ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರತಿಪಕ್ಷ ನಾಯಕರಾಗಿ ಎಚ್‌ಡಿಕೆ ಮುಂದುವರಿಕೆ

Vishwanath S
Updated On : 30 Aug 2013, 12:15 pm

ಕ.ಪ್ರ.ವಾರ್ತೆ,  ಬೆಂಗಳೂರು,  ಆ. 29-
ಶಾಸಕರ ಒತ್ತಾಯಕ್ಕೆ ಮಣಿದಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ನನಗೆ ಇಷ್ಟವಿಲ್ಲದಿದ್ದರೂ ಶಾಸಕರ ಒತ್ತಡಕ್ಕೆ ಮಣಿದು ಮುಂದುವರಿಯುವ ನಿರ್ಧಾರವನ್ನು ಒಲ್ಲದ ಮನಸ್ಸಿನಿಂದ ಕೈಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಮುಂದಿನ ಚುನಾವಣೆಗಳಲ್ಲಿ ಮತೀಯ ಪಕ್ಷಗಳೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳದಿರಲು ಜೆಡಿಎಸ್ ನಿರ್ಧರಿಸಿದೆ.
ಮುಂದಿನ ಲೋಕಸಭೆ ಚುನಾವಣೆ ಅಥವಾ ಇನ್ನಿತರೆ ಯಾವುದೇ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಒಳ- ಹೊರ ಒಪ್ಪಂದ, ಬಾಹ್ಯ ಬೆಂಬಲ, ಮೈತ್ರಿಯಂತಹ ಯಾವುದೇ ಚಟುವಟಿಕೆಗೆ ಅವಕಾಶ ಇಲ್ಲ. ಎಲ್ಲ 28 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಬೇಕು ಎಂದು ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆದರೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನದ ರಾಜಿನಾಮೆಯನ್ನು ಅಂಗೀಕರಿಸಲಾಗಿದೆ.
 ಪಕ್ಷ ಬಿಟ್ಟು ಹೋಗುವ ಕುರುಹು ತೋರಿದ್ದ ಜಮೀರ್ ಅಹಮದ್ ಮಾತು ಬದಲಾಯಿಸಿದ್ದು, ಜೆಡಿಎಸ್ ಇಲ್ಲದೆ ರಾಜಕಾರಣವೇ ಇಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಅವರು ಬುಧವಾರ ರಾತ್ರಿಯಿಡೀ ಸಂಧಾನ ನಡೆಸಿದ್ದರಿಂದ ಜಮೀರ್ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದಲ್ಲದೆ, ಜೆಡಿಎಸ್ ಬಿಡಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು ಶಾಸಕರು ಹಾಜರಾಗಿರಲಿಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಇಂಡೋನೇಷ್ಯಾ ಪ್ರವಾಸದಲ್ಲಿದ್ದಾರೆ ಎಂಬ ಸಬೂಬು ನೀಡಲಾಗಿದೆ. ಇನ್ನು, ರಾಷ್ಟ್ರಾಧ್ಯಕ್ಷರಿಗೆ ಬುಧವಾರವಷ್ಟೇ ರಾಜಿನಾಮೆ ನೀಡಿದ್ದ ಬಸವಕಲ್ಯಾಣದ ಮಲ್ಲಿಕಾರ್ಜುನ ಎಸ್.ಖೂಬ ದೆಹಲಿಗೆ ಹೋಗಿದ್ದಾರೆ ಎಂದು ಹೇಳಲಾಗಿದೆ.

ಗೌಡ-ಸ್ವಾಮಿ ಮುಖವಾಣಿ:
ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಥಮವಾಗಿ ಶಾಸಕಾಂಗ ನಾಯಕ ಸ್ಥಾನದ ಬಗ್ಗೆ ಪ್ರಸ್ತಾಪವಾಗಿ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಮುಖವಾಣಿ. ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರೂ ಅತಿ ಹೆಚ್ಚು ಮತಗಳನ್ನು ನಾವು ಗಳಿಸಿದ್ದೇವೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರತಿಪಕ್ಷ ನಾಯಕರು ಮುಂದಿನ ಮಂದಿನ ಮುಖ್ಯಮಂತ್ರಿ ಎಂಬ ಭಾವನೆ ಇದೆ. ಪ್ರತಿಪಕ್ಷ ನಾಯಕ ಮುಖ್ಯಮಂತ್ರಿಯ ನೆರಳಾಗಿರುತ್ತಾರೆ. ಹೀಗಾಗಿ, ಕುಮಾರಸ್ವಾಮಿ ಅವರನ್ನೇ ಶಾಸಕಾಂಗಪಕ್ಷದ ನಾಯಕನಾಗಿ ಮುಂದುವರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ಸಭೆ ನಂತರ ಎಂ.ಸಿ. ನಾಣಯ್ಯ ವಿವರ ನೀಡಿದರು.
ಮುಂದಿನ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ. ಬಿಜೆಪಿಯೊಂದಿಗೆ ನಾವು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಬಿಂಬಿಸಲಾಗಿತ್ತು. ನಮ್ಮ ಪಕ್ಷದ ನೀತಿಯಿಂದ ನಾವು ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್- ಬಿಜೆಪಿಯನ್ನು ಸಮಾನ ಅಂತರದಿಂದ ನೋಡಬೇಕು. ಅವರಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯಬೇಕು. ಯಾವುದೇ ಕಾರಣಕ್ಕೂ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಬಿಜೆಪಿಯೊಂದಿಗೆ ಒಳ- ಹೊರ, ಬಾಹ್ಯ, ಮೈತ್ರಿ ಎಂಬ ಮಾತೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಜಾತೀಯ ಮತ್ತು ಮತೀಯ ಪಕ್ಷಗಳೊಂದಿಗೆ ಮೈತ್ರಿ ಬೇಡ. ಇನ್ನು ಮುಂದೆ ಯಾವುದೇ ನೀತಿ, ನಿರ್ಣಯಗಳನ್ನು ಕೈಗೊಂಡರೆ ಅದು ಕೋರ್ ಕಮಿಟಿಯಲ್ಲೇ ನಿರ್ಧಾರವಾಗಬೇಕು ಎಂದು ನಿರ್ಧರಿಸಲಾಯಿತು ಎಂದು ನಾಣಯ್ಯ ಹೇಳಿದರು.
ಕೋರ್ ಕಮಿಟಿಯಲ್ಲಿ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 15-20 ಸದಸ್ಯರಿರುತ್ತಾರೆ. ಅಲ್ಲಿನ ತೀರ್ಮಾನವೇ ಪಕ್ಷ ಅಂತಿಮ. ಕಮಿಟಿ ಶೀಘ್ರವೇ ರಚನೆಯಾಗಲಿದ್ದು, ಮಂಗಳವಾರ ಅಥವಾ ಬುಧವಾರ ರಾಜ್ಯಾಧ್ಯಕ್ಷರ ನೇಮಕ ಆಗಲಿದೆ ಎಂದು ತಿಳಿಸಿದರು.

ತೆರೆ ಎಳೆಯಬೇಕೆಂದಿದ್ದೆ: ಎಚ್‌ಡಿಕೆ
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಆಪಾದನೆ ದೂರ ಮಾಡಲು ಅಂತಿಮ ತೆರೆ ಎಳೆಯಬೇಕು ಎಂದು ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಆದರೆ ಶಾಸಕರ ಒತ್ತಾಯಕ್ಕೆ ಮಣಿದು, ಅವರಿಗೆ ಗೌರವ ನೀಡಲು ನಾಯಕನಾಗಿ ಮುಂದುವರಿಯುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗಿರುವುದರಿಂದ ನೀವೇ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಯಬೇಕು ಎಂದು ಶಾಸಕರು ಒತ್ತಾಯಿಸಿದರು. ಶಾಸಕರಿಗೆ ನಮ್ಮಿಂದ ನೋವು ಉಂಟಾಗುವುದು ಬೇಡ. ಶಾಸಕರಿಗೆ ಗೌರವ ನೀಡಬೇಕು ಎಂದು ಒಪ್ಪಿಕೊಂಡಿದ್ದೇನೆ ಎಂದರು.

'ಕುಮಾರಣ್ಣ ನಾನು ಅಣ್ಣ-ತಮ್ಮ'
ಕುಮಾರಣ್ಣ ಹಾಗೂ ನನ್ನ ನಡುವೆ ರಾಜಕಾರಣದ ಬಾಂಧವ್ಯ ಮಾತ್ರವಲ್ಲ, ಅಣ್ಣ- ತಮ್ಮನ ಬಾಂಧವ್ಯ ಇದೆ.  ಜೆಡಿಎಸ್ ಬಿಟ್ಟು ನಾನು ರಾಜಕಾರಣ ಮಾಡುವುದೇ ಇಲ್ಲ. ಕಾಂಗ್ರೆಸ್ ಸೇರುವ ಮಾತೇ ಇಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. ಕಳೆದ 15 ವರ್ಷದಿಂದ ನಾನು ಹುಮ್ರಾಗೆ ಹೋಗುತ್ತಿದ್ದೇನೆ. ಈ ಬಾರಿಯೂ ಒಂದು ತಿಂಗಳು ಹೋಗಿದ್ದೆ. ಅಲ್ಲಿದ್ದಾಗಲೇ ಲೋಕಸಭೆ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಆಯಿತು. ಆ.13ಕ್ಕೆ ವಾಪಸ್ ಬಂದೆ. 19ಕ್ಕೆ ಪ್ರಚಾರ ಅಂತ್ಯ. ನಾಲ್ಕು ದಿನದಲ್ಲಿ ನಾನು ಏನು ಮಾಡಲು ಸಾಧ್ಯ ಎಂದು ಅಜ್ಮೀರ್‌ಗೆ ಹೋದೆ. ಅಷ್ಟೇ. ಇದನ್ನೇ ಕಾಂಗ್ರೆಸ್‌ನವರು ಬಳಸಿಕೊಂಡರು. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಯಾರೊಂದಿಗೂ ಮಾತನಾಡಿಲ್ಲ. ಇದೆಲ್ಲ ವಿರೋಧ ಪಕ್ಷದವರ ಸೃಷ್ಟಿ. ಬಿಜೆಪಿಯೊಂದಿಗೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಅಶೋಕ್ ಅವರು ಸ್ವಂತ ಆಸಕ್ತಿಗೆ ಬಂದು ಪ್ರಚಾರ ಮಾಡಿದರು ಅಷ್ಟೇ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement