ಪಂಪ ಪ್ರಶಸ್ತಿ ಆಯ್ತು, ಈಗ ಫೆಲೋಶಿಪ್ ನೀಡಲು ವಿಳಂಬ
ಕ.ಪ್ರ.ವಾರ್ತೆ, ಮೈಸೂರು, ಆ. 30-
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪ್ರಸಿದ್ಧ ವಿಮರ್ಶಕ ಪ್ರೊ. ಜಿ.ಎಚ್. ನಾಯಕರಿಗೆ ಪಂಪ ಪ್ರಶಸ್ತಿ ಘೋಷಿಸಿ 14 ತಿಂಗಳಾದರೂ ಪ್ರದಾನ ಮಾಡಿಲ್ಲ ಎಂಬುದರ ಬೆನ್ನ ಹಿಂದೆಯೇ ಕರ್ನಾಟಕ ಲಲಿತಕಲಾ ಅಕಾಡೆಮಿಯು ಒಂದೂವರೆ ವರ್ಷಗಳಾದರೂ ಕಲಾ ಬರಹಗಾರರಿಗೆ ಸಂಶೋಧನಾ ಫೆಲೋಶಿಪ್ ನೀಡದಿರುವುದು ಬೆಳಕಿಗೆ ಬಂದಿದೆ.
ಲಲಿತಕಲಾ ಅಕಾಡೆಮಿಯು 2011-12ನೇ ಸಾಲಿನ ಸಂಶೋಧನಾ ಫೆಲೋಶಿಪ್ ಅನ್ನು ತಲಾ 1 ಲಕ್ಷದಂತೆ ಐವರು ಕಲಾ ಬರಹಗಾರರಿಗೆ 2012ರ ಜ.7ರಂದು ಘೋಷಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಬರಹಗಾರರು 3 ತಿಂಗಳು, 6 ತಿಂಗಳು ಹಾಗೂ ವಾರ್ಷಿಕ ವರದಿಯನ್ನು ನೀಡಬೇಕು. ದೃಶ್ಯಕಲಾ ಅಧ್ಯಯನ ವಿಷಯದ ಸಾರಲೇಖ ಹಾಗೂ ಕರಾರುಪತ್ರ ತಲುಪಿದ ಕೂಡಲೇ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಂಗಡವಾಗಿಯೇ 25,000 ಪಡೆದಿರುವ ಬಗ್ಗೆ ಸಹಿ ಮಾಡಿಸಿಕೊಂಡಿದ್ದಾರೆ. ಫೆಲೋಶಿಪ್‌ಗೆ ಆಯ್ಕೆಯಾದ ಐವರು ಕಲಾವಿದರು ಸಾರಲೇಖ, ಕರಾರರುಪತ್ರ, ಮುಂಗಡಪತ್ರ ರಶೀತಿಯಲ್ಲದೇ 3 ತಿಂಗಳು ಹಾಗೂ 6 ತಿಂಗಳ ವರದಿ ಕಳುಹಿಸಿದ್ದಾರೆ. ಆದರೆ ಈವರೆಗೂ ನಯಾಪೈಸೆಯೂ ಬಂದಿಲ್ಲ.
ಕಲಾವಿದರಿಗೆ ಮೊದಲ ಹಾಗೂ ಎರಡನೇ ಕಂತು ತಲಾ 25,000 ನೀಡಬೇಕಿತ್ತು. ಕಲಾವಿದರು ಕ್ಷೇತ್ರ ಕಾರ್ಯ, ಪುಸ್ತಕ ಖರೀದಿ ಮತ್ತಿತರ ಬಾಬ್ತುಗಳಿಗೆ ಈವರೆಗೆ ತಮ್ಮ ಸ್ವಂತ ಹಣ ವ್ಯಯಿಸಿದ್ದಾರೆ.
ಈಡೇರದ ಸಿಎಂ ಭರವಸೆ: ಹಿಂದಿನ ಮುಖ್ಯಮಂತ್ರಿ ಚಿತ್ರಸಂತೆ ಉದ್ಘಾಟನೆಯ ಕಾಲಕ್ಕೆ ಕಲಾ ಬರಹಗಾರರ ಫೆಲೋಶಿಪ್ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
2011-12ನೇ ಸಾಲಿನಲ್ಲಿ ಹಂಪಿಯ ಡಾ.ಎಸ್.ಸಿ. ಪಾಟೀಲ್, ಗುಲ್ಪರ್ಗದ ಡಾ. ಶಿವಾನಂದ ಬಂಟನೂರು, ಡಾ.ಪಿ. ಪರರಶುರಾಮ, ಬೆಂಗಳೂರಿನ ಜಿ.ಜಿ. ಚಿಂತಾಮಣಿ ಹಾಗೂ ಕೃಷ್ಣವೇಣಿ ಅವರಿಗೆ ಫೆಲೋಶಿಪ್ ಘೋಷಿಸಲಾಗಿತ್ತು.
ಹಿಂದಿನ ಎರಡು ವರ್ಷಗಳದ್ದು ಬಾಕಿ: 2011-12ನೇ ಸಾಲಿನ ಐವರು ಕಲಾ ಬರಹಗಾರರು ಮಾತ್ರವಲ್ಲದೇ 2010-11ರಲ್ಲಿ ಫೆಲೋಶಿಪ್ ಘೋಷಣೆಯಾದ ತಲಾ ಐವರು ಕಲಾ ಬರಹಗಾರರಿಗೂ ಇದುವರೆಗೆ ಕೇವಲ 50,000 ಮಾತ್ರ ಬಂದಿದೆ. ಈ ಸಾಲಿನ ಐವರಲ್ಲಿ ಮಂಗಳೂರಿನ ಇರ್ಫಾನ್, ಬೆಂಗಳೂರಿನ ಎಂ.ಜಿ. ದೊಡ್ಡಮನಿ, ಗುಲ್ಬರ್ಗದ ಮಲ್ಲಿಕಾರ್ಜುನ ಬಾಗೋಡಿ, ಮೋಹನರಾವ್ ಪಾಂಚಾಳ ಸೇರಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ್ದು: ಈ ಕಲಾ ಬರಹಗಾರರು ಈ ಬಗ್ಗೆ ಲಲಿತಕಲಾ ಅಕಾಡೆಮಿಯಲ್ಲಿ ವಿಚಾರಿಸಿದಾಗ ಫೆಲೋಶಿಪ್ ಬಿಡುಗಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದೆ.
ಆದ್ದರಿಂದ ಆ ಇಲಾಖೆಯು ಆಯುಕ್ತರಿಗೆ ಮನವಿಪತ್ರ ನೀಡಲು ಸೂಚಿಸಿದ್ದರು. ಅದರಂತೆ ಈ ವರ್ಷದ ಮಾ.18 ರಂದು ಈ ಎಲ್ಲ ಕಲಾ ಬರಹಗಾರರು ಆಯುಕ್ತರಿಗೆ ಮನವಿಪತ್ರ ನೀಡಿದರು. ಆದರೆ ಇಲ್ಲಿಯವರೆಗೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮತ್ತೆ ಲಲಿತಕಲಾ ಅಕಾಡೆಮಿಯನ್ನು ಸಂಪರ್ಕಿಸಿದರೆ ಕೇವಲ ಹಾರಿಕೆಯ ಉತ್ತರಗಳು ಮಾತ್ರ ಸಿಗುತ್ತಿವೆ. ಸ್ವತಃ ಕಲಾವಿದೆಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತಕ್ಷಣ ಈ ಬಗ್ಗೆ ಗಮನಹರಿಸಿ, ಕಲಾವಿದರಿಗೆ ಫೆಲೋಶಿಪ್ ಬಿಡುಗಡೆಗೆ ಕ್ರಮಕೈಗೊಳ್ಳಬೇಕು.
-ಅಂಶಿ ಪ್ರಸನ್ನಕುಮಾರ್