ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಿಂದೂ ವಿಶ್ವಕೋಶ ಇಂದು ಲೋಕಾರ್ಪಣೆ

ಹಿಂದೂ ಧರ್ಮದ ಸಮಗ್ರ ಮಾಹಿತಿ ನೀಡುವ ಬೃಹತ್ ವಿಶ್ವಕೋಶ 'ಎನ್‌ಸೈಕ್ಲೋಪೀಡಿಯಾ...

Vishwanath S
Updated On : 26 Aug 2013, 12:35 pm

ವಾಷಿಂಗ್ಟನ್: ಹಿಂದೂ ಧರ್ಮದ ಸಮಗ್ರ ಮಾಹಿತಿ ನೀಡುವ ಬೃಹತ್ ವಿಶ್ವಕೋಶ 'ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂಯಿಸಂ' ಅಮೆರಿಕದಲ್ಲಿ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.
25 ವರ್ಷಗಳ ಪರಿಶ್ರಮದ ಬಳಿಕ ಈ ಸಮಗ್ರ ವಿಶ್ವಕೋಶವನ್ನು ಸಿದ್ಧಪಡಿಸಲಾಗಿದೆ. ಈ ಹಿಂದೂ ವಿಶ್ವಕೋಶದ ಹಿಂದೆ ಒಂದು ಸಾವಿರ ಸಂಶೋಧಕರ ಪರಿಶ್ರಮವಿದೆ. 11 ಸಂಪುಟಗಳಲ್ಲಿ ಹೊರಬರುತ್ತಿರುವ ಈ ವಿಶ್ವಕೋಶ ಹಿಂದೂ ಆಧ್ಯಾತ್ಮಿಕ ನಂಬಿಕೆಗಳು, ಆಚರಣೆಗಳು, ಸಿದ್ಧಾಂತಗಳಿಗೆ ಸಂಬಂಧಿಸಿದ 7 ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ಒಳಗೊಂಡಿದೆ. ಈ ಲೇಖನಗಳು ಭಾರತದ ಇತಿಹಾಸ, ನಾಗರಿಕತೆ, ಭಾಷೆ ಮತ್ತು ತತ್ವಸಿದ್ಧಾಂತ, ವಾಸ್ತುಶೈಲಿ, ಕಲೆ, ಸಂಗೀತ ಮತ್ತು ನೃತ್ಯ, ಔಷಧ, ವಿಜ್ಞಾನ, ಸಾಮಾಜಿಕ ಸಂರಚನೆ, ಧರ್ಮ, ಆಧ್ಯಾತ್ಮ ಮತ್ತು ಹಿಂದೂ ಮಹಿಳೆಯರ ವಿಚಾರಗಳ ಕುರಿತು ಬೆಳಕು ಚೆಲ್ಲಲಿವೆ.
ಇದರೊಂದಿಗೆ, ಸಾವಿರಕ್ಕೂ ಹೆಚ್ಚು ಫೋಟೋಗಳು, ರೇಖಾಚಿತ್ರಗಳು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೊಸ ಜೀವ ನೀಡುತ್ತವೆ. ಈ ವಿಶ್ವಕೋಶವನ್ನು ಇಂಡಿಯಾ ಹೆರಿಟೇಜ್ ರಿಸರ್ಚ್ ಫೌಂಡೇಷನ್ ಸಂಪಾದಿಸಿದ್ದರೆ, ಮಂಡಲ ಪಬ್ಲಿಕೇಷನ್ಸ್ ಮುದ್ರಿಸಿದೆ. ದಕ್ಷಿಣ ಕರೋಲಿನಾ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್ ಹಾಲ್ ಫ್ರೆಂಚ್ ಈ ವಿಶ್ವಕೋಶದ ಸಂಪಾದಕರಲ್ಲೊಬ್ಬರು. ಇದೊಂದು ಮಾಹಿತಿಪೂರ್ಣ, ವಿಶ್ವಾಸಾರ್ಹ ವಿಶ್ವಕೋಶವಾಗಿದ್ದು, ಪೂರ್ವ ಮತ್ತು ಪಶ್ಚಿಮದ ಪಾಂಡಿತ್ಯವನ್ನು ಜತೆಗೂಡಿಸಿದ ಹೆಗ್ಗಳಿಕೆ ವಿಶ್ವಕೋಶ ಸಿದ್ಧಪಡಿಸುವ ಹಿಂದಿನ ಸಂಶೋಧನೆಗೆ ಸಲ್ಲಬೇಕು ಎನ್ನುತ್ತಾರೆ ಹಾಲ್ ಫ್ರೆಂಚ್.
ಕರೋಲಿನಾ ವಿವಿಯಲ್ಲಿ: ದಕ್ಷಿಣ ಕರೋಲಿನಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಈ ವಿಶ್ವಕೋಶ ಬಿಡುಗಡೆಯಾಗಲಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ ಸರ್ಕಾರ ಸಮಿತಿಯ ಅಧ್ಯಕ್ಷ ರಾಜೇಂದ್ರ ಪಚೌರಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಶ್ವಕೋಶವು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ಸಮಗ್ರ ಸಂಪಾದನೆಯಾಗಿದೆ. ಮಾನವ ಜಗತ್ತಿಗೆ ಇದು ಅತಿ ದೊಡ್ಡ ಉಡುಗೊರೆಯಾಗಿದೆ.
-  ಡಾ. ಮೀರಾ ನರಸಿಂಹನ್,
ಕರೋಲಿನಾ ವಿವಿಯ ಪ್ರೊಫೆಸರ್

ವಿಶೇಷತೆಗಳು
- 25 ವರ್ಷ ಪರಿಶ್ರಮದ ಬಳಿಕ ಸಿದ್ಧಪಡಿಸಿದ ವಿಶ್ವಕೋಶ
- 1 ಸಾವಿರ ಸಂಶೋಧಕರ ಪರಿಶ್ರಮದ ಫಲ
- 11 ಸಂಪುಟ, 7 ಸಾವಿರ ಲೇಖನಗಳು
- ಪ್ರತಿ ಸಂಪುಟದಲ್ಲಿ 600ರಿಂದ 700 ಪುಟಗಳು
- ಮೊದಲಿಗೆ 3 ಸಾವಿರ ಪ್ರತಿ ಮುದ್ರಣ
- ಮೊದಲ ಪ್ರತಿ ಕರೋಲಿನಾ ವಿವಿಗೆ ಅರ್ಪಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement