ರೇಪಿಸ್ಟ್‌ಗಳಿಗೆ ವಿನಾಯ್ತಿ ಬೇಡ
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸುವಾಗ ಯಾವುದೇ ಕಾರಣಕ್ಕೂ ಮೃದು ಧೋರಣೆ ತಳೆಯಬಾರದು...
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸುವಾಗ ಯಾವುದೇ ಕಾರಣಕ್ಕೂ ಮೃದು ಧೋರಣೆ ತಳೆಯಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಅತ್ಯಾಚಾರಿಯ ನಡುವಿನ ಸಂಧಾನವನ್ನು ಮುಂದಿಟ್ಟುಕೊಂಡು ಆರೋಪಿಗಳಿಗೆ ಜೈಲು ಶಿಕ್ಷೆಯಲ್ಲಿ ವಿನಾಯ್ತಿ ನೀಡಬಾರದು. ಅತ್ಯಾಚಾರ ಸಮಾಜ ವಿರೋಧಿ ಅಪರಾಧ. ಇಲ್ಲಿ ಸಂಧಾನಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆರೋಪಿ ಹಾಗೂ ಅತ್ಯಾಚಾರಕ್ಕೊಳಗಾದಾಕೆಯ ಧರ್ಮ, ಜಾತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು, ಕ್ರಿಮಿನಲ್ ವಿಚಾರಣೆಯ ವಿಳಂಬ, ಅತ್ಯಾಚಾರ ಮಾಡಿದವಳನ್ನೇ ಮದುವೆಯಾಗುವ ಪ್ರಸ್ತಾಪ ಅಥವಾ ಅತ್ಯಾಚಾರಕ್ಕೊಳಗಾದಾಕೆ ಮದುವೆಯಾಗಿ ಜೀವನದಲ್ಲಿ ಸುಖವಾಗಿರುವುದು ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಲು ಆಧಾರವಾಗಿ ಪರಿಗಣಿಸಬಾರದು. ಈ ರೀತಿಯ ಪರಿಗಣನೆ ಸುರಕ್ಷಿತವಲ್ಲ. ಈ ರೀತಿಯ ಸಂಧಾನ ಒತ್ತಡದಿಂದ ಮಾಡಿಕೊಂಡಿರುವ ಸಾಧ್ಯತೆ ಇರುತ್ತದೆ. ಅತ್ಯಾಚಾರಕ್ಕೆ ಸಂಬಂಧಿಸಿ ಕಠಿಣ ಕಾನೂನು ಇದ್ದರೂ ನ್ಯಾಯಾಧೀಶರು ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ಆರೋಪಿಗಳ ವಿರುದ್ಧ ಮೃದು ನಿಲುವು ತಳೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಸುಪ್ರೀಂ ಹೇಳಿದೆ.