ಇನ್ಪುಟ್ ಸಬ್ಸಿಡಿ ಬಿಡುಗಡೆಯಲ್ಲಿ ವ್ಯತ್ಯಯ
ಚಿಕ್ಕಮಗಳೂರು: ತಪ್ಪು ಮಾಹಿತಿ, ನಿಖರವಾಗಿ ಫಲಾನುಭವಿಗಳನ್ನು ಗುರುತಿಸುವಲ್ಲಿ ಅಧಿಕಾರಿಗಳು ಮಾಡಿರುವ ತಪ್ಪಿಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ಪುಟ್ ಸಬ್ಸಿಡಿ ಅನುದಾನ ವಿತರಣೆಯಲ್ಲಿ ವ್ಯತ್ಯಯವಾಗಿದೆ.
ಕೆಲವು ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆಯಾಗಿದ್ದರೆ ಮತ್ತೆ ಕೆಲವು ಜಿಲ್ಲೆಗಳಿಗೆ ಕಡಿಮೆ ಅನುದಾನ ಬಿಡುಗಡೆಯಾಗಿರುವ ಅಂಶ ಬೆಳಕಿಗೆ ಬಂದಿದೆ.
ರಾಜ್ಯದ 28 ಜಿಲ್ಲೆಗಳ ಪೈಕಿ ಚಿಕ್ಕಮಗಳೂರು, ಬಾಗಲಕೋಟೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದರೆ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕಡಿಮೆ ಅನುದಾನ ಬಿಡುಗಡೆಯಾಗಿದೆ. ಹೆಚ್ಚುವರಿ ಬಿಡುಗಡೆಯಾಗಿರುವ ಅನುದಾನವನ್ನು ಕೊರತೆ ಇರುವ ಜಿಲ್ಲೆಗಳಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆಗಸ್ಟ್ 8 ರಂದು ಆದೇಶಿಸಿದೆ.
ಅದರಂತೆ ಚಿಕ್ಕಮಗಳೂರಿಗೆ ಜಿಲ್ಲೆಗೆ ಬಿಡುಗಡೆಯಾಗಿದ್ದ 17.61 ಕೋಟಿ ಪೈಕಿ 6.46 ಕೋಟಿ, ಬಾಗಲಕೋಟೆಗೆ ಬಿಡುಗಡೆಯಾಗಿದ್ದ 6.61 ಕೋಟಿಯಲ್ಲಿ 1.34 ಕೋಟಿಯನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲು ಡಿಸಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಗೆ ಬಂದಿದ್ದ 33.85 ಕೋಟಿಯಲ್ಲಿ 3.38 ಕೋಟಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ವರ್ಗಾಯಿಸಲು ತಿಳಿಸಲಾಗಿದೆ.
ಮಾನದಂಡವೇನು?: ರಾಜ್ಯ ಸರ್ಕಾರ ಬರಗಾಲ ಪೀಡಿತ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದ ಇನ್ಪುಟ್ ಸಬ್ಸಿಡಿಯನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮಂಜೂರು ಮಾಡಬೇಕೆಂದಿದೆ. ಸುವರ್ಣಭೂಮಿ, ಅಂಗಮಾರಿಯಿಂದ ಹಾನಿಗೊಳಗಾದ ಆಲೂಗೆಡ್ಡೆ, ಅಡಕೆ ಬೆಳೆಗಾರರಿಗೆ ಇತರೆ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ ಅವರನ್ನು ಹೊರತು ಪಡಿಸಿ ಇನ್ನುಳಿದ ರೈತರಿಗೆ ಇನ್ಪುಟ್ ಸಬ್ಸಿಡಿ ನೀಡಲು ತಿಳಿಸಲಾಗಿದೆ.
ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಡಿಸಿಯ ಪಿ.ಡಿ. ಖಾತೆಗೆ ಜಮಾವಾಗುತ್ತದೆ. ನಂತರ ಆ ಹಣವನ್ನು ತಾಲೂಕು ತಹಶೀಲ್ದಾರ್ಗೆ ಬಿಡುಗಡೆ ಮಾಡಲಾಗುವುದು. ತಹಶೀಲ್ದಾರ್ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳ ಪಟ್ಟಿ ಪಡೆದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಾರೆ. 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರನ್ನು ಕೃಷಿ ಇಲಾಖೆ ಸಣ್ಣ ಮತ್ತು ಅತಿ ಸಣ್ಣ ರೈತರೆಂದು ಗುರುತು ಮಾಡಲಿದೆ. ಅದೇ ರೀತಿ ತೋಟಗಾರಿಕೆ ಇಲಾಖೆ ಎರಡೂವರೆ ಎಕರೆ ತೋಟವನ್ನು ಹೊಂದಿರುವ ರೈತರನ್ನು ಸಣ್ಣ ಮತ್ತು ಅತಿ ಸಣ್ಣ ರೈತರೆಂದು ಗುರುತಿಸಲಿದೆ.
ಅಧಿಕಾರ ನಿರ್ಲಕ್ಷ್ಯ: ಸಾಮಾನ್ಯವಾಗಿ ಎರಡೂವರೆ ಎಕರೆ ತೋಟವನ್ನು ಹೊಂದಿರುವ ಬೆಳೆಗಾರರ ಸಂಖ್ಯೆ ತೀರ ವಿರಳ. ಅದುದರಿಂದ ತೋಟಗಾರಿಕೆ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನ ಹಿಂಪಡೆಯಲು ಸರ್ಕಾರ ಮುಂದಾಗಿದೆ. ಅಧಿಕಾರಿಗಳು ನಿಖರ ಮಾಹಿತಿ ನೀಡಿದ್ದರೆ, ಒಂದು ಜಿಲ್ಲೆಗೆ ಹೆಚ್ಚುವರಿ, ಮತ್ತೊಂದು ಜಿಲ್ಲೆಗೆ ಕಡಿಮೆ ಅನುದಾನ ಮಂಜೂರಾಗುತ್ತಿರಲಿಲ್ಲ.
ವಿತರಣೆಯಾಗಿಲ್ಲ: ರಾಜ್ಯ ಸರ್ಕಾರ ಕಳೆದ ಮಾರ್ಚ್ ಅಂತ್ಯಕ್ಕೆ ಬರ ಪೀಡಿತ ಪ್ರದೇಶಕ್ಕೆ ಇನ್ಪುಟ್ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿತ್ತು. ಆದರೆ, ನಂತರದಲ್ಲಿ ಚುನಾವಣೆ ಬಂದಿದ್ದರಿಂದ ಈ ಅನುದಾನವನ್ನು ರೈತರಿಗೆ ಬಿಡುಗಡೆ ಮಾಡಲು ಆಗಿರಲಿಲ್ಲ. ಕಳೆದ ತಿಂಗಳಿಂದ ರೈತರಿಗೆ ಇನ್ಪುಟ್ ಸಬ್ಸಿಡಿ ವಿತರಿಸಲಾಗುತ್ತಿದ್ದು, ಈ ಪ್ರಕ್ರಿಯೆ ಮುಂದುವರಿದಿದೆ.
ಅನುದಾನ ಪೂರ್ಣ ಪ್ರಮಾಣದಲ್ಲಿ ವಿತರಣೆಯಾಗುವ ಮೊದಲೇ ಸರ್ಕಾರ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬಂದು, ಅದನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲು ತಿಳಿಸಿರುವುದು ಅವೈಜ್ಞಾನಿಕ ಕ್ರಮ ಎಂಬ ಆರೋಪ ಕೇಳಿ ಬರುತ್ತಿದೆ.
ಹೆಚ್ಚುವರಿ ಅನುದಾನವಿರುವ ಜಿಲ್ಲೆಗಳು, ಕೊರತೆ ಜಿಲ್ಲೆಗಳು, ವರ್ಗಾವಣೆ ಮಾಡಬೇಕಾದ ಮೊತ್ತ (ಕೋಟಿ ಗಳಲ್ಲಿ)
ಚಿಕ್ಕಮಗಳೂರು ಮೈಸೂರು 6.46
ಬಾಗಲಕೋಟೆ ಮೈಸೂರು 1.34
ಚಿತ್ರದುರ್ಗ ಚಿಕ್ಕಬಳ್ಳಾಪುರ 3.38
ಏನಿದು ಇನ್ಪುಟ್ ಸಬ್ಸಿಡಿ?
ಕಳೆದ ವರ್ಷದಲ್ಲಿ ಸಕಾಲದಲ್ಲಿ ಮಳೆ ಬಾರದ ಕಾರಣ ರಾಜ್ಯದ 28 ಜಿಲ್ಲೆಗಳ ಪೈಕಿ 157 ತಾಲೂಕುಗಳಲ್ಲಿ ಬರ ಬಂದು ಬೆಳೆ ಹಾನಿಯಾಗಿತ್ತು. ಬರಪೀಡಿತ ಪ್ರದೇಶಗಳಲ್ಲಿ ಬೆಳೆ ಹಾನಿಯಾದ ಕಾರಣ ರೈತರಿಗೆ ತಾತ್ಕಾಲಿಕ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಇನ್ಪುಟ್ ಸಬ್ಸಿಡಿ ಎನ್ನುತ್ತಾರೆ. ಎಕರೆಗೆ ಕನಿಷ್ಠ 500-2000ದವರೆಗೆ ನೆರವು ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2012-13ನೇ ಸಾಲಿನಲ್ಲಿ 327.72 ಕೋಟಿ ಇನ್ಪುಟ್ ಸಬ್ಸಿಡಿ ಬಿಡುಗಡೆ ಮಾಡಿತ್ತು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಇನ್ಪುಟ್ ಸಬ್ಸಿಡಿ ಅನುದಾನ ರೈತರಿಗೆ ಮಂಜೂರು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ ಮೂರು ತಾಲೂಕುಗಳಲ್ಲಿ ಪ್ರಗತಿಯಲ್ಲಿದೆ.
- ಎಂ. ರಾಜು, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
- ಆರ್. ತಾರಾನಾಥ್