ಬಳ್ಳಾರಿಯಲ್ಲಿ ಬಾಂಗ್ಲಾದೇಶದ ಬಾಲಕಿಯರ ಮಾರಾಟ ಜಾಲ
ಕ.ಪ್ರ.ವಾರ್ತೆ, ಬಳ್ಳಾರಿ, ಆ. 25-
ಬಾಂಗ್ಲಾದೇಶದ ಬಾಲಕಿಯರು 20-30 ಸಾವಿರಕ್ಕೆ ಮಾರಾಟ!
ಇದು ಆಶ್ಚರ್ಯ ಎನಿಸಿದರೂ ಸತ್ಯ. ಅದು ನಡೆದದ್ದು ಬಳ್ಳಾರಿಯಲ್ಲಿ. ವೇಶ್ಯಾವಾಟಿಕೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ದಂಧೆ ಪೊಲೀಸರ ತನಿಖೆಯಿಂದ ಹೊರಬಿದ್ದಿದ್ದು, ಈ ಜಾಲ ಬಾಂಗ್ಲಾದೇಶದ ಢಾಕಾ- ಕೋಲ್ಕತಾದಿಂದ ಬಳ್ಳಾರಿಯವರೆಗೂ ಹಬ್ಬಿರುವ ಶಂಕೆ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಬಳ್ಳಾರಿ ಇತಿಹಾಸದಲ್ಲಿಯೇ ದೊಡ್ಡದು ಎನ್ನಬಹುದಾದ ಬಳ್ಳಾರಿಯ ರೆಡ್ ಲೈಟ್ ಏರಿಯಾ ಎಂದು ಕರೆಯಲ್ಪಡುವ ಡಿಸಿ ನಗರದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 78 ಜನರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರಿಗೆ ವಿಚಾರಣೆ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿರುವವರ 23 ಬಾಲಕಿಯರಲ್ಲಿ ಮೂವರು ಬಾಂಗ್ಲಾದೇಶದವರು ಎಂಬ ಮಾಹಿತಿ ಸಿಕ್ಕಿತ್ತು.
ಕೇವಲ 30 ಸಾವಿರಕ್ಕೆ ಮಾರಾಟ: 78 ಜನರಲ್ಲಿ 34 ಜನರ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರು 44 ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿದ್ದರು. ಇವರಲ್ಲಿ 23 ಬಾಲಕಿಯರನ್ನು ಬೆಂಗಳೂರಿನ ಬಾಲಮಂದಿರ, ಇನ್ನುಳಿದಂತೆ 21 ಮಹಿಳೆಯರನ್ನು ಬಳ್ಳಾರಿಯ ಸ್ತ್ರೀ ಸೇವಾನಿಕೇತದಲ್ಲಿ ಇಟ್ಟಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ 20 ಮಹಿಳೆಯರನ್ನು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಬಾಂಗ್ಲಾದೇಶದ 14, 16, 17 ವರ್ಷದ ಮೂವರು ಬಾಲಕಿಯರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅವರನ್ನು ಕೇವಲ 20 ರಿಂದ 30 ಸಾವಿರಕ್ಕೆ ಮಾರಿರುವುದು ಪತ್ತೆಯಾಗಿದೆ. ಈ ಬಾಲಕಿಯರಿಗೆ ತಾವು ಎಲ್ಲಿದ್ದೇವೆ ಎಂಬ ಮಾಹಿತಿಯೂ ತಿಳಿದಿಲ್ಲ.
ಇಡೀ ಜೀವನವೇ ಬರಡು: ವಿದೇಶಿ ಬಾಲಕಿಯರನ್ನು ಬ್ರೋಕರ್‌ಗಳು ತಂದು ಇಂತಿಷ್ಟು ಹಣಕ್ಕೆಂದು ಮಾರಿ ಹೋಗುತ್ತಾರೆ. ಇವರ ಜೀವನ ವೇಶ್ಯಾವಾಟಿಕೆಗೇ ಮೀಸಲು. ಅದೃಷ್ಟವಶಾತ್ ಬಳ್ಳಾರಿ ಪೊಲೀಸರು ಜಸ್ಟೀಸ್ ಆ್ಯಂಡ್ ಕೇರ್ ಎನ್‌ಜಿಒ ಮಾಹಿತಿಯ ಮೇರೆಗೆ ದಾಳಿ ಮಾಡಿ, ಬಾಲಕಿಯರನ್ನು ರಕ್ಷಿಸಿದ್ದಾರೆ.
ಬಳ್ಳಾರಿಯ ವೇಶ್ಯಾವಾಟಿಕೆ ಜಾಲವು ಕೇವಲ ಬಳ್ಳಾರಿಗೆ, ರಾಜ್ಯಕ್ಕೆ ಸೀಮಿತವಾಗಿರದೆ, ಕೋಲ್ಕತಾವರೆಗೂ ಹಬ್ಬಿದೆ. ಇಲ್ಲಿನ ಡಿಸಿ ನಗರದ ಬ್ರೋಕರ್‌ಗಳ ಬೇಡಿಕೆಗೆ ಅನುಸಾರವಾಗಿ ಕೋಲ್ಕತಾದ ಬ್ರೋಕರ್‌ಗಳು ಇವರಿಗೆ ಬಾಂಗ್ಲಾದೇಶದ ಬಾಲಕಿಯರನ್ನು ಮಾರಿದ್ದು, ಇವರ ಬಳಿ ಪಾಸ್‌ಪೋರ್ಟ್ ಸಹ ಇಲ್ಲ. ಆ ದೇಶದ ಬಡ ಯುವತಿಯರನ್ನು ಇಂಥ ದಂಧೆಗೆ ಬಳಸಿಕೊಂಡಿರಬಹುದು ಅಥವಾ ಅಲ್ಲಿಂದ ಬಲವಂತವಾಗಿ ಕರೆತಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೋಲ್ಕತಾ ಬ್ರೋಕರ್‌ಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
ಸರ್ಕಾರ ನೀಡಿದ ಮನೆಯಲ್ಲಿ ದಂಧೆ: ಬಳ್ಳಾರಿಯ ಬೆಳಗಲ್ ರಸ್ತೆಯಲ್ಲಿರುವ ಡಿಸಿ ನಗರದಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇನ್ನು ಡಿಸಿ ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಸರ್ಕಾರದಿಂದ ಕಟ್ಟಿಸಿಕೊಂಡಿರುವ ಜನತಾ ಮನೆಗಳಲ್ಲಿ! ಪೊಲೀಸರು ಈ ಮನೆಗಳನ್ನು ಗುರುತಿಸಿ, ಅವುಗಳನ್ನು ಸರ್ಕಾರ ಹಿಂಪಡೆಯಬೇಕೆಂದು ಜಿಲ್ಲಾ ಎಸ್ಪಿ ಡಾ. ಚೇತನಸಿಂಗ್ ರಾಥೋರ್ ಅವರು ಜಿಲ್ಲಾಧಿಕಾರಿ ಬಿಸ್ವಾಸ್ ಅವರಿಗೆ ಪತ್ರ ಬರೆದು, ಡಿಸಿ ನಗರದಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ.
- ಶಶಿಧರ ಮೇಟಿ