾಗಿ ಕೆಲಸ ಮಾಡಿ. ಇನ್ನಷ್ಟು ಹೆಚ್ಚು ಜನರನ್ನು ತಲುಪಿ. ನೀವು ಬಸ್‌ನಲ್ಲಿ ಓಡಾಡುವಾಗಲೂ ನಿಮ್ಮ ಪಕ್ಕದವರೊಂದಿಗೆ ಸಕಾಲ ಬಗ್ಗೆಯೇ ಮಾತನಾಡಿ. ಯೋಜನೆ ಎಲ್ಲರಿಗೂ ಮುಟ್ಟಬೇಕು' ಎಂದು ಹುರಿದುಂಬಿಸಿದ ಹದಿನೈದು ದಿನಗಳಲ್ಲೇ, 'ನಿಮ್ಮ ಅಗತ್ಯವಿಲ್ಲ. ಮನೆಗೆ ಹೋಗಿ' ಎಂದರೆ ಹೇಗಾಗಬಹುದು? ಇಂಥ ಪರಿಸ್ಥಿತಿ ಈಗ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿದ್ದ ಸಕಾಲ ಸಹಾಯವಾಣಿ ಸಿಬ್ಬಂದಿಗೆ ಬಂದೊದಗಿದೆ.
 ಇದೇ ಜುಲೈ 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಜುಲೈ 31ರಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಇ-ಮೇಲ್ ಕಳುಹಿಸಿ ಸಕಾಲ ಸಹಾಯವಾಣಿ ಕೇಂದ್ರಗಳನ್ನು ಮುಂದುವರಿಸುವಂತೆಯೂ ಸೂಚಿಸಿದ್ದರು.
 ನಂತರ ಸರ್ಕಾರ ಯಾವ ರೀತಿ ಯೋಚಿಸಿತೋ ಏನೋ, ಆಗಸ್ಟ್ 17ರಂದು ಮತ್ತೊಂದು ಇ-ಮೇಲ್ ಕಳುಹಿಸಿ ಜುಲೈ 31ಕ್ಕೆ ಅನ್ವಯವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಮುಚ್ಚಿ. ಸರ್ಕಾರದ ವತಿಯಿಂದ ಸಹಾಯವಾಣಿ ಸಿಬ್ಬಂದಿ ಮುಂದುವರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಆಗಸ್ಟ್ 20ರಂದು ರಾಜ್ಯದ ಎಲ್ಲ ಸಹಾಯವಾಣಿ ಕೇಂದ್ರಗಳ ಸಿಬ್ಬಂದಿಯನ್ನು ರಿಲೀವ್ ಮಾಡಲಾಗಿದೆ. ರಾಜ್ಯದ ಪ್ರತಿ ತಾಲೂಕುಗಳಲ್ಲಿ ಇಬ್ಬರಂತೆ ಸುಮಾರು ಒಂದೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಇವರೀಗ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

ಸಹಾಯವಾಣಿಗೆ ಕೆಲಸವಿತ್ತು: ಅತಿ ಹೆಚ್ಚು ಸಕಾಲ ಅರ್ಜಿಗಳು ಬರುತ್ತಿರುವುದು ಕಂದಾಯ ಇಲಾಖೆಗೆ. ಈ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಸಲ್ಲಿಸಲು ಅಲ್ಲೊಂದು ಸಹಾಯವಾಣಿ ಇರುತ್ತಿತ್ತು. ಇಬ್ಬರು ಸಿಬ್ಬಂದಿ ಅವರಿಗೆ ಅರ್ಜಿ ಸಲ್ಲಿಸುವುದು ಹೇಗೆಂದು ಮಾರ್ಗದರ್ಶನ ನೀಡುತ್ತಿದ್ದರು. ಆನ್‌ಲೈನ್ ಮೂಲಕ ಅರ್ಜಿಯನ್ನೂ ಸಲ್ಲಿಸುತ್ತಿದ್ದರು.
ನಂತರ ನಿಗದಿತ ದಿನದೊಳಗೆ ಅರ್ಜಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟವರ ದುಂಬಾಲು ಬೀಳುತ್ತಿದ್ದರು. ಕನಿಷ್ಠ ಒಂದು ದಿನ ಮುಂಚೆಯೇ ಅರ್ಜಿ ವಿಲೇವಾರಿ ಮಾಡಲು ಯತ್ನಿಸುತ್ತಿದ್ದರು. ಇಷ್ಟೇ ಅಲ್ಲ, ಬೇರೆ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳನ್ನು ಸಲ್ಲಿಸುವುದು ಹೇಗೆಂದು ತಿಳಿಸಲಾಗುತ್ತಿತ್ತು.

ಮುಂದೇನು?: ಸಹಾಯವಾಣಿ ಸಿಬ್ಬಂದಿ ಇಚ್ಛಿಸಿದಲ್ಲಿ ಅವರನ್ನು ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಸರ್ಕಾರ ಬಳಸಿಕೊಳ್ಳಲು ಸಿದ್ಧವಾಗಿದೆ. ಆದರೆ ಇದಕ್ಕಾಗಿ ಇನ್ನು ಮುಂದೆ ಸಕಾಲ ಸಹಾಯಕರು ಸ್ವಂತ ಖರ್ಚಿನಲ್ಲಿಯೇ ಕಂಪ್ಯೂಟರ್ ಮತ್ತಿತರ ಪರಿಕರಗಳನ್ನು ಹೊಂದಬೇಕು ಹಾಗೂ ಇಲಾಖೆ ತಾಲೂಕು ಮುಖ್ಯಸ್ಥರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಗಿದೆ.
ಕೆಲಸ ಸಿಗದೇ ಕೊನೆಗೆ ಸಹಾಯವಾಣಿ ಕೇಂದ್ರಕ್ಕೆ ನೇಮಕವಾಗಿದ್ದ ಈ ಸಿಬ್ಬಂದಿ ಸುಮಾರು 50 ಸಾವಿರದವರೆಗೆ ವ್ಯಯಿಸಿ, ಸ್ವಂತ ಕಂಪ್ಯೂಟರ್ ಹೊಂದುವುದು ಹೇಗೆಂದು ಚಿಂತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲ ಅರ್ಜಿಗಳೂ ಆನ್‌ಲೈನ್ ಮೂಲಕವೇ ಸಲ್ಲಿಸುವ ಕಾಲ ಬರುವುದರಿಂದ ಸರ್ಕಾರವೇ ಇವರ ನೆರವಿಗೆ ಬರಬೇಕಿದೆ.
ಸಹಾಯವಾಣಿ ಸಿಬ್ಬಂದಿ ಕಷ್ಟಗಳು ಒಂದು ರೀತಿಯಾದರೆ, ಈಗ ಈ ಕೆಲಸ ಮತ್ತೆ ಕಂದಾಯ ಇಲಾಖೆಯಲ್ಲಿ ಹಾಲಿ ಇರುವ ಸಿಬ್ಬಂದಿಯೇ ಹೊರಬೇಕಾಗಿರುವುದರಿಂದ ಅವರೂ ಗೊಣಗುವಂತಾಗಿದೆ.

ಸಕಾಲ ಸಹಾಯವಾಣಿ ಕೇಂದ್ರಗಳನ್ನು ಉನ್ನತೀಕರಿಸುವ ದಿಸೆಯಲ್ಲಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸೆ.15ರ ವೇಳೆಗೆ ಹೊಸ ರೂಪದಲ್ಲಿ ಮತ್ತೆ ಆರಂಭವಾಗುತ್ತವೆ. ಮುಂದಿನ ವಾರ ಸಿಬ್ಬಂದಿ ಭರ್ತಿಗೆ ಪ್ರಕಟಣೆ ನೀಡಿ, ನಂತರ ಅವರಿಗೆ ತರಬೇತಿ ನೀಡಲಾಗುವುದು. ಈಗಿರುವವರಲ್ಲಿ ಸಮರ್ಥ ಕಂಪ್ಯೂಟರ್ ಜ್ಞಾನ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸಬಹುದು. ನಂತರವೂ ಅವರು ಡಿಸಿ, ತಹಸೀಲ್ದಾರ್ ಕಚೇರಿಯಲ್ಲಿಯೇ ಇರುತ್ತಾರೆ. ಸೇವೆಗೆ ಶುಲ್ಕವನ್ನೂ ನಿಗದಿಪಡಿಸಲಾಗುತ್ತದೆ.
- ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement