ಅಂತೂ ಸಿಕ್ಕ ಯಾಸೀನ್
ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸೀನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ (30) ಪೊಲೀಸರ ಬಲೆಗೆ ಬಿದ್ದಿದ್ದಾನೆ...
ಪಿಟಿಐ , ನವದೆಹಲಿ/ಪಟನಾ , ಆ.29
ದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸೀನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ (30) ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೇಹುಗಾರಿಕಾ ದಳ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಪರಮ ಪಾತಕಿಯನ್ನು ಬಂಧಿಸಲಾಗಿದೆ. ಬಿಹಾರಕ್ಕೆ ಹೊಂದಿಕೊಂಡಿರುವ ನೇಪಾಳ ಗಡಿಯಲ್ಲಿ ಬುಧವಾರ ರಾತ್ರಿ ಆತನನ್ನು ಬಂಧಿಸಲಾಗಿದೆ. ಶುಕ್ರವಾರ ಆತನನ್ನು ನವದೆಹಲಿಗೆ ಕರೆ ತರಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹೇಳಿದ್ದಾರೆ. ಯಾಸೀನ್ ಜತೆಗೆ ಆತನ ಆಪ್ತ ಅಸಾದುಲ್ಲಾ ಅಖ್ತರ್ ಅಲಿಯಾಸ್ 'ಹದ್ದಿ' ಎಂಬಾತನನ್ನೂ ಬಂಧಿಸಲಾಗಿದೆ.
40 ಪ್ರಕರಣಗಳಲ್ಲಿ ಭಾಗಿ
2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಸ್ಫೋಟ, ಪುಣೆಯ ಜರ್ಮನಿ ಬೇಕರಿ ಸ್ಫೋಟ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಂಭವಿಸಿದ 40ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳಲ್ಲಿ ಯಾಸೀನ್ ಭಟ್ಕಳ್ ಭಾಗಿಯಾಗಿದ್ದಾನೆ.
2008 ರಿಂದ ನಾಪತ್ತೆ
ಪ್ರಮುಖ ಸ್ಫೋಟಗಳಲ್ಲಿ ಪಾತ್ರ ವಹಿಸಿದ ಯಾಸೀನ್ 2008ರಿಂದ ನಾಪತ್ತೆಯಾಗಿದ್ದ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಭಾರತದ ತನಿಖಾ ಸಂಸ್ಥೆಗಳಿಗೆ ಆತ ಬೇಕಾಗಿದ್ದ. ಪ್ರತಿಯೊಂದು ಸ್ಫೋಟ ಪ್ರಕರಣಗಳಲ್ಲಿ ಭಟ್ಕಳ್ ಸಹೋದರರು ಸ್ಥಾಪಿಸಿದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಪಾತ್ರ ವಹಿಸಿದೆ. ಆದರೆ, ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳಿಗೆ ಅವರು ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು.
ಆರೋಪಿ ಯಾಸಿನ್ ಭಟ್ಕಳ್ ಬಂಧಿಸುವಲ್ಲಿ ರಾಜ್ಯ ಪೊಲೀಸರು ನೇರವಾಗಿ ತನಿಖಾ ತಂಡದಲ್ಲಿ ಭಾಗಿಯಾಗಿಲ್ಲ. ಬದಲಾಗಿ ರಾಜ್ಯ ಗುಪ್ತಚರ ವಿಭಾಗದ ಪೊಲೀಸ್ ಅಧಿಕಾರಿಗಳು ಬೇರೆ ರಾಜ್ಯಗಳ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರು. ಹಾಗೂ ನಮ್ಮ ಬಳಿ ಇದ್ದ ಮಾಹಿತಿ, ಆತನ ಚಲನವಲನಗಳ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ನೀಡಲಾಗಿತ್ತು.
- ಲಾಲ್ ರುಖುಮಾ ಪಚಾವೋ, ರಾಜ್ಯ ಪೊಲೀಸ್ ಮಹಾನಿರ್ದೇಶಕ
ಪ್ರಮುಖ ಸ್ಫೋಟಗಳು
2006
ಮುಂಬೈ ಸ್ಥಳೀಯ ರೈಲುಗಳಲ್ಲಿ ಸ್ಫೋಟ
2008
ದೆಹಲಿ ಸರಣಿ ಸ್ಫೋಟ
ಅಹಮದಾಬಾದ್ ಸ್ಫೋಟ
ಜೈಪುರ ಸ್ಫೋಟ
2010
ವಾರಾಣಸಿ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ
2011
ಮುಂಬೈ